ಮಡಿಕೇರಿ: ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಟಿ.ಪಿ ರಮೇಶ್ ಅವರು ವಿಧಾನ ಪರಿಷತ್ ಸದಸ್ಯೆಯೊಬ್ಬರ ಕೈಹಿಡಿದು ಅಸಭ್ಯವಾಗಿ ವರ್ತಿಸಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಮಡಿಕೇರಿಯಲ್ಲಿ ನಡೆದ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ರೇಷ್ಮೆ ಮಂಡಳಿ ಅಧ್ಯಕ್ಷ ಟಿ.ಪಿ. ರಮೇಶ್, ವೇದಿಕೆಯಲ್ಲಿದ್ದ ಶಾಸಕಿ ವೀಣಾ ಅಚ್ಚಯ್ಯ ಅವರ ಕೈ ಒತ್ತಿ ಹಿಡಿದಿದ್ದಾರೆ. ಈ ವೇಳೆ ಮುಜುಗರಕ್ಕೀಡಾದ ವೀಣಾ ಅಚ್ಚಯ್ಯ, ರಮೇಶ್ ಅವರ ಕೈಯ್ಯನ್ನು ಪಕ್ಕಕ್ಕೆ ಸರಿಸಿದ್ದಾರೆ.
ಈ ವಿಡಿಯೋ ಜಿಲ್ಲೆಯಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್. ಸೀತಾರಾಮ್ ಉಪಸ್ಥಿತಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದೆ. ಇನ್ನೂ ಈ ಬಗ್ಗೆ ಪ್ರತಿಕ್ರಿಯಿಸಿರುವ ಶಾಸಕಿ ವೀಣಾ ಅಚ್ಚಯ್ಯ ಟಿ.ಪಿ ರಮೇಶ್ ವರ್ತನೆಯಿಂದ ಬೇಸರವಾಗಿದೆ. ಸಾರ್ವಜನಿಕ ಸ್ಥಳದಲ್ಲಿ ಈ ರೀತಿ ವರ್ತನೆ ಸರಿಯಲ್ಲ,ಯಾವ ಭಾವನೆಯಿಂದ ಹಾಗೆ ಮಾಡಿದರೆಂದು ನನಗೆ ತಿಳಿದಿಲ್ಲ ಎಂದು ಹೇಳಿದ್ದಾರೆ.
ರಾಜಕೀಯವಾಗಿ ನಾವಿಬ್ಬರೂ ಒಟ್ಟಿಗೆ ಕೆಲಸ ಮಾಡಿದವರು. ಪ್ರತಿಯೊಬ್ಬ ಹೆಣ್ಣು ಮಕ್ಕಳನ್ನು ಗೌರವಿಸುವುದು ಎಲ್ಲರ ಕರ್ತವ್ಯ ಎಂದು ವೀಣಾ ಅಚ್ಚಯ್ಯ ಪ್ರತಿಕ್ರಿಯಿಸಿದ್ದಾರೆ.