ಚುನಾವಣೆಗೆ ನಿಲ್ಲಲ್ಲ; ಸಕ್ರಿಯ ರಾಜಕಾರಣ ಬಿಡಲ್ಲ: ಶ್ರೀನಿವಾಸ ಪ್ರಸಾದ್

ಇನ್ನೆಂದೂ ತಾವು ಚುನಾವಣೆಗೆ ನಿಲ್ಲುವುದಿಲ್ಲ. ಆದರೆ ಸಕ್ರಿಯ ರಾಜಕಾರಣದಿಂದ ದೂರವಾಗಲ್ಲ ಎಂದು ಮಾಜಿ ಸಚಿವ ಶ್ರೀನಿವಾಸ ಪ್ರಸಾದ್ ಹೇಳಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನಂಜನಗೂಡು: ಇನ್ನೆಂದೂ ತಾವು ಚುನಾವಣೆಗೆ ನಿಲ್ಲುವುದಿಲ್ಲ. ಆದರೆ ಸಕ್ರಿಯ ರಾಜಕಾರಣದಿಂದ ದೂರವಾಗಲ್ಲ ಎಂದು ಮಾಜಿ ಸಚಿವ ಶ್ರೀನಿವಾಸ ಪ್ರಸಾದ್ ಹೇಳಿದ್ದಾರೆ.

ನಂಜನಗೂಡು ಉಪ ಚುನಾವಣೆಯಲ್ಲಿನ ಸೋಲಿನ ಬಳಿಕ ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ, ಚುನಾವಣಾ ರಾಜಕೀಯ ತಾವು ನಿವೃತ್ತರಾಗುತ್ತಿದ್ದೇನೆ. ಆದರೆ ಸಕ್ರಿಯ ರಾಜಕಾರಣದಿಂದ ದೂರವಾಗಲ್ಲ ಎಂದು  ಹೇಳಿದ್ದಾರೆ. ಸ್ವಾಭಿಮಾನಕ್ಕೆ ಧಕ್ಕೆ ಬಂದ ಹಿನ್ನಲೆಯಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದೆ. ಉಪ ಚುನಾವಣೆ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಸ್ವಾಭಿಮಾನದ ಬಿಸಿ ಮುಟ್ಟಿಸಿದ್ದೇನೆ ಎಂಬ ಸಂತೋಷ ತಮಗಿದೆ. ಜನ ನನ್ನ  ಸ್ವಾಭಿಮಾನವನ್ನು ಮೆಚ್ಚಿದ್ದಾರೆ. ಹೀಗಾಗಿ ನನಗೆ ಮತ ನೀಡಿ ಮತದಾರರಿಗೆ ಅಭಿನಂದನೆ ತಿಳಿಸುತ್ತೇನೆ ಎಂದು ಹೇಳಿದರು.

ಸರ್ಕಾರದ ವಿರುದ್ಧ ಶ್ರೀನಿವಾಸ ಪ್ರಸಾದ್ ಮತ್ತೆ ವಾಗ್ದಾಳಿ

ಇದೇ ವೇಳೆ ಸಿಎಂ ಸಿದ್ದರಾಮಯ್ಯ ಮತ್ತು ರಾಜ್ಯ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ ಶ್ರೀನಿವಾಸ ಪ್ರಸಾದ್ ಅವರು, ಉಪ ಚುನಾವಣೆ ಗೆಲ್ಲುವ ಸಲುವಾಗಿ ಸಿಎಂ ಸಿದ್ದರಾಮಯ್ಯ ಆಡಳಿತ ಯಂತ್ರವನ್ನು  ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿದರು. ಮತದಾನಕ್ಕೂ ಕೊನೆಯ ಮೂರು ದಿನಗಳಲ್ಲಿ ಇಡೀ ಸರ್ಕಾರವೇ ನಂಜನಗೂಡಿನಲ್ಲಿ ನೆಲೆಯೂರಿತ್ತು. ಇಡೀ ಪೊಲೀಸ್ ಇಲಾಖೆಯನ್ನು ಸಿದ್ದರಾಮಯ್ಯ ದುರ್ಬಳಕೆ  ಮಾಡಿಕೊಳ್ಳುವ ಮೂಲಕ ದುರ್ಬಳಕೆಯಲ್ಲೂ ಗಿನ್ನಿಸ್ ದಾಖಲೆ ನಿರ್ಮಿಸಿದ್ದಾರೆ. ಹಣದ ಬಲ ಮತ್ತು ಅಧಿಕಾರದ ಬಲದಿಂದಾಗಿ ಕಾಂಗ್ರೆಸ್ ಜಯ ಸಾಧಿಸಿದೆ.

2 ಲಕ್ಷ ಮತದಾರರ ಪೈಕಿ ಬರೊಬ್ಬರಿ 1 ಲಕ್ಷದ 20 ಸಾವಿರ ಜನಕ್ಕೆ ಹಣ ಹಂಚಿಕೆ ಮಾಡಿದ್ದಾರೆ. ಕೆಂಪಯ್ಯರಿಂದ ಪೊಲೀಸ್ ಇಲಾಖೆ ದುರುಪಯೋಗ ಪಡಿಸಿಕೊಂಡಿದ್ದು, ನೋಟು ಹಂಚಿಕೆ ಮಾಡುವಾಗ ಸಂಸದರೊಬ್ಬರ ಪಿಎ  ಸಿಕ್ಕಿಬಿದ್ದಿದ್ದು, ಕಾಂಗ್ರೆಸ್ ಪಕ್ಷದ ಭ್ರಷ್ಟಾಚಾರಕ್ಕೆ ಹಿಡಿದ ಕನ್ನಡಿಯಾಗಿದೆ. ಸಿಎಂ ಸಿದ್ದರಾಮಯ್ಯ ಮತದಾನದ ಪಾವಿತ್ರ್ಯತೆ ಹಾಳು ಮಾಡಿದ್ದಾರೆ ಎಂದು ಶ್ರೀನಿವಾಸ್ ಪ್ರಸಾದ್ ಕಿಡಿಕಾರಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com