ಬಳ್ಳಾರಿ: ಮಾಜಿ ಸಚಿವ ಕರುಣಾಕರ ರೆಡ್ಡಿ ವಿರುದ್ಧ ಜಾತಿ ನಿಂದನೆ ಕೇಸು

ಭೂಮಾಲೀಕತ್ವ ವಿವಾದ ಸಂಬಂಧ ಮಾಜಿ ಸಚಿವ ಕರುಣಾಕರ ರೆಡ್ಡಿ ಸಂಸದ ಶ್ರೀರಾಮುಲು ವಿರುದ್ಧ ಕ್ರಿಮಿನಲ್ ಕೇಸು ದಾಖಲಿಸಿದ್ದಾರೆ. ಇದೇ ವೇಳೆ ಕರುಣಾಕರ ರೆಡ್ಡಿ ...
ಕರುಣಾಕರ ರೆಡ್ಡಿ ಮತ್ತು ಶ್ರೀರಾಮುಲು
ಕರುಣಾಕರ ರೆಡ್ಡಿ ಮತ್ತು ಶ್ರೀರಾಮುಲು
ಬಳ್ಳಾರಿ: ಭೂಮಾಲೀಕತ್ವ ವಿವಾದ ಸಂಬಂಧ ಮಾಜಿ ಸಚಿವ ಕರುಣಾಕರ ರೆಡ್ಡಿ ಸಂಸದ ಶ್ರೀರಾಮುಲು ವಿರುದ್ಧ ಕ್ರಿಮಿನಲ್ ಕೇಸು ದಾಖಲಿಸಿದ್ದಾರೆ. ಇದೇ ವೇಳೆ ಕರುಣಾಕರ ರೆಡ್ಡಿ ವಿರುದ್ಧ ಶ್ರೀರಾಮುಲು ಜಾತಿ ನಿಂದನೆ ದಾವೆ  ಹೂಡಿದ್ದಾರೆ.
ಶ್ರೀರಾಮುಲು  ಮತ್ತಿಬ್ಬರ ವಿರುದ್ಧ ಕರುಣಾಕರ ರೆಡ್ಡಿ 10 ಕ್ರಿಮಿನಲ್ ಪ್ರಕರಣಗಳನ್ನು ಬಳ್ಳಾರಿಯ ಸಿಜೆಎಂ ನ್ಯಾಯಾಲಯದಲ್ಲಿ ದಾಖಲಿಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ಸಂಸದ ಬಿ.ಶ್ರೀರಾಮುಲು ಸೇರಿ ಮೂವರಿಗೆ ಸಮನ್ಸ್‌ ಜಾರಿಗೊಳಿಸಿದೆ. .
ಬಳ್ಳಾರಿಯ ಹದ್ದಿನ ಗುಂಡು (ಈಗಿನ ಸುಷ್ಮಾ ಸ್ವರಾಜ್‌ ಕಾಲೋನಿ) ಪ್ರದೇಶದಲ್ಲಿ ಸಂಸದ ಬಿ.ಶ್ರೀರಾಮುಲು ಮತ್ತು ಜಿ.ಕರುಣಾಕರರೆಡ್ಡಿ 1997ರಲ್ಲಿ ಪ್ರತ್ಯೇಕವಾಗಿ ಜಮೀನು ಖರೀದಿಸಿದ್ದರು. ಅದನ್ನು ಕೃಷಿಯೇತರ ಜಮೀನಾಗಿ ಪರಿವರ್ತನೆ ಮಾಡಿಕೊಂಡಿದ್ದರು. ಶ್ರೀರಾಮುಲು ಈ ಜಮೀನನ್ನು ನಿವೇಶನಗಳಾಗಿ ಅಭಿವೃದ್ಧಿಪಡಿಸಿ ಮಾರಾಟಕ್ಕೆ ಮುಂದಾಗಿದ್ದರು ಈ ಹಿನ್ನೆಲೆಯಲ್ಲಿ ಬಳ್ಳಾರಿ ನ್ಯಾಯಾಲಯದಲ್ಲಿ ಆಸ್ತಿ ಮಾಲೀಕತ್ವದ ಘೋಷಣೆಗೆ ಕರುಣಾಕರ ರೆಡ್ಡಿ ದಾವೆ ಹೂಡಿದ್ದಾರೆ.
ಕರುಣಾಕರ ರೆಡ್ಡಿ ವಿರುದ್ಧ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಹವಂಬಾವಿಯ ನಾಗಪ್ಪ ಎಂಬುವರು ಜಾತಿ ನಿಂದನೆ ಮೊಕದ್ದಮೆ ದಾಖಲಿಸಿದ್ದಾರೆ. ನಾನು ಕರುಣಾಕರ ರೆಡ್ಡಿ ಅವರ ಮನೆ ಮುಂದೆ ತೆರಳುತ್ತಿದ್ದ ವೇಳೆ  ರೆಡ್ಡಿ  ಮತ್ತು ಅವರ ಸಂಬಂಧಿ ವಿಶ್ವನಾಥ ರೆಡ್ಡಿ ಎಂಬುವರು ತನ್ನನ್ನು ನಿಂದಿಸಿದ್ದಾರೆ. ನಾನು ವಾಲ್ಮಿಕಿ ಜನಾಂಗಕ್ಕೆ ಸೇರಿದವನಾಗಿದ್ದು, ನನ್ನ ಸಮುದಾಯದ ಬಗ್ಗೆ ಮಾತನಾಡಿದ್ದಾರೆ  ಎಂದು ದೂರಿನಲ್ಲಿ ತಿಳಿಸಿದ್ದಾರೆ. ಸಂಸದ ಶ್ರೀರಾಮುಲು ಕೂಡ ವಾಲ್ಮೀಕಿ ಜನಾಂಗದವರಾಗಿದ್ದಾರೆ.
ಕರುಣಾಕರ ರೆಡ್ಡಿ ಮತ್ತು ಶ್ರೀರಾಮುಲು ನಡುವೆ ಹಲವು ವರ್ಷಗಳಿಂದ ಒಳಜಗಳ ನಡೆಯುತ್ತಲೇ ಇದೆ, ಬಿಜೆಪಿ ಅಧಿಕಾರದಲ್ಲಿದ್ದಾಗ ಇಬ್ಬರ ನಡುವಿನ ಭಿನ್ನಾಭಿಪ್ರಾಯವನ್ನು ಮುಚ್ಚಿಡಲಾಗಿತ್ತು. ಜನಾರ್ದನ ರೆಡ್ಡಿ ಮತ್ತು ಮಾಜಿ ಶಾಸಕ ಸೋಮಶೇಖರ ರೆಡ್ಡಿ ಹಲವು ಸಾರ್ವಜನಿಕ ಸಭೆ ಸಮಾರಂಭಗಳಲ್ಲಿ ಕಾಣಿಸಿಕೊಳ್ಳುತ್ತಾರೆ, ಆದರೆ ಕರುಣಾಕರ ರೆಡ್ಡಿ ಇಬ್ಬರು ಸಹೋದರರಿಂದ ದೂರವೇ ಉಳಿದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com