ಬಿಜೆಪಿಯ ಕೆಲ ನಾಯಕರಿಂದ ಕೋಮು ಗಲಭೆಗಳಿಗೆ ಪ್ರಚೋದನೆ: ರಾಮಲಿಂಗಾ ರೆಡ್ಡಿ

ರಾಜಕೀಯ ಲಾಭಕ್ಕಾಗಿ ಬಿಜೆಪಿಯ ಕೆಲ ನಾಯಕರು ರಾಜ್ಯದಲ್ಲಿ ಕೋಮು ಗಲಭೆಗಳಿಗೆ ಪ್ರಚೋದನೆ ನೀಡುತ್ತಿದ್ದಾರೆ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ....
ರಾಮಲಿಂಗಾ ರೆಡ್ಡಿ
ರಾಮಲಿಂಗಾ ರೆಡ್ಡಿ
Updated on: 
ಬೆಂಗಳೂರು: ರಾಜಕೀಯ ಲಾಭಕ್ಕಾಗಿ ಬಿಜೆಪಿಯ ಕೆಲ ನಾಯಕರು ರಾಜ್ಯದಲ್ಲಿ ಕೋಮು ಗಲಭೆಗಳಿಗೆ ಪ್ರಚೋದನೆ ನೀಡುತ್ತಿದ್ದಾರೆ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಅವರು ಮಂಗಳವಾರ ಆರೋಪಿಸಿದ್ದಾರೆ.
ಶಿರಸಿಯ ಗಲಭೆಗೆ ಸಂಬಂಧಿಸಿದಂತೆ ಇಂದು ವಿಕಾಸಸೌಧದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ರಾಮಲಿಂಗಾ ರೆಡ್ಡಿ ಅವರು, ರಾಜ್ಯದಲ್ಲಿ ನಡೆಯುತ್ತಿರುವ ಕೋಮು ಗಲಭೆಗಳಿಗೆ ಬಿಜೆಪಿಯೇ ನೇರ ಕಾರಣ. ಬಿಜೆಪಿಯ ಐದಾರು ಮುಖಂಡರು ಇದೇ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಇದು ನಾನು ಹೇಳುವುದಲ್ಲ. ಇತ್ತೀಚೆಗೆ ವೈರಲ್‌ ಆಗಿರುವ ಸಂಸದ ಪ್ರತಾಪ್‌ ಸಿಂಹ ಮತ್ತು ಈಶ್ವರಪ್ಪ ಅವರು ಮಾತನಾಡಿರುವ ವಿಡಿಯೋವೇ ಸಾಕ್ಷಿ ಎಂದರು. 
ಉತ್ತರ ಕನ್ನಡ ಜಿಲ್ಲೆಯಲ್ಲಿ ಬಿಜೆಪಿ ಉದ್ದೇಶಪೂರ್ವಕ ಗಲಾಟೆ ಮಾಡಿಸಿದೆ. ಬಿಜೆಪಿಯವರು ಬಾಯಿಗೆ ಬಂದಂತೆ ಮಾತನಾಡಬಾರದು. ಬಾಯಿಗೆ ಬಂದಂತೆ ಮಾತನಾಡಿ ಜನರನ್ನು ತಪ್ಪು ದಾರಿಗೆ ಎಳೆಯಬಾರದು ಎಂದು ಗೃಹ ಸಚಿವರು ಹೇಳಿದ್ದಾರೆ.
ಹನುಮ ಜಯಂತಿ, ಈದ್ ಮಿಲಾದ್ ಅನ್ನು ಒಟ್ಟಿಗೆ ಆಚರಿಸಲು ಮನವಿ ಮಾಡಿದ್ದರು. ಈ ಬಾರಿ ಹನುಮ ಜಯಂತಿ, ಈದ್ ಮಿಲಾದ್ ಒಂದೇ ದಿನ ಬಂದಿದ್ದರಿಂದ ಗಲಾಟೆಗೆ ಕಾರಣವಾಗಿತ್ತು. ಎರಡೂ ಕಡೆಯವರಿಗೆ ಅನುಮತಿ ನೀಡದಂತೆ ಪೊಲೀಸ್ ವರಿಷ್ಠಾಧಿಕಾರಿಗೆ ಸೂಚಿಸಿದ್ದೆ. ನಿಷೇಧಾಜ್ಞೆ ಜಾರಿಯಲ್ಲಿದ್ದಾಗ ಮೆರವಣಿಗೆ ನಡೆಸಬಾರದು ಎಂದು ಬಿಜೆಪಿಯವರಿಗೆ ಗೊತ್ತಿಲ್ವಾ? ಮೆರವಣಿಗೆ ಹೆಸರಲ್ಲಿ ಕೆಲ ಅಂಗಡಿಗಳನ್ನು ಹುಡುಕಿ, ಹುಡುಕಿ ಕಲ್ಲು ಎಸೆದಿದ್ದಾರೆ. ಇದೆಲ್ಲಾ ಬಿಜೆಪಿಯವರ ಚುನಾವಣಾ ರಾಜಕಾರಣ ಎಂದು ರಾಮಲಿಂಗಾ ರೆಡ್ಡಿ ವಾಗ್ದಾಳಿ ನಡೆಸಿದರು.
ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಪರೇಶ್ ಮೇಸ್ತ ಸಾವು ಸಂಭವಿಸಿದೆ. ವೈಯಕ್ತಿಕ ಕಾರಣಗಳಿಂದ ಸಾವನ್ನಪ್ಪಿದರೂ ಹಿಂದೂ ಎನ್ನುತ್ತಾರೆ. ನಾವೂ ಹಿಂದೂಗಳೇ ನಮಗೂ ಶ್ರದ್ಧಾಭಕ್ತಿ ಇದೆ. ಬೇಕಾದರೆ ಬಿಜೆಪಿಯವರು ನಾವು ಶ್ರೀರಾಮಸೇನೆಯವರು ಎಂದು ಹೇಳಿಕೊಳ್ಳಲಿ ಎಂದು ರಾಮಲಿಂಗಾರೆಡ್ಡಿ ವಾಗ್ದಾಳಿ ನಡೆಸಿದರು.
ಸಂಸದೆ ಶೋಭಾ ಕರಂದಾಜ್ಲೆ ಅವರು ತಾವೇ ವೈದ್ಯರೆಂದು ತಿಳಿದುಕೊಂಡಂತಿದೆ. ಹೊನ್ನಾವರದ ಯುವಕ ಪರೇಶ್ ಮೇಸ್ತ ಶವ ನೋಡಿದ ತಕ್ಷಣವೇ ಸುಳ್ಳು, ಸುಳ್ಳು ಹೇಳಿಕೆಗಳನ್ನು ನೀಡಿ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು. ಅಲ್ಲದೆ ಪೋಸ್ಟ್ ಮಾರ್ಟ್ಂ ವರದಿ ಬರಲಿ, ಪೋಸ್ಟ್ ಮಾರ್ಟ್ಂ ವರದಿಯಲ್ಲಿ ಕೊಲೆ ಎಂದು ಬಂದರೆ. ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ಸಚಿವರು ತಿಳಿಸಿದ್ದಾರೆ.
ಇನ್ನು ಪರೇಶ್ ಮೇಸ್ತ ಅನುಮಾನಾಸ್ಪದ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಸಹ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದು, ರಾಜಕೀಯ ಲಾಭಕ್ಕಾಗಿ ಬಿಜೆಪಿ ನಾಯಕರು ಹಿಂಸಾಚಾರದಲ್ಲಿ ತೊಡಗಿದ್ದಾರೆ. ಬಿಜೆಪಿ. ಹಿಂದೂ ಪರಿಷತ್ ಹಾಗೂ ಬಜರಂಗದಳ ಕರ್ನಾಟಕದ ಕರವಾಳಿ ಪ್ರದೇಶದಲ್ಲಿ ಹಿಂಸಾಚಾರಕ್ಕೆ ಪ್ರಚೋದನೆ ನೀಡುತ್ತಿದೆ ಎಂದು ಆರೋಪಿಸಿದ್ದಾರೆ.
ಕೋಮು ಗಲಭೆ ಸೃಷ್ಟಿಸುವುದೇ ಬಿಜೆಪಿ ಉದ್ದೇಶ ಎಂಬುದು ಸಂಸದ ಪ್ರತಾಪ್ ಸಿಂಹ ಹಾಗೂ ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಕೆ.ಎಸ್ ಈಶ್ವರಪ್ಪ ಅವರ ಹೇಳಿಕೆಯಿಂದಲೇ ಸ್ಪಷ್ಟವಾಗುತ್ತದೆ ಎಂದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com