ಬೆಂಗಳೂರು: ರಾಜ್ಯದಲ್ಲಿ ನಾಲ್ಕು ಹೆಚ್ಚುವರಿ ಪಾಸ್ ಪೋರ್ಟ್ ಕೇಂದ್ರಗಳನ್ನು ಪ್ರಾರಂಭಿಸಲು ಕೇಂದ್ರ ವಿದೇಶಾಂಗ ಇಲಾಖೆ ಅನುಮತಿ ನೀಡಿದ್ದು, ಮಾರ್ಚ್ ತಿಂಗಳಾಂತ್ಯಕ್ಕೆ ನಾಲ್ಕು ಹೊಸ ಕೇಂದ್ರಗಳು ಕಾರ್ಯಾರಂಭ ಮಾಡಲಿವೆ. ಈ ಮೂಲಕ ಇನ್ನು ಮುಂದೆ ಪಾಸ್ ಪೋರ್ಟ್ ಗಳಿಗಾಗಿ ಅರ್ಜಿ ಸಲ್ಲಿಸುವುದು ಮತ್ತಷ್ಟು ಸುಲಭವಾಗಲಿದೆ.
ದಾವಣಗೆರೆ, ಬೆಳಗಾವಿ, ಹಾಸನ, ಕಲಬುರ್ಗಿ ಜಿಲ್ಲೆಗಳಲ್ಲಿ ಪೋಸ್ಟ್ ಆಫೀಸ್ ಪಾಸ್ ಪೋರ್ಟ್ ಕೇಂದ್ರಗಳು ಪ್ರಾರಂಭವಾಗಲಿದ್ದು, ಮೈಸೂರಿನಲ್ಲಿ ಸಂಪೂರ್ಣವಾಗಿ ಕಾರ್ಯನಿರ್ವಹಿಸುವ ಕೇಂದ್ರ ಇರಲಿದೆ.
ಈ ಬಗ್ಗೆ ಪ್ರಾದೇಶಿಕ ಪಾಸ್ ಪೋರ್ಟ್ ಅಧಿಕಾರಿ ಪಿಎಸ್ ಕರ್ತಿಕೇಯನ್ ಮಾಹಿತಿ ನೀಡಿದ್ದು, ಫೆಬ್ರವರಿ ತಿಂಗಳಲ್ಲೇ ಪಾಸ್ ಪೋರ್ಟ್ ಕೇಂದ್ರಗಳು ಕಾರ್ಯಾರಂಭ ಮಾಡಬೇಕಿತ್ತು. ಆದರೆ ಉಪಕರಣಗಳನ್ನು ಖರೀದಿಸುವ ಪ್ರಕ್ರಿಯೆಯಲ್ಲಿ ವಿಳಂಬವಾದ್ದರಿಂದ ಪಾಸ್ ಪೋರ್ಟ್ ಕೇಂದ್ರಗಳ ಕಾರ್ಯಾರಂಭವೂ ವಿಳಂಬವಾಗಿದ್ದು, ಆದರೆ ಮಾರ್ಚ್ ತಿಂಗಳಾಂತ್ಯಕ್ಕೆ ಕಾರ್ಯಾರಂಭ ಮಾಡಲಿವೆ ಎಂದು ಹೇಳಿದ್ದಾರೆ.
ಪಾಸ್ ಪೋರ್ಟ್ ಕೇಂದ್ರಗಳ ಕಾರ್ಯನಿರ್ವಹಣೆಗೆ ಸೂಕ್ತ ಜಾಗಗಳನ್ನು ಹುಡುಕಲಾಗುತ್ತಿದೆ. ಪ್ರಾರಂಭದ ಹಂತದಲ್ಲಿ ಕ್ಯಾಂಪ್ ಮೋಡ್ ನಲ್ಲಿ ಪಾಸ್ ಪೋರ್ಟ್ ಕೇಂದ್ರಗಳು ಕಾರ್ಯನಿರ್ವಹಿಸಲಿವೆ, ಎಲ್ಲವೂ ಸರಿಯಾದ ಬಳಿಕ ಪಾಸ್ ಪೋರ್ಟ್ ಕೇಂದ್ರಗಳಲ್ಲೇ ಎಲ್ಲಾ ಪ್ರಕ್ರಿಯೆಗಳೂ ನಡೆಯಲಿದ್ದು, ಪಾಸ್ ಪೋರ್ಟ್ ಪಡೆಯುವುದು ಮತ್ತಷ್ಟು ಸುಲಭವಾಗಲಿದೆ ಎಂದು ಹೇಳಿದ್ದಾರೆ.