ಸೆಪ್ಟೆಂಬರ್ ನಲ್ಲಿ ಮುಖ್ಯಮಂತ್ರಿ ಅಮೆರಿಕಾಕ್ಕೆ; ನಾವಿಕ ಉತ್ಸವ ಉದ್ಘಾಟನೆ

ಹೂಡಿಕೆದಾರರ ಮನವೊಲಿಸಲು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಂತೆ ಮುಖ್ಯಮಂತ್ರಿ...
ಮುಖ್ಯಮಂತ್ರಿ ಸಿದ್ದರಾಮಯ್ಯ
ಮುಖ್ಯಮಂತ್ರಿ ಸಿದ್ದರಾಮಯ್ಯ
ಬೆಂಗಳೂರು: ಹೂಡಿಕೆದಾರರ ಮನವೊಲಿಸಲು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಹಾದಿಯನ್ನು ಅನುಸರಿಸಲು ಮುಂದಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಸೆಪ್ಟೆಂಬರ್ ನಲ್ಲಿ ಅಮೆರಿಕಾಕ್ಕೆ ಪ್ರವಾಸ ಹೋಗಲಿದ್ದಾರೆ.
 ಅವರು ಟೆಕ್ಸಾಸ್ ನ ದಲ್ಲಾಸ್ ನಲ್ಲಿ ಉತ್ತರ ಅಮೆರಿಕಾ ವಿಶ್ವ ಕನ್ನಡ ಒಕ್ಕೂಟ(ನಾವಿಕ) ಉತ್ಸವದಲ್ಲಿ ಭಾಗವಹಿಸಲಿದ್ದಾರೆ.  ಸೆಪ್ಟೆಂಬರ್ 1ರಿಂದ ಮೂರು ದಿನಗಳ  ಕಾಲ  ಉತ್ಸವ ನಡೆಯಲಿದೆ. 
ಮುಖ್ಯಮಂತ್ರಿಯಾದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮೊದಲ ಬಾರಿಗೆ ಅಮೆರಿಕಾಕ್ಕೆ ಭೇಟಿ ನೀಡುತ್ತಿದ್ದಾರೆ ಎಂದು ಸಂಘಟನೆ ಖಚಿತಪಡಿಸಿದೆ.  2015ರಲ್ಲಿ ಅವರು ಈ ಉತ್ಸವದ ಉದ್ಘಾಟನೆಗೆ ಬರಬೇಕಾಗಿತ್ತು.  ಆದರೆ ಪ್ರತಿಕೂಲ ಪರಿಸ್ಥಿತಿ ಕಾರಣದಿಂದಾಗಿ ಅವರಿಗೆ ಆಗ ಬರಲು ಸಾಧ್ಯವಾಗಿರಲಿಲ್ಲ. ಆದರೆ ಈ ವರ್ಷ ಅವರು ಬರುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ.
ಮುಖ್ಯಮಂತ್ರಿಯವರನ್ನು ಕಾರ್ಯಕ್ರಮಕ್ಕೆ ಅಧಿಕೃತವಾಗಿ ಆಹ್ವಾನಿಸಲು ನಾವಿಕ ಅಧ್ಯಕ್ಷ ಡಾ.ರೇಣುಕ ರಾಮಪ್ಪ ಮುಂದಿನ ತಿಂಗಳು ಬೆಂಗಳೂರಿಗೆ ಆಗಮಿಸಲಿದ್ದಾರೆ.
ಮುಖ್ಯಮಂತ್ರಿಯವರ ಜೊತೆ ಪ್ರವಾಸೋದ್ಯಮ ಸಚಿವ ಪ್ರಿಯಾಂಕ್ ಖರ್ಗೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಖಾತೆ ಸಚಿವೆ ಉಮಾಶ್ರೀ ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸಲು ತೆರಳಲಿದ್ದಾರೆ. ಕೊನೆ ಕ್ಷಣದಲ್ಲಿ ಯಾವುದೇ ತುರ್ತು ಸಂದರ್ಭಗಳು ಬಾರದಿದ್ದರೆ ಮುಖ್ಯಮಂತ್ರಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಅಮೆರಿಕಾಕ್ಕೆ ತೆರಳಲಿದ್ದಾರೆ ಎಂದು ಅವರ ಕಚೇರಿ ಮೂಲಗಳು ಕೂಡ ತಿಳಿಸಿವೆ. ಮುಖ್ಯಮಂತ್ರಿಯವರ ವಿಮಾನ ಪ್ರಯಾಣ ಮತ್ತು ವಸತಿ ವೆಚ್ಚವನ್ನು ರಾಜ್ಯ ಸರ್ಕಾರ ಭರಿಸುವುದಿಲ್ಲ ಎಂದು ಕೂಡ ಅಧಿಕಾರಿಗಳು ತಿಳಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಐಟಿ, ಬಿಟಿ ಮತ್ತು ಪ್ರವಾಸೋದ್ಯಮ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ, ನಾನು ಕೂಡ ಈ ವರ್ಷ ನಾವಿಕ ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆಯಿದ್ದು, ಕಳೆದ ಸಲ ಹೋಗಿದ್ದಾಗ ಸ್ಟಾರ್ಟ್ ಅಪ್ ಬಗ್ಗೆ ನಾನು ಪ್ರಸ್ತಾಪ ಮಾಡಿದ್ದೆ.  ಆಗ ಒಕ್ಕೂಟದ ಸದಸ್ಯರು ಅದರ ಮಾರ್ಗದರ್ಶಕರಾಗಲು ಒಪ್ಪಿಕೊಂಡಿದ್ದರು. ಈ ವರ್ಷ ಹೋದರೆ ಖಂಡಿತವಾಗಿಯೂ ಆ ಪ್ರಸ್ತಾಪವನ್ನು ಮತ್ತೆ ಮಾಡುತ್ತೇನೆ ಎಂದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com