ವಿವಾದಾಸ್ಪದ ಹೇಳಿಕೆಯಿಂದ ಮತ್ತೆ ಸುದ್ದಿಯಲ್ಲಿ ಬಿಜೆಪಿ ನಾಯಕ ಅನಂತ್ ಕುಮಾರ್ ಹೆಗ್ಡೆ!

ಬಿಜೆಪಿ ಫೈರ್'ಬ್ರಾಂಡ್ ನಾಯಕರೆಂದೇ ಖ್ಯಾತಿ ಪಡೆದುಕೊಂಡಿರುವ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗ್ಡೆಯವರು. ಜಾತ್ಯಾತೀತತೆ ಕುರಿತು ಹೇಳಿಕೆ ನೀಡಿ ಮತ್ತೆ ವಿವಾದವೊಂದರಲ್ಲಿ ಸಿಲುಕಿಕೊಂಡಿದ್ದಾರೆ...
ಕೇಂದ್ರ ಸಚಿವ ಅನಂತ್ ಕುಮಾರ್ ಹೆಗ್ಡೆ
ಕೇಂದ್ರ ಸಚಿವ ಅನಂತ್ ಕುಮಾರ್ ಹೆಗ್ಡೆ
ಬೆಂಗಳೂರು: ಬಿಜೆಪಿ ಫೈರ್'ಬ್ರಾಂಡ್ ನಾಯಕರೆಂದೇ ಖ್ಯಾತಿ ಪಡೆದುಕೊಂಡಿರುವ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗ್ಡೆಯವರು. ಜಾತ್ಯಾತೀತತೆ ಕುರಿತು ಹೇಳಿಕೆ ನೀಡಿ ಮತ್ತೆ ವಿವಾದವೊಂದರಲ್ಲಿ ಸಿಲುಕಿಕೊಂಡಿದ್ದಾರೆ. 
ಕೊಪ್ಪಳದಲ್ಲಿ ನಡೆದ ಬ್ರಾಹ್ಮಣ ಯುವ ಪರಿಷತ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಹೆಗ್ಡೆಯವರು, "ಕೆಲವು ಜನ ಸಂವಿಧಾನದಲ್ಲಿ ಜಾತ್ಯತೀತ ಎಂದು ನಮೂದಿಸಲಾಗಿದೆ  ಎಂದು ಹೇಳುತ್ತಿದ್ದಾರೆ. ಸಂವಿಧಾನದಲ್ಲಿ ಜಾತ್ಯತೀತ ಪದವಿರುವ ಕಾರಣ ಅದನ್ನು ಬಿಜೆಪಿ ಗೌರವಿಸುತ್ತದೆ. ನಾವು ಮುಂದಿನ ದಿನಗಳಲ್ಲಿ ಸಂವಿಧಾನವನ್ನೇ ಬದಲಿಸುತ್ತೇವೆ. ಈ ಹಿಂದೆ ಸಂವಿಧಾನವನ್ನು ಹಲವು ಬಾರಿ ಬದಲಾಯಿಸಲಾಗಿತ್ತು ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆ ಇದೀಗ ಭಾರೀ ವಿರೋಧಕ್ಕೆ ಕಾರಣವಾಗಿದೆ. 
ಪಕ್ಷದ ನಾಯಕರೊಬ್ಬರ ವಿವಾದಾದ್ಮಕ ಹೇಳಿಕೆಗೆ ವ್ಯಾಪಕ ವಿರೋಧಗಳು ವ್ಯಕ್ತವಾಗುತ್ತಿದ್ದರು ಬಿಜೆಪಿ ನಾಯಕರು ಮಾತ್ರ ಈ ಬಗ್ಗೆ ಯಾವುದೇ ರೀತಿಯ ಪ್ರತಿಕ್ರಿಯೆಗಳನ್ನು ನೀಡುತ್ತಿಲ್ಲ. 
ಈ ಹಿಂದೆ ಕೂಡ ಅನಂತ್ ಕುಮಾರ್ ಹೆಗ್ಡೆಯವರು ವಿವಾದವೊಂದರಲ್ಲಿ ಸಿಲುಕಿದ್ದರು. ಉತ್ತರ ಕನ್ನಡ ಜಿಲ್ಲೆಯಲ್ಲಿ ಹೆಗ್ಡೆಯವರ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಹೆಗ್ಡೆಯವರು ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವರಾದ ಬಳಿಕ ವೈದ್ಯರೊಬ್ಬರ ಮೇಲೆ ಹಲ್ಲೆ ನಡೆಸಿದ್ದರು. ಇದರ ಸಿಸಿಟಿವಿ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. 
ಸಿರಸಿ ಆಸ್ಪತ್ರೆಯಲ್ಲಿ ವೈದ್ಯರು ತಮ್ಮ ತಾಯಿಗೆ ಚಿಕಿತ್ಸೆ ನೀಡಲು ವಿಳಂಬ ಮಾಡಿದ್ದಕ್ಕೆ ತೀವ್ರವಾಗಿ ಕೆಂಡಾಮಂಡಲಗೊಂಡಿದ್ದ ಸಚಿವ ವೈದ್ಯರಿಗೆ ಥಳಸಿದ್ದರು. ಘಟನೆಯಲ್ಲಿ ಇಬ್ಬರು ವೈದ್ಯರು ಸೇರಿ ಒಟ್ಟು ಮೂವರು ಗಾಯಗೊಂಡಿದ್ದರು. ಘಟನೆಗೆ ವೈದ್ಯ ಸಮೂಹ ಸಾಕಷ್ಟು ವಿರೋಧ ಹಾಗೂ ಟೀಕೆಗಳನ್ನು ವ್ಯಕ್ತಪಡಿಸಿತ್ತು. ಬಂಧನದಿಂದ ತಪ್ಪಿಸಿಕೊಳ್ಳಲು ಹೆಗ್ಡೆಯವರು ಕೆಲ ದಿನಗಳ ಕಾಲ ಕಣ್ಮರೆಯಾಗಿದ್ದರು. ಬಳಿಕ ನಿರೀಕ್ಷಣಾ ಜಾಮೀನು ಪಡೆದುಕೊಳ್ಳುವಲ್ಲಿ ಹೆಗ್ಡೆಯವರು ಯಶಸ್ವಿಯಾಗಿದ್ದರು. 
ಬಳಿಕ ಅನಂತ್ ಕುಮಾರ್ ಹೆಗ್ಡೆಯವರಿಗೆ ಸಚಿವ ಸ್ಥಾನ ನೀಡಿರುವುದಕ್ಕೆ ವೈದ್ಯ ಸಮೂಹ ವಿರೋಧ ವ್ಯಕ್ತಪಡಿಸಿ, ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಅಸಮಾಧಾನ ವ್ಯಕ್ತಪಡಿಸಿ ಪತ್ರವೊಂದನ್ನು ಬರೆದಿದ್ದರು. ಹೆಗ್ಡೆಯವರನ್ನು ಸಚಿವ ಸ್ಥಾನದಿಂದ ಕೈಬಿಡುವಂತೆ ಮನವಿ ಮಾಡಿಕೊಂಡಿದ್ದರು. ಹೆಗ್ಡೆಯಂತಹವರು ಸಚಿವರಾದರೆ ಜನರಿಗೆ ತಪ್ಪು ಮಾಹಿತಿಯನ್ನು ರವಾನಿಸಿದಂತಾಗುತ್ತದೆ ಎಂದು ತಿಳಿಸಿದ್ದರು. 
ಇದೊಂದೇ ಅಲ್ಲದೆ, ಸಚಿವ ಹೆಗ್ಡೆಯವರ ವಿರುದ್ಧ ಸಾಕಷ್ಟು ವಿವಾದಗಳಿವೆ. ಹಲವು ಬಾರಿ ಪ್ರಚೋದನಾತ್ಮಕ ಹೇಳಿಕೆಗಳನ್ನೂ ನೀಡಿ ವಿವಾದಗಳಲ್ಲಿ ಸಿಲುಕಿಕೊಂಡಿದ್ದಾರೆ. 2016ರ ಮಾರ್ಚ್ ತಿಂಗಳಿನಲ್ಲಿ ಇಸ್ಲಾಂ ಇರುವವರೆಗೂ ವಿಶ್ವದಲ್ಲಿ ಭಯೋತ್ಪಾದನೆ ಎಂಬ ಪಿಡುಗು ತೊಲಗುವುದಿಲ್ಲ ಎಂದು ಹೇಳಿದ್ದರು. ಈ ಹೇಳಿಕೆಗೆ ಸಾಕಷ್ಟು ವಿರೋಧಗಳು ವ್ಯಕ್ತವಾಗಿದ್ದವು. ಇದೀಗ ಅಪ್ಪ,ಅಮ್ಮಂದಿರ ರಕ್ತದ ಪರಿಚಯ ಇಲ್ಲದವರು 'ಜಾತ್ಯಾತೀತರು' ಎಂಬ ಹೇಳಿಕೆಯನ್ನು ನೀಡಿ ವಿವಾದಕ್ಕೆ ಸಿಲುಕಿದ್ದಾರೆ. 
ಅನಂತ್ ಕುಮಾರ್ ಹೆಗ್ಡೆ ವಿರುದ್ಧ ಮೊದಲ ಬಾರಿಗೆ ಭಟ್ಕಳದಲ್ಲಿ 1993ರಲ್ಲಿ ಮೊದಲ ಪ್ರಕರಣ ದಾಖಲಾಗಿತ್ತು. ಇದಾದ ಬಳಿಕ ಈದ್ಘಾ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿಯಲ್ಲಿ 1995ರಲ್ಲಿ ಪ್ರಕರಣ ದಾಖಲಾಗಿತ್ತು. 1996ರಲ್ಲಿ ಮೊದಲ ಬಾರಿಗೆ ಲೋಕಸಭೆಯಲ್ಲಿ ಚುನಾಯಿತರಾಗಿದ್ದರು, ಬಳಿಕ 5 ಬಾರಿ ಮರು ಚುನಾಯಿತರಾಗಿದ್ದರು. ಸಚಿವಾರದ ಬಳಿಕ ಪರೇಶ್ ಮೆಸ್ತಾ ಸಾವು ಪ್ರಕರಣ ಸಂಬಂಧ ಪ್ರಚೋದನಾತ್ಮಕ ಹೇಳಿಕೆಯನ್ನು ನೀಡಿದ್ದರು. 
ಸಾಮಾಜಿಕ ಜಾಲತಾಣ ಫೇಸ್'ಬುಕ್ ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಹರಿಹಾಯ್ದಿದ್ದ ಅನಂತ್ ಕುಮಾರ್ ಹೆಗ್ಡೆಯವರು, ಸಾಕ ಬೇಕಾ ತಪರಾಕಿ ಸಿದ್ದರಾಮಯ್ಯ ಅವರೇ!... ನಿಂಬಾಳ್ಕರ್, ರಾಮಲಿಂಗಾ ರೆಡ್ಡಿ ಹಾಗೂ ಕೆಂಪಯ್ಯನಂಥ ಜನರಿದ್ದರೆ ಮುಂದಿದೆ ನೋಡಿ ಇನ್ನು ಶಿರಸಿಯ ದೊಡ್ಡ ಮಾರಿಕಾಂಬ ಎಂಬ ಎಚ್ಚರಿಸಿದ್ದರು. 

ಸನ್ಮಾನ್ಯ ಸಿದ್ದರಾಮಯ್ಯ ಅವರೇ ನಿಮ್ಮ ಮುಖವನ್ನು ಮತ್ತೊಮ್ಮೆ ಕನ್ನಡಿ ಮುಂದೆ ನೋಡಿಕೊಳ್ಳಿ. ನಿಮ್ಮ ಒಡ್ಡೋಲಗದ ಸಹೋದ್ಯೋಗಿಗಳು ಸಹ ನಿಮ್ಮನ್ನು ನಡು ನೀರಿನಲ್ಲಿ ಕೈಬಿಟ್ಟು ಹೋಗುವ ದಿನ ದೂರವಿಲ್ಲ. ವಿದ್ರೋಹಿಗಳ ಬೆಂಬಲ್ಕಕೆ ನಿಂತು ದೇಶ ಭಕ್ತರನ್ನು ಸದೆಬಡಿಯುವ ನಿಮ್ಮ ಯೋಜನೆಗೆ, ನಿಮ್ಮ ಅಮೂಲ್ಯ ಸಲಹೆಗಾರನಾಗಲಿ ಅಥವಾ ನಾಲಾಯಕ್ ಗೃಹ ಮಂತ್ರಿಯಾಗಲಿ ಇನ್ನೇನು ತಾನೇ ಕಿಸಿಯಲು ಸಾಧ್ಯ? ದೇಶದೊಳಗೆ ಇರುವ ವಿದ್ರೋಹಿಗಳಿಗೆ ಸಹ ನಮ್ಮ ಸಂಘಟಿತ ರುಚಿ ತೋರಿಸಲಿದ್ದೇವೆ. ಹುಂಬ ಧೈರ್ಯವಿದ್ದರೆ ಎದುರಿಸಲಿ ಎಂದು ಸಿದ್ದರಾಮಯ್ಯ ಅವರಿಗೆ ಸವಾಲು ಹಾಕಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com