ವನಿತಾ
ರಾಜ್ಯ
ವರದಕ್ಷಿಣೆ ಕಿರುಕುಳ: ಮೈಸೂರು ಕಾರ್ಪೋರೇಟರ್ ಪುತ್ರಿ ಬೆಂಗಳೂರಿನಲ್ಲಿ ಆತ್ಮಹತ್ಯೆ
ಮೈಸೂರು ಮಹಾನಗರ ಪಾಲಿಕೆಯ ಕಾರ್ಪೋರೇಟರ್ ಪುತ್ರಿ ಬೆಂಗಳೂರಿನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಬೆಂಗಳೂರು: ಮೈಸೂರು ಮಹಾನಗರ ಪಾಲಿಕೆಯ ಕಾರ್ಪೋರೇಟರ್ ಪುತ್ರಿ ಬೆಂಗಳೂರಿನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಮೈಸೂರಿನ ಕಾರ್ಪೋರೇಟರ್ ನಾಗಭೂಷಣ್ ಅವರ ಮಗಳು ವನಿತಾ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಯಾಗಿದ್ದು ಈಕೆ ಆರು ತಿಂಗಳ ಹಿಂದಷ್ಟೇ ತಮಿಳುನಾಡು ಮೂಲದ ಸಾಫ್ಟ್ ವೇರ್ ಇಂಜಿನಿಯರ್ ವಸಂತ್ ಅವರನ್ನು ವಿವಾಹವಾಗಿದ್ದರು.
ಬೆಂಗಳೂರಿನ ಹೆಚ್‍ಎಸ್‍ಆರ್ ಲೇಔಟ್ ನಲ್ಲಿದ್ದ ಗಂಡನ ಮನೆಯಲ್ಲಿ ವಾಸವಿದ್ದ ವನಿತಾ ನಿನ್ನೆ ಸಂಜೆ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಾಲ್ಕು ಪುಟಗಳ ಡೆತ್ ನೋಟ್ ಬರೆದಿರುವ ವನಿತಾ ಅತ್ತೆ ಗಾಯತ್ರಿ ನನಗೆ ವರದಕ್ಷಿಣೆ ತರುವಂತೆ ಪ್ರತಿನಿತ್ಯ ಪೀಡಿಸುತ್ತಿದ್ದರು ಎಂದು ಉಲ್ಲೇಖಿಸಿದ್ದಾರೆ. 'ಪ್ರತಿ ನಿತ್ಯವೂ ನನಗೆ ಕಿರುಕುಳ ನಿಡುತ್ತಿದ್ದ ಅತ್ತೆ ಸರಿಯಾಗಿ ಊಟ ತಿಂಡಿಯನ್ನು ಸಹ ನೀಡದೆ ಹಿಂಸೆ ಮಾಡುತ್ತಾರೆ.ಇದರಿಂದ ಬೇಸತ್ತು ನಾನು ಆತ್ಮಹತ್ಯೆಗೆ ಶರಣಾಗುತ್ತಿದ್ದೇನೆ' ಎಂದು ವನಿತಾ ಬರೆದುಕೊಂಡಿದ್ದಾರೆ.
ಪತಿ ವಸಂತ್ ಕಛೇರಿ ಮುಗಿಸಿ ಮನೆಗೆ ಬಂದಾಗ ಪತ್ನಿಯ ಆತ್ಮಹತ್ಯೆ ವಿಚಾರ ತಿಳಿದಿದೆ. ಅವರು ತಕ್ಷಣವೇ ಪೋಲೀಸರಿಗೆ ಮಾಹಿತಿ ನೀಡಿದ್ದು ಸ್ಥಳಕ್ಕೆ ಧಾವಿಸಿದ ಎಚ್ಎಸ್ಆರ್ ಠಾಣಾ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳಿಸಿದ್ದಾರೆ. ಪತಿ ವಸಂತ್ ಮತ್ತು ಅತ್ತೆ ಗಾಯತ್ರಿಯವರನ್ನು ವಶಕ್ಕೆ ಪಡೆದ ಪೋಲೀಸರು ತನಿಖೆ ಪ್ರಾರಂಭಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ