ಐಟಿ ಅಧಿಕಾರಿಗಳಿಂದ ಗುಜರಾತ್ ಶಾಸಕರಿಗೆ ಬೆದರಿಕೆ: ಅಮಿತ್ ಶಾ ವಿರುದ್ಧ ಸಿದ್ದರಾಮಯ್ಯ ಕಿಡಿ

ರೆಸಾರ್ಟ್ ನಲ್ಲಿ ವಾಸ್ತವ್ಯ ಹೂಡಿರುವ ಗುಜರಾತ್ ಶಾಸಕರಿಗೆ ಐಟಿ ಅಧಿಕಾರಿಗಳು ಬೆದರಿಕೆಯೊಡ್ಡಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಆರೋಪಿಸಿದ್ದಾರೆ...
ಸಹೋದರ ಡಿಕೆಶಿ ಮನೆಯಿಂದ ತೆರಳುತ್ತಿರುವ ಸಂಸದ ಡಿ.ಕೆ ಸುರೇಶ್
ಸಹೋದರ ಡಿಕೆಶಿ ಮನೆಯಿಂದ ತೆರಳುತ್ತಿರುವ ಸಂಸದ ಡಿ.ಕೆ ಸುರೇಶ್
ಬೆಂಗಳೂರು: ರೆಸಾರ್ಟ್ ನಲ್ಲಿ ವಾಸ್ತವ್ಯ ಹೂಡಿರುವ ಗುಜರಾತ್ ಶಾಸಕರಿಗೆ ಐಟಿ ಅಧಿಕಾರಿಗಳು ಬೆದರಿಕೆಯೊಡ್ಡಿದ್ದಾರೆ ಎಂದು ಸಿಎಂ  ಸಿದ್ದರಾಮಯ್ಯ ಆರೋಪಿಸಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಐಟಿ ಇಲಾಖೆಯನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ನಾನು ಯಾವುದೇ ಮನೆಯ ಮೇಲಿನ ದಾಳಿ ಅಥವಾ ಶೋಧ ನಡೆಸುವುದರ ವಿರುದ್ಧವಿಲ್ಲ. ಆದರೆ, ಕೇಂದ್ರ ಸರ್ಕಾರ ಮತ್ತು ಐಟಿ ಇಲಾಖೆ ಆಯ್ಕೆ ಮಾಡಿಕೊಂಡ ಸಮಯ ಮತ್ತು ಉದ್ದೇಶದ ಬಗ್ಗೆ ವಿರೋಧವಿದೆ’ ಎಂದಿರುವ ಅವರು, ನಗರದ ಹೊರವಲಯದಲ್ಲಿ ಗುಜಾರಾತ್ ಶಾಸಕರು ತಂಗಿರುವ ರೆಸಾರ್ಟ್ ಮೇಲೆ ಐಟಿ ಅಧಿಕಾರಿಗಳು ದಾಳಿ ಮಾಡುವ ಉದ್ದೇಶವೇನಿತ್ತು ಎಂದು ಪ್ರಶ್ನಿಸಿದ್ದಾರೆ.
ಗನ್ ಪಾಯಿಂಟ್ ನಿಂದ ಗುಜರಾತ್ ಶಾಸಕರನ್ನು ಬೆದರಿಸಿರುವ ಐಟಿ ಅಧಿಕಾರಿಗಳು ಅವರಿಗೆ ವಾಪಸ್ ಗುಜರಾತ್ ಗೆ ತೆರಳುವಂತೆ ಹೆದರಿಸಿದ್ದಾರೆ ಮತ್ತು ತಮ್ಮ ನಿಷ್ಠೆಯನ್ನು ಬದಲಿಸಲು ಪ್ರತಿ ಶಾಸಕರಿಗೆ 15 ಕೋಟಿ ರು ಹಣದ ಆಮೀಷ ತೋರಿದ್ದಾರೆ ಎಂದು ಸಿಎಂ ದೂರಿದ್ದಾರೆ. 
ಅಮಿತ್ ಶಾ ಆದೇಶದ ಮೇರೆಗೆ ವಿವಿಧ ಭಾಗಗಳಲ್ಲಿ ಐಟಿ ದಾಳಿ ಮುಂದುವರಿದಿದೆ. ಇದು ಕೇಂದ್ರ ಬಿಜೆಪಿ ಸರ್ಕಾರದ ಪಿತೂರಿ ಎಂದು ಸಿಎಂ ವಾಗ್ದಾಳಿ ನಡೆಸಿದ್ದಾರೆ.
ಐಟಿ ದಾಳಿಯ ವೇಳೆ ಸ್ಥಳೀಯ ಪೊಲೀಸರ ಬದಲಿಗೆ ಸಿಆರ್‌ಪಿಎಫ್‌ನ ಸಿಬ್ಬಂದಿಯನ್ನು ಕರೆತಂದು ದಾಳಿ ನಡೆಸಲಾಗಿದೆ. ಈ ದಾಳಿ ನಡೆಸಿರುವುದು ರಾಜಕೀಯ ಪ್ರೇರಿತ. ಇದು ಪ್ರಜಾ ಪ್ರಭುತ್ವ ಹಾಗೂ ಒಕ್ಕೂಟ ವ್ಯವಸ್ಥೆಗೆ ಮಾರಕ ಎಂದು ಸಿಎಂ ಹೇಳಿದ್ದಾರೆ.
ಇನ್ನೂ ಸಚಿವ ಡಿ.ಕೆ ಶಿವಕುಮಾರ್ ಗೆ ಸೇರಿದ ವಿವಿಧ ಸ್ಥಳಗಳಲ್ಲಿ ಐಟಿ ಅಧಿಕಾರಿಗಳು ಶನಿವಾರವೂ ದಾಳಿ ಮುಂದುವರಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com