

ಬೆಂಗಳೂರು/ ಚಿತ್ತೂರು: ಐದು ವರ್ಷಗಳಿಂದ ಆಂಧ್ರ ಪ್ರದೇಶ ಮತ್ತು ಕರ್ನಾಟಕ ಪೊಲೀಸರೊಂದಿಗೆ ಬೆಕ್ಕು ಇಲಿಯ ಆಟವಾಡಿ ತಲೆ ಮರೆಸಿಕೊಂಡಿದ್ದ, ಬೆಂಗಳೂರು ಎಟಿಎಂ ಹಲ್ಲೆ ಪ್ರಕರಣದ ಆರೋಪಿ ಮಧುಕರ್ ರೆಡ್ಡಿ ಪತ್ತೆಗೆ ಸಹಾಯವಾದದ್ದು ಆಧಾರ್ ಕಾರ್ಡ್. ಆಧಾರ್ ಕಾರ್ಡ್ ನೆರವಿನಿಂದ ಆರೋಪಿಯನ್ನು ಬಲೆಗೆ ಕೆಡವಲಾಗಿದೆ.
ಇತ್ತೀಚೆಗೆ ಚಿತ್ತೂರು ಸರ್ಕಲ್ ಇನ್ಸ್ ಪೆಕ್ಟರ್ ಹನುಮಂತನಾಯಕ್ ನಗರದ ರೌಡಿಶೀಟರ್ಗಳು ಹಾಗೂ ಪೊಲೀಸರ ವಶದಿಂದ ಪರಾರಿಯಾಗಿದ್ದವರ ಚಲನವಲನಗಳ ಮೇಲೆ ನಿಗಾ ಇಟ್ಟಿದ್ದರು. ಆರೋಪಿಗಳ ವಿಳಾಸಗಳ ಆಧಾರದ ಮೇಲೆ ತನಿಖೆ ಆರಂಭಿಸಿದ್ದರು. ಅದರಲ್ಲಿ ಹಲವರು ತಪ್ಪು ಮಾಹಿತಿಗಳನ್ನು ನೀಡಿದ್ದುದ್ದು ಬೆಳಕಿಗೆ ಬಂತು.
ನಂತರ ಪೊಲೀಸರು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿರಕ್ಕೆ ಆಧಾರ್ ಕಾರ್ಡ್ ಗಳ ಮಾಹಿತಿ ನೀಡುವಂತೆ ಕೇಳಿತ್ತು. ಅದರಲ್ಲೂ ವಿಶೇಷ ವಾಗಿ ಚಿತ್ತೂರು ಜಿಲ್ಲೆಯ ತಂಬಾಲಪಲ್ಲೆ ನಿವಾಸಿಗಳ ಮಾಹಿತಿ ಕೇಳಿತ್ತು. ಅದರಲ್ಲಿ ಮಧುಕರ್ ರೆಡ್ಡಿ ಚಿತ್ತೂರಿನಿಂದ 35 ಕಿಮೀ ದೂರವಿರುವ ತಂಬಾಲಪಲ್ಲೆಯವನು ಎಂದು ತಿಳಿದು ಬಂತು, ಆದರೆ ತಂಬಾಲಪಲ್ಲೆಯಲ್ಲಿ ಆತ ಹೆಚ್ಚಿನ ಸಮಯ ವಾಸವಿರಲಿಲ್ಲ, ತನ್ನ 18ನೇ ವಯಸ್ಸಿನಲ್ಲಿ ವಿವಾಹವಾಗಿದ್ದ ಈತ ಆರು ತಿಂಗಳಲ್ಲೇ ಪತ್ನಿಯನ್ನು ತೊರೆದಿದ್ದ.
ಮದನಪಲ್ಲೆಯ ಆಭರಣ ಅಂಗಡಿಯೊಂದರ ಬಳಿ ವ್ಯಕ್ತಿಯೊಬ್ಬ ಆಭರಣ ಅಂಗಡಿಯಲ್ಲಿ ನಡೆಯುವ ಚಲನವಲನಗಳ ಮೇಲೆ ನಿಗಾ ಇಟ್ಟಿರುವುದು ಪೊಲೀಸರ ಗಮನಕ್ಕೆ ಬಂದಿದೆ.
ಸುಮಾರು 12 ಗಂಟೆಗಳ ಕಾಲ ಆರೋಪಿಯ ಚಲವಲನಗಳನ್ನು ಪೊಲೀಸರು ಗಮನಿಸಿದ್ದಾರೆ, ನಂತರ ಯಾರು ಇಲ್ಲದ ಸಮಯ ನೋಡಿ ಆಭರಣ ಅಂಗಡಿಯಲ್ಲಿ ದರೋಡೆ ಮಾಡಲು ಯತ್ನಿಸುತ್ತಿದ್ದ ವೇಳೆ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.
ವಿಚಾರಣೆ ವೇಳೆ ಪೊಲೀಸರಿಂಗ ತಪ್ಪಿಸಿಕೊಂಡು ಹೇಗೆ ಓಡಾಡುತ್ತಿದ್ದೆ ಎಂಬುದರ ಬಗ್ಗೆ ಮಾಹಿತಿ ನೀಡಿದ್ದಾನೆ. ಕರ್ನಾಟಕ ಮತ್ತು ಆಂಧ್ರ ಪ್ರದೇಶದ ವಿವಿಧ ಭಾಗಗಳಲ್ಲಿ ಆರೋಪಿ ರೆಡ್ಡಿ ವಾಸ ಮಾಡಿದ್ದ,. ಜ್ಯೋತಿ ಉದಯ್ ಮೇಲೆ ಹಲ್ಲೆ ನಡೆದ ನಂತರ ಕರ್ನಾಟಕ ತಂಡದ ವಿಶೇಷ ಪೊಲೀಸ್ ತನಿಖಾ ತಂಡದ ಜೊತೆ ಆಂಧ್ರ ಪೊಲೀಸರು ನಿರಂತರ ಸಂಪರ್ಕ ಹೊಂದಿದ್ದರು. ಅಲ್ಲಿನ ಪೊಲೀಸರು ನೀಡಿದ ಆರೋಪಿಯ ಚಹರೆಯ ಅನ್ವಯ ಮಧುಕರ್ ರೆಡ್ಡಿ ಹೋಲಿಕೆಯಾಗಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ವಿಚಾರಣ ವೇಳೆ ತಾನು ಐದು ಕೊಲೆ ಮಾಡಿದ್ದು, ಬೆಂಗಳೂರಿನಲ್ಲಿ ಎಟಿಎಂ ನಲ್ಲಿ ಮಹಿಳೆ ಮೇಲೆ ಹಲ್ಲೆ ಮಾಡಿದ್ದು ತಾನೇ ಎಂಬುದಾಗಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
Advertisement