
ಬೆಂಗಳೂರು: ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವಿದ್ಯಾರ್ಥಿನಿ ಸೌಜನ್ಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣವನ್ನು ಮರು ತನಿಖೆ ನಡೆಸುವಂತೆ ನ್ಯಾಯಾಲಯ ಮಹತ್ವದ ಆದೇಶ ಹೊರಡಿಸಿದೆ.
ಪ್ರಕರಣ ಸಂಬಂಧ ಸಲ್ಲಿಕೆಯಾಗಿದ್ದ ಆರೋಪ ಪಟ್ಟಿಯಲ್ಲಿ ಲೋಪವಿದೆ ಎಂದು ಮೃತ ಸೌಜನ್ಯರ ತಂದೆ ಚಂದ್ರಪ್ಪ ಸಲ್ಲಿಸಿದ್ದ ಅರ್ಜಿ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು. ವಿಚಾರಣೆ ವೇಳೆ ಆರೋಪ ಪಟ್ಟಿಯಲ್ಲಿ ಲೋಪವಿರುವ ಅಂಶವನ್ನು ಪರಿಗಣಿಸಿದ ನ್ಯಾಯಾಲಯ, ಪ್ರಕರಣವನ್ನು ಮರು ತನಿಖೆ ನಡೆಸುವಂತೆ ಸಿಬಿಐ ಅಧಿಕಾರಿಗಳಿಗೆ ಸೂಚನೆ ನೀಡಿತು.
ಈ ಆರೋಪ ಪಟ್ಟಿಯನ್ನು ಪಡೆದ ಸೌಜನ್ಯ ತಂದೆ ತಾವೇ ಓದಿ ಹಲವು ಲೋಪವಿರುವುದನ್ನು ಗರುತಿಸಿ ವಕೀಲರ ಮೂಲಕ ಕೋರ್ಟ್‌ಗೆ ಮನವಿ ಮಾಡಿದ್ದರು. ಸೌಜನ್ಯ 2012ರ ಅಕ್ಟೋಬರ್ 9ರಂದು ಕಾಣೆಯಾಗಿದ್ದಳು ಎಂದು ತಂದೆ ಚಂದ್ರಪ್ಪ ಅವರು ಬೆಳ್ತಂಗಡಿ ಪೊಲೀಸರಿಗೆ ದೂರು ನೀಡಿದ್ದರು.ಅಕ್ಟೋಬರ್ 10ರಂದು ಅರೆನಗ್ನ ಸ್ಥಿತಿಯಲ್ಲಿ ಸೌಜನ್ಯ ಶವ ಪತ್ತೆಯಾಗಿತ್ತು. ಬಳಿಕ ಆಕೆ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಲಾಗಿದೆ ಎಂದು ಆರೋಪಿ ದೂರು ನೀಡಿದ್ದರು. ಈ ಪ್ರಕರಣ ಜಿಲ್ಲೆಯಲ್ಲಿ ಭಾರೀ ಪ್ರತಿಭಟನೆ, ಆಕ್ರೋಶಕ್ಕೆ ಕಾರಣವಾಗಿತ್ತು.
ಸಿಬಿಐ ನಿಂದ ಸರಿಯಾದ ತನಿಖೆ ನಡೆದಿಲ್ಲ, ಇದು ಸರಳ ಪ್ರಕರಣವಲ್ಲ, ಅತ್ಯಾಚಾರ ಹಾಗೂ ಕೊಲೆ ಕೇಸ್, ಈ ಪ್ರಕರಣದ ಸತ್ಯಾಂಶ ಹೊರಬರಲು ಮರು ತನಿಖೆಯ ಅವಶ್ಯಕತೆಯಿದೆ ಎಂದು ಸಿಟಿಸಿವಿಲ್ ಕೋರ್ಟ್ ಹೆಚ್ಚುವರಿ ಸೆಷನ್ ಜಡ್ಜ್ ಬಿ.ಎಸ್ ರೇಖಾ ಸೂಚಿಸಿದ್ದಾರೆ.
ಸಿಬಿಐ ಸಲ್ಲಿಸಿರುವ ಚಾರ್ಜ್ ಶೀಟ್ ಬಗ್ಗೆ ವಿವರ ನೀಡಿದ ನ್ಯಾಯಮೂರ್ತಿಗಳು, ಮಾನಸಿಕ ಅಸ್ವಸ್ಥನಾಗಿರುವ ಉಡುಪಿ ಜಿಲ್ಲೆಯ ಕುಕ್ಕಂದೂರು ಗ್ರಾಮದ ಸಂತೋಷ್ ರಾವ್ ಎಂಬಾತನ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿ, ಸಿಬಿಐ ಅಧಿಕಾರಿಗಳು ನಿಜವಾದ ಆರೋಪಿಗಳನ್ನು ರಕ್ಷಿಸುತ್ತಿದ್ದಾರೆ. ಸಾಕ್ಷ್ಯಾಧಾರಗಳು ನಿಜವಾದ ಅಪರಾಧಿ ಯಾರು ಎಂಬದನ್ನು ಹೇಳುತ್ತಿವೆ, ಆದರೆ ಸಿಬಿಐ ಸರಿಯಾದ ರೀತಿಯಲ್ಲಿ ತನಿಖೆ ನಡೆಸಿಲ್ಲ ಎಂದು ಹೇಳಿದ್ದಾರೆ.
ಸೌಜನ್ಯ ಪ್ರಕರಣದಲ್ಲಿ ಮಲ್ಲಿಕ್ ಜೈನ್, ಉದಯ್ ಜೈನ್ ಮತ್ತು ದೀರಜ್ ಜೈನ್ ಭಾಗಿಯಾಗಿದ್ದಾರೆ ಅವರ ವಿರುದ್ಧ ತನಿಖೆ ನಡೆಸಬೇಕು ಎಂದು ಮೃತ ಸೌಜನ್ಯ ತಂದೆ ಚಂದ್ರಪ್ಪಗೌಡ ನ್ಯಾಯಾದೀಶರಲ್ಲಿ ಮನವಿ ಮಾಡಿದ್ದಾರೆ. ಅಪರಾಧ ನಡೆದ ಸ್ಥಳದಲ್ಲಿ ಈ ಮೂವರು ಇದ್ದರು. ಆದರೆ ಅವರನ್ನು ರಕ್ಷಿಸುವ ಸಲುವಾಗಿ ಸಿಬಿಐ ಸಂತೋಷರಾವ್ ನನ್ನುಆರೋಪಿಯನ್ನಾಗಿ ಬಿಂಬಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಚಂದ್ರಪ್ಪ ಗೌಡ ದೂರಿದ್ದಾರೆ.
ಘಟನೆ ನಡೆದ ದಿನ ಮಳೆ ಬರುತ್ತಿತ್ತು ಎಂದು ಪ್ರಕರಣದ ಎಲ್ಲಾ ಸಾಕ್ಷಿಗಳು ಹೇಳುತ್ತಿವೆ, ಆದರೆ ಸಂತ್ರಸ್ತೆಯ ಬಟ್ಟೆ, ಬ್ಯಾಗ್ ಮತ್ತು ಪುಸ್ತಕಗಳು ಅಂದು ಒದ್ದೆಯಾಗಿರಲಿಲ್ಲ, ಆಕೆ ಧರಿಸಿದ್ದ ಒಳಉಡುಪು ಪ್ರಕರಣ ನಡೆದ ಸ್ಥಳದಿಂದ ತಂದಿದ್ದಲ್ಲ, ಅದನ್ನು ಆಕೆಯ ಮನೆಯಿಂದ ತಂದಿದ್ದು ಎಂದು ವಿವರಿಸಿರುವ ನ್ಯಾಯಾಧೀಶರು ಘಟನೆ ನಡೆದಾಗ ಆಕೆ ಧರಿಸಿದ್ದ ಒಳ ಉಡುಪು ಏನಾಯಿತು ಎಂದು ಪ್ರಶ್ನಿಸಿದ್ದಾರೆ.
ಆರೋಪಿಗಳು ಸಂತ್ರಸ್ತೆಯ ಗುಪ್ತಾಂಗಕ್ಕೆ ಮಣ್ಣು ಹಾಕಿದ್ದಾರೆ, ಅವರ ಉದ್ದೇಶ ಸಾಕ್ಷಿಯನ್ನು ನಾಶ ಪಡಿಸುವುದಾಗಿತ್ತು. ಈ ಎಲ್ಲಾ ಕೋನಗಳಲ್ಲಿ ಸಿಬಿಐ ತನಿಖೆ ನಡೆದಿಲ್ಲ, ಆಯ್ಕೆ ಮಾಡಿಕೊಂಡ ಕೆಲವೇ ಕೆಲವು ಸಾಕ್ಷಿಗಳ ಹೇಳಿಕೆ ಮಾತ್ರ ಪಡೆಯಲಾಗಿದೆ ಎಂದು ಜಡ್ಜ್ ಹೇಳಿದ್ದಾರೆ.
ಬಂಧಿತ ಸಂತೋಷ್ ರಾವ್ ಫಿಮೋಸಿಸ್ ಎಂಬ ಕಾಯಿಲೆಯಿಂದ ಬಳಲುತ್ತಿದ್ದಾನೆ ಎಂದು ವೈದ್ಯರು ಹೇಳಿದ್ದಾರೆ, ಇಂಥಹ ಹೀನ ಕೃತ್ಯವನ್ನು ಆತನೊಬ್ಬನಿಂದಲೇ ಮಾಡಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.
Advertisement