ಮೈಸೂರು: ಬಂಡೀಪುರ ರಾಷ್ಟ್ರೀಯ ಅರಣ್ಯದ ಕಲ್ಕೆರೆ ರೇಂಜ್ ನಲ್ಲಿ ಬೆಂಕಿ ಹತ್ತಿಕೊಂಡು ರೇಂಜ್ ಆಫೀಸರ್ ಮೃತಪಟ್ಟು ಇತರ ನಾಲ್ವರು ಗಾಯಗೊಂಡಿದ್ದಾರೆ.ಮೃತಪಟ್ಟ ಅರಣ್ಯಾಧಿಕಾರಿಯನ್ನು ಮುರುಗಪ್ಪ ತಮಣ್ಣ ಗೌಡ ಎಂದು ಗುರುತಿಸಲಾಗಿದೆ.
ಗಾಯಗೊಂಡಿರುವ ರೇಂಜ್ ಅರಣ್ಯಾಧಿಕಾರಿ ಗಂಗಾಧರ್ ಮತ್ತು ಇತರ ಮೂವರು ಅರಣ್ಯ ಗಾರ್ಡ್ ಗಳಿಗೆ ಚಿಕಿತ್ಸೆ ನೀಡಲಾಗಿದೆ. ಬೀದರ್ ಮೂಲದ ಮುರುಗಪ್ಪ ಅವರು ಬೆಂಕಿಯನ್ನು ಆರಿಸಲು ಹೋಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಮಾಹಿತಿ ಸಿಕ್ಕ ಕೂಡಲೇ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಂದಿಸಲು ಯತ್ನಿಸಿದರು. ಆದರೆ ಒಣಗಿದ ಲಾಂಟನಾ ಕಳೆ ಮತ್ತು ಹುಲ್ಲುಗಳಿಂದ ಬೆಂಕಿ ಇನ್ನಷ್ಟು ಹತ್ತಿಕೊಂಡಿತು. ಬೆಂಕಿಯ ಜ್ವಾಲೆ ಹತ್ತಿಕೊಳ್ಳುತ್ತಿದ್ದಂತೆ ವನ್ಯ ಮೃಗಗಳು ಬೇರೆಡೆಗೆ ಓಡಿಹೋದವು.
ಬೆಂಕಿಯನ್ನು ಆರಿಸಲು ನೆರೆಯ ನಾಗರಹೊಳೆ ಅರಣ್ಯ, ಚಾಮರಾಜನಗರ ಮತ್ತು ಬಿಳಿಗಿರಿ ರಂಗ ಬೆಟ್ಟದಿಂದ ಅಧಿಕಾರಿಗಳು ಭದ್ರತಾ ಸಿಬ್ಬಂದಿಯನ್ನು ಕರೆದರು.ಸುಮಾರು 400 ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ನಂದಿಸಲು ಯತ್ನಿಸಿದರು.
ಅರಣ್ಯ ಸಿಬ್ಬಂದಿ ಬೆಂಕಿಯನ್ನು ಆರಿಸಲು ಸ್ಥಳೀಯ ಬುಡಕಟ್ಟು ಜನರ ನೆರವು ಪಡೆದರು. ಬೆಂಕಿ ಹತ್ತಿಕೊಳ್ಳಲು ಕಾರಣವನ್ನು ಅರಣ್ಯಾಧಿಕಾರಿಗಳು ಪತ್ತೆಹಚ್ಚುತ್ತಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ನಾಗರಹೊಳೆ, ಎಂ.ಎಂ.ಹಿಲ್ಸ್ ಮತ್ತು ಕಾವೇರಿ ವನ್ಯಮೃಗ ಅಭಯಾರಣ್ಯದಲ್ಲಿ ಪಡೆ ನಿಯೋಜಿಸಲಾಗಿದೆ.