ಹೊಸ ವರ್ಷಾಚರಣೆ ವೇಳೆ ಸಾಮೂಹಿಕ ಲೈಂಗಿಕ ದೌರ್ಜನ್ಯ: ಪೊಲೀಸರಿಂದ ಎಫ್ ಐ ಆರ್ ದಾಖಲು
ಬೆಂಗಳೂರು: ಹೊಸ ವರ್ಷಾಚರಣೆ ವೇಳೆ ಯುವತಿಯರ ಮೇಲೆ ನಡೆದಿದೆ ಎನ್ನಲಾದ ಲೈಂಗಿಕ ದೌರ್ಜನ್ಯ ಸಂಬಂಧ ಪೊಲೀಸರು ಎಫ್ ಐ ಆರ್ ದಾಖಲಿಸಿದ್ದಾರೆ.
ಪ್ರಕರಣ ನಡೆದ ನಂತರ ಕಳೆದ ಮೂರು ದಿನಗಳಿಂದ ಘಟನೆ ಬಗ್ಗೆ ಮಾಹಿತಿ ಕಲೆ ಹಾಕಲಾಗಿದೆ. ವಿಡಿಯೊ ತುಣುಕುಗಳಲ್ಲಿ ಕೆಲ ಪುರಾವೆಗಳು ಸಿಕ್ಕಿವೆ. ಹೀಗಾಗಿ ದೂರು ದಾಖಲಿಸಿಕೊಂಡಿದ್ದು, ತಪ್ಪಿತಸ್ಥರ ಪತ್ತೆ ಕಾರ್ಯ ನಡೆದಿದೆ ಈ ಹಂತದಲ್ಲಿ ಹೆಚ್ಚಿನ ಮಾಹಿತಿ ನೀಡಲು ಸಾದ್ವಿಲ್ಲ, ಇದರಿಂದ ತನಿಖೆಗೆ ತೊಂದರೆಯಾಗುತ್ತದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಪ್ರವೀಣ್ ಸೂದ್ ಸಿಟಿ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.
ಕೆಟ್ಟ ವರ್ತನೆ, ಲೈಂಗಿಕ ದೌರ್ಜನ್ಯ, ಮತ್ತು ದರೋಡೆ ಯತ್ನ ನಡೆಸಿದ ಆರೋಪದ ಮೇಲೆ ಎಫ್ ಐ ಆರ್ ದಾಖಲಿಸಲಾಗಿದ್ದು, ಸ್ವಯಂ ಪ್ರೇರಿತ ದೂರು ದಾಖಲಿಸಿರುವುದಾಗಿ ಮಂಗಳವಾರ ರಾತ್ರಿ 11 ಗಂಟೆಗೆ ಆಯುಕ್ತ ಪ್ರವೀಣ್ ಸೂದ್ ಟ್ವೀಟ್ ಮಾಡಿದ್ದಾರೆ.
ಡಿಸಿಪ್ ರ್ಯಾಂಕ್ ಮಟ್ಟದ ಅಧಿಕಾರಿ ತನಿಖೆ ಕೈಗೊಂಡಿದ್ದು, ಎಂ. ಜಿ ರಸ್ತೆ ಮತ್ತು ಬ್ರಿಗೇಡ್ ರಸ್ತೆಗಳಲ್ಲಿರುವ 45 ಕ್ಯಾಮೆರಾಗಳ ವಿಡಿಯೋಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಈ ಮೊದಲು ಪ್ರವೀಣ್ ಸೂದ್ ಟ್ಟೀಟ್ ಮಾಡಿದ್ದರು.
ಪಶ್ಚಿಮ ವಿಭಾಗದ ಹೆಚ್ಚುವರಿ ಆಯುಕ್ತೆ ಮಾಲಿನಿ ಕೃಷ್ಣಮೂರ್ತಿ ಮಾತನಾಡಿ, ತನಿಖೆಗೆ ಬೇಕಾಗಿರುವ ಹೆಚ್ಚಿನ ಸಿಸಿಟಿವಿ ದೃಶ್ಯಾವಳಿ ತರಲು ಡಿಸಿಪಿ ಅವರಿಗೆ ಸೂಚಿಸಿದ್ದೇನೆ, ಜೊತೆಗೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಜನರ ಸಾಕ್ಷಿಯನ್ನು ಪೊಲೀಸರು ಕಲೆ ಹಾಕುತ್ತಿದ್ದಾರೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ