ಇನ್ನೂ ಜಾರಿಯಾಗದ ಟಿಕೆಟ್ ದರ ನಿಗದಿ ಆದೇಶ: ಚಿತ್ರಮಂದಿರಗಳಿಗೆ ಸುಗ್ಗಿಯೋ ಸುಗ್ಗಿ

ಮಲ್ಟಿಫ್ಲೆಕ್ಸ್ ಗಳಲ್ಲಿ 200 ರು ಟಿಕೆಟ್ ದರ ನಿಗದಿ ಪಡಿಸಿರುವ ಸರ್ಕಾರದ ಆದೇಶಕ್ಕೆ ಸಿಎಂ ಸಿದ್ದರಾಮಯ್ಯ ಸಹಿ ಮಾಡಿದ್ದು ಗುರುವಾರ ಬೆಳಗ್ಗೆ ಆದೇಶದ ಪ್ರತಿ ..
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ಮಲ್ಟಿಫ್ಲೆಕ್ಸ್ ಗಳಲ್ಲಿ 200 ರು ಟಿಕೆಟ್ ದರ ನಿಗದಿ ಪಡಿಸಿರುವ ಸರ್ಕಾರದ ಆದೇಶಕ್ಕೆ ಸಿಎಂ ಸಿದ್ದರಾಮಯ್ಯ ಸಹಿ ಮಾಡಿದ್ದು ಗುರುವಾರ ಬೆಳಗ್ಗೆ ಆದೇಶದ ಪ್ರತಿ ಚಿತ್ರಮಂದಿರಗಳ ಮಾಲಿಕರ ಕೈಗೆ ಸಿಗಲಿದೆ ಎಂದು ಹೇಳಲಾಗಿತ್ತು. 
ಆದರೆ ಟಿಕೆಟ್ ದರ ನಿಗದಿ ಆದೇಶದ ಪ್ರತಿ ಇನ್ನೂ ಕೈ ಸೇರಿಲ್ಲ. ಹೀಗಾಗಿ ಚಿತ್ರ ಮಂದಿರಗಳು ಮತ್ತು ಮಲ್ಟಿಫ್ಲೆಕ್ಸ್ ಗಳು ಬಾಹುಬಲಿ ಸಿನಿಮಾಗೆ ಮನಸ್ಸೋ ಇಚ್ಚೆ ದರ ವಿಧಿಸುತ್ತಿವೆ, ಸುಮಾರು 1 ಸಾವಿರ ರುಪಾಯಿವರೆಗೆ ಒಂದು ಟಿಕೆಟ್ ಬೆಲೆ ನಿಗದಿ ಮಾಡಲಾಗಿದೆ. 
ಇದೇ ವೇಳೆ ಕನ್ನಡೇತರ ಚಿತ್ರಗಳಿಗೆ ಟಿಕೆಟ್ ದರದ ಮೇಲೆ ಹೆಚ್ಚುವರಿ ತೆರಿಗೆ ವಿಧಿಸುವ ಪ್ರಸ್ತಾವನೆ ಕೂಡ ಸರ್ಕಾರದ ಮುಂದಿದೆ. 
ರಾಜ್ಯದಾದ್ಯಂತ ಎಲ್ಲ ಚಿತ್ರಮಂದಿರಗಳಲ್ಲಿ ಟಿಕೆಟ್‌ ದರ ಗರಿಷ್ಠ ರು. 200ಕ್ಕೆ ನಿಗದಿ ಮಾಡಿ, ಏಪ್ರಿಲ್ 27ರಿಂದ ಜಾರಿಗೆ ಬರುವಂತೆ ಸರ್ಕಾರ ಆದೇಶ ಹೊರಡಿಸಲಿದೆ. ಗುರುವಾರ ಆದೇಶ ಪ್ರತಿ ಕೈಸೇರಲಿದೆ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ ಗೋವಿಂದು ಎಂದು ಹೇಳಿದ್ದರು. ಆದರೆ ಗುರುವಾರ ಸಂಜೆಯವರೆಗೂ ಸರ್ಕಾರದ ಆದೇಶ ಪ್ರತಿ ಅವರಿಗೆ ದೊರಕಿಲ್ಲ.
ಗುರುವಾರ ಬೆಳಿಗ್ಗೆ ಹತ್ತು ಗಂಟೆಗೆ ಸರ್ಕಾರಿ ಆದೇಶದ ಪ್ರತಿಯನ್ನು ನೀಡುತ್ತೇವೆ ಎಂದು ಸಂಬಂಧಪಟ್ಟ ಅಧಿಕಾರಿಗಳು ಖುದ್ದಾಗಿ ಹೇಳಿದ್ದರು. ಆದರೆ ಬೆಳಗ್ಗೆಯಿಂದ ಮಧ್ಯಾಹ್ನ ಮೂರು ಗಂಟೆಯವರೆಗೂ ವಿಧಾನಸೌಧದಲ್ಲಿ ಕಾದಿದ್ದರೂ ನಮಗೆ ಆದೇಶ ಪ್ರತಿ ಸಿಕ್ಕಿಲ್ಲ. 
ಆದೇಶದ ಪ್ರತಿಯನ್ನು  ಅನುಮೋದನೆಗಾಗಿ ಹಣಕಾಸು ಇಲಾಖೆಗೆ ವರ್ಗಾಯಿಸಲಾಗಿದೆ. ಹಣಕಾಸು ಇಲಾಖೆ ಶೀಘ್ರವೇ ಇದಕ್ಕೆ ಅನುಮೋದನೆ ನೀಡಲಿದೆ ಎಂದು ಮಾಹಿತಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಂ. ಲಕ್ಷ್ಮಿ ನಾರಾಯಣ ಹೇಳಿದ್ದಾರೆ.
ಆದೇಶದ ಪ್ರತಿ ಯೋಜನಾ ವಿಭಾಗದಲ್ಲಿದೆ, ಹಣಕಾಸು ವಿಭಾಗದ ಒಪ್ಪಿಗೆ ಪಡೆದುಕೊಳ್ಳಬೇಕು... ಹೀಗೆ ವಿವಿಧ ಸಬೂಬು ನೀಡುತ್ತಿದ್ದಾರೆ. ಈ ವಿಳಂಬಕ್ಕೆ ಅಧಿಕಾರಿಗಳೇ ಹೊಣೆಗಾರರು’ ಎನ್ನುವ ಅವರು, ‘ಶುಕ್ರವಾರ ಅಥವಾ ಶನಿವಾರ ಆದೇಶ ಪ್ರತಿ ಕೈ ಸೇರುವ ನಿರೀಕ್ಷೆ ಇದೆ’ ಎಂದರು.  
ಗರಿಷ್ಠ ಪ್ರವೇಶ ದರ ನೀತಿ ಏಪ್ರಿಲ್ 27ರಿಂದಲೇ ಜಾರಿಗೆ ಬರಲಿದೆ ಎಂದು ಹೇಳಿದ್ದು ಪ್ರೇಕ್ಷಕರಲ್ಲಿ ಗೊಂದಲಕ್ಕೆ ಕಾರಣವಾಗಿದೆ. ಸರ್ಕಾರದ ಆದೇಶದ ಪ್ರತಿ ಇನ್ನೂ ಚಿತ್ರಮಂದಿರಗಳ ಮಾಲೀಕರ ಕೈಗೆ ಸಿಕ್ಕಿಲ್ಲ. ಆದ್ದರಿಂದ ಚಿತ್ರಮಂದಿರಗಳು ಗುರುವಾರವೂ ಸಿನಿಮಾ ಟಿಕೆಟ್‌ಗಳನ್ನು ಸಾಮಾನ್ಯಕ್ಕಿಂತ ಹಲವು ಪಟ್ಟು ಹೆಚ್ಚಿನ ಬೆಲೆಗಳಿಗೆ ಮಾರಾಟ ಮಾಡಿವೆ.
ಟಿಕೆಟ್ ದರ ನಿಗದಿಯ ಸರ್ಕಾರದ ಆದೇಶ ಪ್ರತಿ ಇನ್ನೂ ಸಿಕ್ಕಿಲ್ಲವಾದ್ದರಿಂದ ಕನ್ನಡ ಚಿತ್ರಗಳ ಮೇಲೆ ಪರಿಣಾಮ ಬೀರುತ್ತಿದೆ. ವಾರಂತ್ಯದಲ್ಲಿ ಸಿನಿಮಾ ಬಿಡುಗಡೆ ಮಾಡುವುದು ಕಷ್ಟವಾಗುತ್ತಿದೆ ಎಂದು ನಿರ್ದೇಶಕ ಎಂ. ಗಿರಿರಾಜ್ ಹೇಳಿದ್ದಾರೆ. ಬಾಹುಬಲಿ-2 ಸಿನಿಮಾ ಬಿಡುಗಡೆಗಾಗಿ ಕನ್ನಡದ ಉತ್ತಮ ಚಿತ್ರಗಳನ್ನು ಥಿಯೇಟರ್ ಗಳಿಂದ ತೆಗೆದು ಹಾಕುತ್ತಿರುವುದು ದುರಾದೃಷ್ಟಕರ ಎಂದು ಅವರು ಬೇಸರ ವ್ಯಕ್ತ ಪಡಿಸಿದ್ದಾರೆ.ಬಾಹುಬಲಿ ಸಿನಿಮಾಗಾಗಿ ಕನ್ನಡದ ರಾಗ ಸಿನಿಮಾವನ್ನು ಥಿಯೇಟರ್ ನಿಂದ ಎತ್ತಂಗಡಿ ಮಾಡಲಾಗಿದೆ ಎಂದು ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com