ಕನ್ನಡದ ಖ್ಯಾತ ವಿಜ್ಞಾನ ಲೇಖಕ ಜೆ.ಆರ್. ಲಕ್ಷ್ಮಣರಾವ್ ಇನ್ನಿಲ್ಲ

ಕನ್ನಡದ ಪ್ರಸಿದ್ದ ವಿಜ್ಞಾನ ಲೇಖಕ ಜೆ.ಆರ್. ಲಕ್ಷ್ಮಣರಾವ್ ನಿಧನರಾಗಿದ್ದಾರೆ.
ಜೆ.ಆರ್. ಲಕ್ಷ್ಮಣರಾವ್
ಜೆ.ಆರ್. ಲಕ್ಷ್ಮಣರಾವ್
ಮೈಸೂರು: ಕನ್ನಡದ ಪ್ರಸಿದ್ದ ವಿಜ್ಞಾನ ಲೇಖಕ ಜೆ.ಆರ್. ಲಕ್ಷ್ಮಣರಾವ್ ನಿಧನರಾಗಿದ್ದಾರೆ. 97 ವರ್ಷದ ರಾವ್ ಮೈಸೂರು ವಿಶ್ವವಿದ್ಯಾಲಯದ ರಸಾಯನಶಾಸ್ತ್ರ ಪ್ರಾಧ್ಯಾಪಕರಾಗಿ ನಿವೃತ್ತಿ ಹೊಂದಿದ್ದರು. ಮೃತರು ಮೂವರು ಪುತ್ರಿಯರು ಮತ್ತು ಪುತ್ರ ರನ್ನು ಅಗಲಿದ್ದಾರೆ..
1921 ಜನವರಿ 21ರಂದು ದಾವಣಗೆರೆ ಜಿಲ್ಲೆಯ ಜಗಳೂರಿನಲ್ಲಿ ಜನಿಸಿದ್ದ ಜಗಳೂರು ರಾಘವೇಂದ್ರ ರಾವ್ ಲಕ್ಷ್ಮಣ ರಾವ್ ಅವರು  ರಾಘವೇಂದ್ರರಾವ್‌, ತಾಯಿ ನಾಗಮ್ಮ ಅವರ ಪುತ್ರ. ಜಗಳೂರಿನಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಪೂರೈಸಿದ್ದ ರಾವ್ ದಾವಣಗೆರೆಯಲ್ಲಿ ಪ್ರೌಢಶಾಲಾ ವಿದ್ಯಾಭ್ಯಾಸ ಮುಗಿಸಿ ಮೈಸೂರಿನ ಇಂಟರ್ ಮೀಡಿಯೆಟ್‌ ಕಾಲೇಜ್‌ನಿಂದ (ಇಂದಿನ ಯುವರಾಜ ಕಾಲೇಜ್‌) ಇಂಟರ್ ಮೀಡಿಯೆಟ್‌ ಪದವಿ ಪಡೆದರು. 
ಮೈಸೂರು ವಿಶ್ವವಿದ್ಯಾಲಯದಿಂದ ಬಿಎಸ್ಸಿ, ಎಂಎಸ್ಸಿ  ಪದವಿ ಪಡೆದ ಲಕ್ಷ್ಮಣ ರಾವ್ ತುಮಕೂರಿನ ಇಂಟರ್ ಮೀಡಿಯೆಟ್‌ ಕಾಲೇಜಿನಲ್ಲಿ ಉಪನ್ಯಾಸಕರಾಗಿ ತಮ್ಮ ವೃತ್ತಿ ಜೀವನ ಪ್ರಾರಂಭಿಸಿದ್ದರು.  ಬೆಂಗಳೂರಿನ ಸೆಂಟ್ರಲ್‌ ಕಾಲೇಜು, ಶಿವಮೊಗ್ಗದ ಸಹ್ಯಾದ್ರಿ ಕಾಲೇಜು, ಮೈಸೂರಿನ ಮಹಾರಾಜ ಕಾಲೇಜು, ಯುವರಾಜ ಕಾಲೇಜುಗಳಲ್ಲಿ ಅಧ್ಯಾಪಕರಾಗಿ, ಪ್ರಾಧ್ಯಾಪಕರಾಗಿ ಕೆಲಸ ಮಾಡಿದ್ದ ರಾವ್ ಮೈಸೂರು ವಿಶ್ವವಿದ್ಯಾಲಯದ ಪ್ರಸಾರಾಂಗದಿಂದ ಹೊರತಂದ ಇಂಗ್ಲಿಷ್‌ ಕನ್ನಡ ನಿಘಂಟಿನ ಪ್ರಧಾನ ಸಂಪಾದಕರಾಗಿಯೂ ಸೇವೆ ಸಲ್ಲಿಸಿದ್ದರು.
ವಿಜ್ಞಾನ ವಿಷಯಗಳ ಬಗ್ಗೆ ಅವರು 30ಕ್ಕೂ ಹೆಚ್ಚು ಪುಸ್ತಕಗಳನ್ನು ರಚಿಸಿದ್ದ ಲಕ್ಷ್ಮಣ್ ರಾವ್ ಅವರು ಬರೆದ ಮೊದಲ ಪುಸ್ತಕ ‘ಆಹಾರ’ 1944ರಲ್ಲಿ ಪ್ರಕಟವಾಗಿತ್ತು.  ‘ಪರಮಾಣು ಚರಿತ್ರೆ’, ‘ಗೆಲಿಲಿಯೋ’, ‘ವಿಜ್ಞಾನವಿಚಾರ’, ‘ಲೂಯಿಪಾಸ್ತರ್’, ‘ವಿಜ್ಞಾನಿಗಳೊಡನೆ ರಸನಿಮಿಷಗಳು’ ಇದೇ ಮೊದಲಾದ ಕೃತಿಗಳನ್ನು ರಚಿಸಿದ್ದ ರಾವ್ ಬಹಳಷ್ಟು ಸಂಖ್ಯೆಯ ವೈಜ್ಞಾನಿಕ ಲೇಖನಗಳನ್ನು ಬರೆದಿದ್ದಾರೆ. ಅವುಗಳು ನಾಡಿನ ಹೆಸರಾಂತ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದವು.
ಶಿಕ್ಷಣ ಹಾಗೂ ವಿಜ್ಞಾನ ಸಾಹಿತ್ಯ ಕ್ಷೇತ್ರಕ್ಕೆ ಅವರು ಸಲ್ಲಿಸಿದ್ದ ಅಪಾರ ಕೊಡುಗೆಯನ್ನು ಗೌರವಿಸಿ 2016ರಲ್ಲಿ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com