
ಬೆಂಗಳೂರು: ಕುಮಾರಸ್ವಾಮಿ ಲೇಔಟ್'ನಲ್ಲಿರುವ ದಯಾನಂದ ಸಾಗರ್ ಕಾಲೇಜಿನ ಕಟ್ಟಡದಿಂದ ಬಿದ್ದು ಅಸ್ಸಾಂ ರಾಜ್ಯ ಮೂಲದ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಭಾನುವಾರ ನಡೆದಿದೆ.
ಜೆಹಾನ್ ಉಲ್ಲಾಹ್ ಆಲಂ (17) ಆತ್ಮಹತ್ಯೆ ಮಾಡಿಕೊಂಡಿರುವ ಯುವಕನಾಗಿದ್ದಾನೆ. ಆತ್ಮಹತ್ಯೆ ಮಾಡಿಕೊಂಡಿರುವ ಯುವಕ ಅಸ್ಸಾಂ ರಾಜ್ಯ ಮೂಲದವನಾಗಿದ್ದು, ದಯಾನಂದ ಸಾಗರ್ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದಲ್ಲಿ ಮೊದಲನೇ ವರ್ಷದ ಪಿಯುಸಿ ವಿದ್ಯಾಭ್ಯಾಸ ಮಾಡುತ್ತಿದ್ದ. ವೈಯಕ್ತಿಕ ಕಾರಣಗಳಿಂದ ನೊಂದು ಯುವಕ ಆತ್ಮಹತ್ಯೆಮಾಡಿಕೊಂಡಿದ್ದಾನೆಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ನಿನ್ನೆ ಮಧ್ಯಾಹ್ನ 2.30ರ ಸುಮಾರಿಗೆ ಘಟನೆ ನಡೆದಿದೆ. ಕಾಲೇಜಿನ ಹಾಸ್ಟೆಲ್ ನಲ್ಲು ಉಳಿದುಕೊಂಡಿದ್ದ ಆಲಂ ನಿನ್ನೆ ಮಧ್ಯಾಹ್ನ ಕಾಲೇಜಿನ ಮೂರನೇ ಮಹಡಿ ಮೇಲೆ ಹೋಗಿದ್ದಾನೆ. ಈವೇಳೆ ಕಟ್ಟಡದಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಕೆಳಗೆ ಬಿದ್ದ ಅಲಂನನ್ನು ಕಂಡ ಕೆಲ ವಿದ್ಯಾರ್ಥಿಗಳು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆಸ್ಪತ್ರೆಗೆ ಸಾಗಿಸುವ ವೇಳೆ ಆಲಂ ಕೊನೆಯುಸಿರೆಳೆದಿದ್ದಾನೆ. ಇನ್ನು ಆಲಂ ಇದ್ದ ಕೊಠಡಿಯಲ್ಲಿ ಡೆತ್'ನೋಟ್ ದೊರಕಿದ್ದು, ತನ್ನ ಸಾವಿಗೆ ಯಾರೂ ಕಾರಣರಲ್ಲ ಎಂದು ಹೇಳಿಕೊಂಡಿದ್ದಾನೆಂದು ತಿಳಿದುಬಂದಿದೆ.
ಪತ್ರದಲ್ಲಿ ಕೆಲ ವೈಯಕ್ತಿಯ ವಿಚಾರಗಳನ್ನು ವಿದ್ಯಾರ್ಥಿ ಹೇಳಿಕೊಂಡಿದ್ದು, ಪ್ರಸ್ತುತ ಪರಿಸ್ಥಿತಿಯಲ್ಲಿ ಆ ವಿಚಾರಗಳನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ. ಅಲ್ಲದೆ, ವಿದ್ಯಾರ್ಥಿ ತನ್ನ ಈ ನಿರ್ಧಾರಕ್ಕೆ ಪೋಷಕರ ಬಳಿ ಕ್ಷಮೆಯಾಚಿಸಿದ್ದಾನೆ. ಪ್ರಕರಣವನ್ನು ಎಲ್ಲಾ ರೀತಿಯ ಆಯಾಮಗಳು ನೋಡಿ ತನಿಖೆ ನಡೆಸಲಾಗುತ್ತಿದೆ.
ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಯ ಪೋಷಕರು ಇದೀಗ ಮುಂಬೈನಲ್ಲಿ ನೆಲೆಯೂರಿದ್ದು, ಈಗಾಗಲೇ ಅವರಿಗೆ ಮಾಹಿತಿ ನೀಡಲಾಗಿದೆ. ಪೋಷಕರ ಹೇಳಿಕೆಯನ್ನು ದಾಖಲೆ ಮಾಡಿಕೊಂಡ ನಂತರ ಮುಂದಿನ ಪ್ರಕ್ರಿಯೆಗಳನ್ನು ಕೈಗೊಳ್ಳಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement