ರೆವಿನ್ಯೂ ಇನ್ಸ್ ಪೆಕ್ಟರ್ ಆತ್ಮಹತ್ಯೆ ಪ್ರಕರಣ: ಕಾರ್ಪೋರೇಟರ್ ವಿರುದ್ಧ ಎಫ್ ಐಆರ್

ಬಿಬಿಎಂಪಿ ಕಂದಾಯ ನಿರೀಕ್ಷಕ ಎಚ್‌.ಸಿ ಶ್ರೀನಿವಾಸ್ ಆತ್ಮಹತ್ಯೆ ಪ್ರಕರಣ ಪ್ರಕರಣ ಸಂಬಂಧ ಸುಂಕೇನಹಳ್ಳಿ ಕಾರ್ಪೊರೇಟರ್‌ ಡಿ.ಎನ್‌ ರಮೇಶ್‌ ಸೇರಿದಂತೆ ನಾಲ್ವರ ...
ಎಚ್.ಸಿ ಶ್ರೀನಿವಾಸ್
ಎಚ್.ಸಿ ಶ್ರೀನಿವಾಸ್

ಬೆಂಗಳೂರು: ಬಿಬಿಎಂಪಿ ಕಂದಾಯ ನಿರೀಕ್ಷಕ ಎಚ್‌.ಸಿ ಶ್ರೀನಿವಾಸ್ ಆತ್ಮಹತ್ಯೆ ಪ್ರಕರಣ ಪ್ರಕರಣ ಸಂಬಂಧ ಸುಂಕೇನಹಳ್ಳಿ ಕಾರ್ಪೊರೇಟರ್‌ ಡಿ.ಎನ್‌ ರಮೇಶ್‌ ಸೇರಿದಂತೆ ನಾಲ್ವರ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

ಜನವರಿ 17 ರಂದು ಬಿಬಿಎಂಪಿ ರೆವಿನ್ಯೂ ಇನ್ಸ್ ಪೆಕ್ಟರ್ ಆಗಿದ್ದ ಎಚ್.ಸಿ ಶ್ರೀನಿವಾಸ್ ಶ್ರೀನಗರದ ತಮ್ಮ ಮನೆಯಲ್ಲಿ ಫ್ಯಾನ್ ಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ವೇಳೆ ಶ್ರೀನಿವಾಸ್ ಪತ್ನಿ ಗೀತಾ ಮಕ್ಕಳನ್ನು ಶಾಲೆಯಿಂದ ಕರೆತರಲು ಹೋಗಿದ್ದರು.

ಸಾಯುವ ಮುನ್ನ ಶ್ರೀನಿವಾಸ್ ಡೆತ್ ನೋಟ್ ಬರೆದಿದ್ದು ಅದರಲ್ಲಿ ತಮ್ಮ ಸಾವಿಗೆ ಮಾಜಿ ಕಾರ್ಪೊರೇಟರ್‌ ಪಿ.ಎನ್‌ ಸದಾಶಿವ, ಹಾಲಿ ಕಾರ್ಪೊರೇಟರ್‌ ಡಿ.ಎನ್‌ ರಮೇಶ್‌, ಕಂದಾಯ ನಿರೀಕ್ಷಕ ಎಂ.ವಿ ಸೋಮಶೇಖರ್‌ ಹಾಗೂ ಅರಕೆರೆ ವಿಭಾಗದ ಕಂದಾಯ ನಿರೀಕ್ಷಕ ಎನ್‌.ಪ್ರದೀಪ್‌ಕುಮಾರ್‌ ಕಾರಣ ಎಂದು ಬರೆದಿದ್ದಾರೆ ಎನ್ನಲಾಗಿದೆ.

ಡೆತ್ ನೋಟ್ ನಲ್ಲಿರುವ ವಿಷಯ

ವಾರ್ಡ್‌ ನಂಬರ್‌ 142ರ ಸುಂಕೇನಹಳ್ಳಿ ಕಂದಾಯ ನಿರೀಕ್ಷಕ ಎಂ.ವಿ ಸೋಮಶೇಖರ್‌ ಜಾಗಕ್ಕೆ ವರ್ಗವಾಗಿದ್ದ ನಾನು, 2016ರ ನ.14ರಂದು ಅಧಿಕಾರ ವಹಿಸಿಕೊಂಡಿದ್ದೆ. ಬಳಿಕ ಕಾರ್ಪೊರೇಟರ್‌ ರಮೇಶ್‌ ಹಾಗೂ ಮಾಜಿ ಕಾರ್ಪೊರೇಟರ್‌ ಪಿ.ಎನ್‌ ಸದಾಶಿವ ಅವರ ಮನೆಗೆ ತೆರಳಿ ವಿಷಯ ತಿಳಿಸಿದ್ದೆ. ಇದಾದ ನಂತರ ಕಾರ್ಪೊರೇಟರ್‌ ಹಾಗೂ ಉಳಿದವರು ಬಿಬಿಎಂಪಿ ಮುಖ್ಯ ಕಚೇರಿಗೆ ತೆರಳಿ ಬಿಬಿಎಂಪಿ ಆಯುಕ್ತರು ಹಾಗೂ ಆಡಳಿತ ವಿಭಾಗದ ಹೆಚ್ಚುವರಿ ಆಯುಕ್ತರ ಬಳಿ ಹೋಗಿ ನನ್ನ ವಿರುದ್ಧ ಇಲ್ಲ ಸಲ್ಲದ ಆಪಾದನೆ ಮಾಡಿದ್ದರು. ನಂತರ ಡಿ.14ರಂದು ಕೆಂಪೇಗೌಡ ನಗರಕ್ಕೆ ವರ್ಗಾವಣೆಗೊಂಡಿದ್ದ ಎಂ.ಬಿ ಸೋಮಶೇಖರ್‌ ಅವರನ್ನು ಪುನಃ ಸುಂಕೇನಹಳ್ಳಿ ವಾರ್ಡ್‌ಗೆ ವರ್ಗವಾಗಿ ಬರುವಂತೆ ಮಾಡಿದರು. ಈ ಎಲ್ಲ ಕಾರಣಗಳಿಂದ ನಾಲ್ವರ ಕಾಟಕ್ಕೆ ಮನನೊಂದು ಆತ್ಮಹತ್ಯೆಗೆ ಶರಣಾಗಿರುತ್ತೇನೆ. ಈ ನಾಲ್ಕು ಜನರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಕೋರುತ್ತೇನೆ ಎಂದು ಮರಣ ಪತ್ರದಲ್ಲಿ ಬರೆಯಲಾಗಿದೆ.

ಜನವರಿ 5 ರಂದು ಶ್ರೀನಿವಾಸ್ ಡೆತ್ ನೋಟ್ ಬರೆದಿದ್ದು, ಜನವರಿ 17 ರಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಶ್ರೀನಿವಾಸ್ ಆತ್ಮಹತ್ಯೆ ಪ್ರಕರಣ ಸಂಬಂಧ ಪೊಲೀಸರು ಇದುವರೆಗೂ ಯಾರನ್ನು ಬಂಧಿಸಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com