ನಮ್ಮಲ್ಲಿರುವ ಸ್ಥಳದಲ್ಲಿಯೇ ಪಾರ್ಕಿಂಗ್ ವ್ಯವಸ್ಥೆ ಮಾಡುತ್ತೇವೆ: ಬಿಎಂಆರ್'ಸಿಎಲ್

ಮೆಟ್ರೋ ನಿಲ್ದಾಣದ ಬಳಿ ಪಾರ್ಕಿಂಗ್ ವ್ಯವಸ್ಥೆಗೆ ಜಾಗ ಸಿಗದ ಕಾರಣ, ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (ಬಿಎಂಆರ್'ಸಿಎಲ್)ಗೆ ತಲೆನೋವೊಂದು ಎದುರಾಗಿದೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಮೆಟ್ರೋ ನಿಲ್ದಾಣದ ಬಳಿ ಪಾರ್ಕಿಂಗ್ ವ್ಯವಸ್ಥೆಗೆ ಜಾಗ ಸಿಗದ ಕಾರಣ, ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (ಬಿಎಂಆರ್'ಸಿಎಲ್)ಗೆ ತಲೆ ನೋವೊಂದು ಎದುರಾಗಿದೆ.

ನಾಯಂಡಹಳ್ಳಿ ಮತ್ತು ಬೈಯಪ್ಪನಹಳ್ಳಿಯನ್ನು ಸಂಪರ್ಕಿಸುವ ಪೂರ್ವ-ಪಶ್ಚಿಮ ಕಾರಿಡಾರ್'ನಲ್ಲಿ 17 ನಿಲ್ದಾಣಗಳಿದ್ದು, ನಾಗಸಂದ್ರ ಮತ್ತು ಯಲಚೆನಹಳ್ಳಿ ಉತ್ತರ-ದಕ್ಷಿಣ ಕಾರಿಡಾರ್'ನಲ್ಲಿ ಒಟ್ಟು 23 ನಿಲ್ದಾಣಗಳಿವೆ. ಪೂರ್ವ-ಪಶ್ಚಿಮ ಕಾರಿಡಾರ್ ನಲ್ಲಿ ಬರುವ ಅರ್ಧದಷ್ಟು ಮೆಟ್ರೋ ನಿಲ್ದಾಣಗಳಲ್ಲಿ ಪಾರ್ಕಿಂಗ್ ವ್ಯವಸ್ಥೆಯೇ ಇಲ್ಲ. ಇದರಿಂದ ಹಲವು ಪ್ರಯಾಣಿಕರು ಸಮಸ್ಯೆಯನ್ನು ಎದುರಿಸುತ್ತಿದ್ದಾರೆ.

ನಾಯಂಡಹಳ್ಳಿ ಮೆಟ್ರೋ ನಿಲ್ದಾಣದ ಬಳಿ ಸಿಕ್ಕ ಸ್ಥಳದಲ್ಲಿ ಮೆಟ್ರೋ ಅಧಿಕಾರಿಗಳು ಪಾವತಿ ಪಾರ್ಕಿಂಗ್ ವ್ಯವಸ್ಥೆಯನ್ನು ಮಾಡುತ್ತಿದ್ದಾರೆ. ಈ ಸ್ಥಳದಲ್ಲಿ 100 ವಾಹನಗಳನ್ನು ಪಾರ್ಕಿಂಗ್ ಮಾಡಬಹುದಾಗಿದೆ. ಒಂದು ದಿನದ ಪಾರ್ಕಿಂಗ್'ಗೆ ಇಲ್ಲಿನ ಗುತ್ತಿಗೆದಾರರು ನಾಲ್ಕು ಚಕ್ರದ ವಾಹನಗಳಿಗೆ ರೂ.60 ಹಾಗೂ ದ್ವಿಚಕ್ರ ವಾಹನಗಳಿಗೆ ರೂ.30 ಪಡೆದುಕೊಳ್ಳುತ್ತಿದ್ದಾರೆ. ಪಾವತಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಿದ್ದರೂ ಜನರು ಮಾತ್ರ ರಸ್ತೆ ಬದಿ, ಪಾದಚಾರಿ ಮಾರ್ಗ, ಮೆಟ್ರೋ ನಿಲ್ದಾಣದ ಹಿಂಬದಿಗಳಲ್ಲಿಯೇ ತಮ್ಮ ವಾಹನಗಳನ್ನು ಪಾರ್ಕಿಂಗ್ ಮಾಡುತ್ತಿದ್ದಾರೆ.

ಸರ್ ಎಂ. ವಿಶ್ವೇಶ್ವರಾಯ ಮೆಟ್ರೋ ನಿಲ್ದಾಣ (ಸೆಂಟ್ರಲ್ ಕಾಲೇಜು), ಮೈಸೂರು ಬ್ಯಾಂಕ್ ಸರ್ಕಲ್ ಮತ್ತು ಕೆ.ಆರ್. ಸರ್ಕಲ್'ನಲ್ಲಿ ವಾಹನಗಳನ್ನು ನಿಲ್ಲಿಸಲಾಗುತ್ತಿದ್ದು, ಇದು ಸಮಸ್ಯೆಯನ್ನು ಎದುರು ಮಾಡುತ್ತಿದೆ.

ಈ ಬಗ್ಗೆ ಬಿಎಂಆರ್ ಸಿಎಲ್ ಅಧಿಕಾರಿ ಯು.ವಿ. ವಸಂತ್ ರಾವ್ ಅವರು ಪ್ರತಿಕ್ರಿಯೆ ನೀಡಿದ್ದು, ಪೂರ್ವ-ಪಶ್ಚಿಮ ಕಾರಿಡಾರ್'ನಲ್ಲಿ  ಎಲ್ಲಿ ನಮಗೆ ಜಾಗ ಸಿಗುತ್ತದೆಯೋ ಅಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗುತ್ತಿದೆ. ಇನ್ನು ಉತ್ತರ-ದಕ್ಷಿಣ ಕಾರಿಡಾನ್ ನಲ್ಲಿ ಪೀಣ್ಯ ಮತ್ತು ಮಂತ್ರಿ ಸ್ಕ್ವೇರ್ ಸಂಪಿಗೆ ರಸ್ತೆ ನಿಲ್ದಾಣಗಳ ಬಳಿ ಪಾರ್ಕಿಂಗ್ ವ್ಯವಸ್ಥೆಗೆ ಜಾಗವಿದೆ. ಈಗಾಗಲೇ ಐದು ಕಡೆ ಪಾರ್ಕಿಂಗ್ ಗೆ ಸ್ಥಳಗಳು ದೊರಕಿದ್ದು, ಶೀಘ್ರದಲ್ಲಿಯೇ ಟೆಂಡರ್ ಕರೆಯಲಾಗುತ್ತದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com