ಹುಬ್ಬಳ್ಳಿಯ ಈ ಕ್ಯಾಂಟೀನ್ ನಲ್ಲಿ ಊಟಕ್ಕೆ ಕೇವಲ 1 ರೂಪಾಯಿ

ತಮಿಳುನಾಡಿನಲ್ಲಿ ಅಮ್ಮಾ ಕ್ಯಾಂಟೀನ್ ನಲ್ಲಿ ಇಡ್ಲಿ 1 ರೂಪಾಯಿಗೆ ಸಿಗುತ್ತದೆ...
ಹುಬ್ಬಳ್ಳಿಯ ರೋಟಿ ಘರ್ ಕ್ಯಾಂಟೀನ್
ಹುಬ್ಬಳ್ಳಿಯ ರೋಟಿ ಘರ್ ಕ್ಯಾಂಟೀನ್
ಹುಬ್ಬಳ್ಳಿ: ತಮಿಳುನಾಡಿನಲ್ಲಿ ಅಮ್ಮಾ ಕ್ಯಾಂಟೀನ್ ನಲ್ಲಿ ಇಡ್ಲಿ 1 ರೂಪಾಯಿಗೆ ಸಿಗುತ್ತದೆ. ಬೇರೆ ತಿಂಡಿ, ತಿನಿಸುಗಳು  ಕೂಡ ಅಗ್ಗದ ಬೆಲೆಯಲ್ಲಿ ದೊರಕುತ್ತದೆ ಎಂಬ ಕಾರಣಕ್ಕೆ ಇದು ದಕ್ಷಿಣ ಭಾರತದಲ್ಲಿಯೇ ಭಾರೀ ಹೆಸರುವಾಸಿ. ನಮ್ಮ ರಾಜ್ಯದಲ್ಲಿ ಕೂಡ ಇಂತಹದ್ದೇ ಒಂದು ಕ್ಯಾಂಟೀನ್ ಇದೆ ಎಂದರೆ ನಂಬುತ್ತೀರಾ? 
ಹೌದು, ಹುಬ್ಬಳ್ಳಿ ನಗರದ ಕಂಚ್ ಗರ್ ಗಲ್ಲಿಯಲ್ಲಿರುವ(ಪ್ರಥಮ್ ಶೆಟ್ಟಿ ಓಣಿ) ರೋಟಿ ಘರ್ ನಲ್ಲಿ 1 ರೂಪಾಯಿಗೆ ಊಟ ಸಿಗುತ್ತದೆ. ಊಟದ ಮೆನುವಿನಲ್ಲಿ ರೋಟಿ, ಅನ್ನ, ವೆಜಿಟೇಬಲ್ ಕರಿ ಮತ್ತು ಸಾಂಬಾರು ಇರುತ್ತದೆ. ಇನ್ನು  ಹಬ್ಬಹರಿದಿನ ಮತ್ತು ವಿಶೇಷ ಸಂದರ್ಭಗಳಲ್ಲಿ ಊಟಕ್ಕೆ ಯಾವುದಾದರೊಂದು ಸ್ವೀಟ್ ಕೂಡ ಇರುತ್ತದೆ.
ಈ ರೋಟಿ ಘರ್ ಆರಂಭವಾಗಿದ್ದು ಆರು ವರ್ಷಗಳ ಹಿಂದೆ. ಮಹವೀರ್ ಯುವ ಸಂಘಟನೆ ಇದನ್ನು ಸಮಾಜದಲ್ಲಿ ಏಕತೆಯ ಭಾವವನ್ನು ಮೂಡಿಸಲು, ಬಡತನವನ್ನು ಹೋಗಲಾಡಿಸಲು ಆರಂಭಿಸಲಾಯಿತು. ಕಲ್ಲಪ್ಪ ಮರೆಗುಂಪಿ ಎಂಬ ತರಕಾರಿ ಮಾರಾಟಗಾರ ಹೇಳುವ ಪ್ರಕಾರ, 2012ರಿಂದ ನಾನಿಲ್ಲಿ ಊಟ ಮಾಡುತ್ತಿದ್ದೇನೆ. ನಮ್ಮ  ಮನೆಯಲ್ಲಿನ ಊಟದ ರುಚಿಯೇ ಇಲ್ಲಿನ ಊಟಕ್ಕೂ ಇರುತ್ತದೆ. ಹಬ್ಬಗಳ ಸಂದರ್ಭದಲ್ಲಿ ಹೋಳಿಗೆ, ಜಿಲೇಬಿ, ಕರ್ಜಿಕಾಯಿ ಮೊದಲಾದ ಸ್ವೀಟ್ ಕೊಡುತ್ತಾರೆ. ಒಂದು ರೂಪಾಯಿಗೆ ಊಟ ಸಿಗುತ್ತಿರುವುದರಿಂದ ಸುತ್ತಮುತ್ತಲ ಬಡ ಬಗ್ಗರಿಗೆ ಎಷ್ಟೋ ಪ್ರಯೋಜನವಾಗಿದೆ ಎನ್ನುತ್ತಾರೆ.
 ಮಹವೀರ ಯೂತ್ ಫೆಡರೇಶನ್ ಆರಂಭದಲ್ಲಿ ಉಚಿತ ವೈದ್ಯಕೀಯ ಸೇವೆ ನೀಡಲು ಆಸ್ಪತ್ರೆಯನ್ನು ಪ್ರಾರಂಭಿಸಿತ್ತು. ಆದರೆ ವೈದ್ಯರ ಕೊರತೆಯಿಂದಾಗಿ ಅದು ಮುಚ್ಚಲ್ಪಟ್ಟಿತ್ತು. ನಂತರ ಕ್ಯಾಂಟೀನ್ ಆರಂಭಿಸಿ ಅದರಲ್ಲಿ ಯಶಸ್ವಿಯಾಯಿತು ಎನ್ನುತ್ತಾರೆ ಪಕ್ಕದ ಅಂಗಡಿಯ ವ್ಯಾಪಾರಿ ರಾಜೇಶ್  ಬಿಮಗೊಲ್. ''ಇದು ಸಣ್ಣ ಅಂಗಡಿಯಾದರೂ ಕೂಡ ಸ್ವಚ್ಛವಾಗಿದೆ. ಊಟ, ತಿಂಡಿ ತಿನಿಸು ರುಚಿಕರವಾಗಿರುವುದರಿಂದ ಅನೇಕರು ಇಲ್ಲಿಗೆ ಬರುತ್ತಾರೆ. ದಿನಕೂಲಿ ನೌಕರರಿಗೆ ಇದು ಅತ್ಯಂತ ಪ್ರಶಸ್ತ ಸ್ಥಳ. ಊಟದಲ್ಲಿ ಗುಣಮಟ್ಟ ಕಾಪಾಡಲಾಗಿದೆ ಎನ್ನುತ್ತಾರೆ ರಾಜೇಶ್.
ರೋಟಿ ಘರ್ ನ ಅಧ್ಯಕ್ಷ ತೇಜ್ ರಾಜ್ ಜೈನ್, ಉತ್ತರ ಕರ್ನಾಟಕ ಶೈಲಿಯ ಊಟವನ್ನು ಅತ್ಯಂತ ಕಡಿಮೆ ಬೆಲೆಗೆ ನೀಡಲಾಗುತ್ತದೆ. ನಾವು ಗ್ರಾಹಕರಿಂದ ಕೈಯಲ್ಲಿ ಹಣ ತೆಗೆದುಕೊಳ್ಳುವುದಿಲ್ಲ. ಬಾಕ್ಸೊಂದನ್ನು ಇಟ್ಟಿದ್ದು ಅದರಲ್ಲಿ ಗ್ರಾಹಕರು ಒಂದು ರೂಪಾಯಿ ಹಾಕುತ್ತಾರೆ. ರೋಟಿ ಘರ್ ಮಧ್ಯಾಹ್ನ 12 ಗಂಟೆಯಿಂದ ಅಪರಾಹ್ನ 3 ಗಂಟೆಯವರೆಗೆ ತೆರೆದಿರುತ್ತದೆ. ನಮ್ಮಲ್ಲಿ ಕೆಲಸ ಮಾಡುವ ಬಸವರಾಜ್ ಮೆಣಸಿನಕಾಯಿ, ಗೌರಮ್ಮ ತೊಟಗೇರಿ ಮತ್ತು ಸಾವಿತ್ರಮ್ಮ ಗ್ರಾಹಕರ ಸೇವೆ ಮಾಡುತ್ತಾರೆ ಎನ್ನುತ್ತಾರೆ.
''ನಾನು ರೋಟಿ ಘರ್ ನ ಖಾಯಂ ಗ್ರಾಹಕ. ಊಟ ಗುಣಮಟ್ಟವಾಗಿದ್ದು ರುಚಿಕರವಾಗಿರುತ್ತದೆ. ಊಟ ತಯಾರಿಸುವ ಸ್ಥಳ ಕೂಡ ಸ್ವಚ್ಛವಾಗಿರುತ್ತದೆ. ಅದರಲ್ಲಿ ರಾಜಿಯ ಪ್ರಶ್ನೆಯಿಲ್ಲ. ನಮಗೆ ಹೆಚ್ಚು ರೋಟಿ ಮತ್ತು ಅನ್ನ ಬೇಕೆಂದರೆ ಹೆಚ್ಚು ಹಣ ತೆಗೆದುಕೊಳ್ಳುವುದಿಲ್ಲ ಎನ್ನುತ್ತಾರೆ ಆಟೋ ಚಾಲಕ ತಿಪ್ಪಣ್ಣ ದೊಡ್ಡವಾಡ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com