ಉತ್ತರ ಭಾರತದ ರಾಜ್ಯಗಳಾದ ಒಡಿಶಾ, ಬಿಹಾರ, ಛತ್ತೀಸ್ ಗಢ, ಜಾರ್ಖಂಡ್, ಪಶ್ಚಿಮ ಬಂಗಾಳ, ಅಸ್ಸಾಂ, ನೇಪಾಳ ಮೊದಲಾದ ಕಡೆಗಳಿಂದ ಕಾರ್ಮಿಕರನ್ನು ಬೆಂಗಳೂರಿಗೆ ಸಾಗಿಸಿ ಅವರನ್ನು ಒತ್ತಾಯಪೂರ್ವಕವಾಗಿ ಲೈಂಗಿಕ ವ್ಯಾಪಾರ, ಭಿಕ್ಷೆ ಬೇಡುವುದು, ಅತ್ಯಂತ ಕಠಿಣ ಕೆಲಸಗಳಿಗೆ ದೂಡಲಾಗುತ್ತಿದೆ. ಇನ್ನು ಕೆಲವರನ್ನು ಮನೆಕೆಲಸಗಳಿಗೆ ಮತ್ತು ಕೃಷಿ ಕೆಲಸಗಳಿಗೆ ಹಚ್ಚಲಾಗುತ್ತಿದೆ. ತಾವಿರುವ ಪ್ರದೇಶದಲ್ಲಿ ಕೆಲಸಗಳಿಗೆ ಕೊರತೆ, ತೀವ್ರ ಬರಗಾಲದಿಂದ ಜೀವನ ನಡೆಸಲು ಸಾಧ್ಯವಾಗದೆ ಬೆಂಗಳೂರಿಗೆ ಕೆಲಸ ಹುಡಿಕಿಕೊಂಡು ಬರುವ ಜನರು ಇಲ್ಲಿ ಇನ್ನಷ್ಟು ಕಷ್ಟದ ಕೂಪಕ್ಕೆ ಬಲಿಯಾಗಬೇಕಾಗುತ್ತದೆ. ಅನೇಕ ಮಹಿಳೆಯರು ಮತ್ತು ಹೆಣ್ಣು ಮಕ್ಕಳ ವಿರುದ್ಧ ಲೈಂಗಿಕ ದೌರ್ಜನ್ಯ, ಶೋಷಣೆ ನಡೆಯುತ್ತಿವೆ. ಇಲ್ಲಿಗೆ ಬಂದ ಮೇಲೆ ಇಲ್ಲಿಯೂ ಇರಲು ಸಾಧ್ಯವಾಗದೆ, ಅತ್ತ ತಮ್ಮೂರಿಗೂ ಹೋಗಲು ಸಾಧ್ಯವಾಗದ ತ್ರಿಶಂಕು ಸ್ಥಿತಿ ಕಾರ್ಮಿಕರದ್ದು.