ಹುಬ್ಬಳ್ಳಿ ಬಳಿ ಮಹಿಳೆಯರು ಮೊಳಕೆಯೊಡೆದ ಬೀಜಗಳಿಗೆ ನೀರುಣಿಸುತ್ತಿರುವುದು. ಮುಂಗಾರು ಮಳೆ ಕೊರತೆ ರೈತರನ್ನು ಕಂಗೆಡಿಸಿದೆ.
ರಾಜ್ಯ
ಮುಂಗಾರು ಮಳೆ ದುರ್ಬಲ: ಪರ್ಯಾಯ ಯೋಜನೆ ಕೈಗೊಂಡಿರುವ ಕೃಷಿ ಇಲಾಖೆ
ಮುಂಗಾರು ಮಳೆ ಈ ವರ್ಷ ರೈತರ ಜೊತೆ ಚೆಲ್ಲಾಟವಾಡುತ್ತಿರುವ ಸಂದರ್ಭದಲ್ಲಿ ಕೃಷಿ ಇಲಾಖೆ ಈಗಾಗಲೇ...
ಬೆಂಗಳೂರು: ಮುಂಗಾರು ಮಳೆ ಈ ವರ್ಷ ರೈತರ ಜೊತೆ ಚೆಲ್ಲಾಟವಾಡುತ್ತಿರುವ ಸಂದರ್ಭದಲ್ಲಿ ಕೃಷಿ ಇಲಾಖೆ ಈಗಾಗಲೇ ಪರ್ಯಾಯ ಯೋಜನೆಯನ್ನು ತಯಾರಿಸಲು ಆರಂಭಿಸಿದ್ದು, ಅದರಡಿ ಆಗಸ್ಟ್ ಕೊನೆಯ ಹೊತ್ತಿಗೆ ರೈತರಿಗೆ ಅಲ್ಪಾವಧಿಯ ಸಾಲ ನೀಡಲಾಗುತ್ತದೆ. ಈ ಯೋಜನೆಯಡಿ ರಾಗಿ, ಕಡಲೆಕಾಯಿ ಇತ್ಯಾದಿ ಬೆಳೆಗಳನ್ನು ನಾಲ್ಕರಿಂದ ಐದು ತಿಂಗಳಲ್ಲಿ ಬೆಳೆಯುವುದಾಗಿದೆ. ಈ ಮೂಲಕ ರೈತರು ಬೆಳೆಯಿಲ್ಲದೆ ಆರ್ಥಿಕ ಸಂಕಷ್ಟ ಎದುರಿಸದಂತೆ ನೋಡಿಕೊಳ್ಳಲಾಗುತ್ತಿದೆ.
ದೆಹಲಿಯಲ್ಲಿರುವ ಭಾರತೀಯ ಕೃಷಿ ಸಂಶೋಧನಾ ಮಂಡಳಿ, ಹೈದರಾಬಾದ್ ನಲ್ಲಿರುವ ಒಣಭೂಮಿ ಕೃಷಿ ಕೇಂದ್ರ ಸಂಶೋಧನಾ ಸಂಸ್ಥೆ ಮತ್ತು ರಾಜ್ಯ ಕೃಷಿ ವಿಶ್ವವಿದ್ಯಾಲಯಗಳ ಸಲಹೆ ಪಡೆದು ಮಳೆ ವಿಳಂಬವಾಗಿರುವುದಕ್ಕೆ ಉಪ ಬ್ಲಾಕ್ ಗಳನ್ನು ತಯಾರಿಸಿದ್ದೇವೆ. ಬೀಜಗಳನ್ನು ಬೆಳೆಸಿ ರೈತರಿಗೆ ನೀಡಲಾಗುವುದು. ಜುಲೈ ಕೊನೆಯವರೆಗೆ ಬೀಜ ಬಿತ್ತಲು ಸಮಯವಿದೆ. ಮಳೆ ಬಿದ್ದರೆ ಆಗಸ್ಟ್ ತಿಂಗಳಲ್ಲಿ ಬೀಜಗಳನ್ನು ರೈತರಿಗೆ ವಿತರಿಸಲಾಗುವುದು ಎಂದು ಕೃಷಿ ಆಯುಕ್ತ ಜಿ.ಸತೀಶ್ ತಿಳಿಸಿದ್ದಾರೆ.
ರಾಜ್ಯದ 73 ಲಕ್ಷ ಹೆಕ್ಟೇರ್ ಕೃಷಿ ಜಮೀನಿನಲ್ಲಿ ಜೂನ್ ಕೊನೆಯ ಹೊತ್ತಿಗೆ 21.18 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೀಜ ಬಿತ್ತನೆ ಆರಂಭಿಸಲಾಗಿದೆ. ದಕ್ಷಿಣ ಒಳ ಪ್ರದೇಶಗಳಲ್ಲಿ ರಾಗಿ, ಕಡಲೆಕಾಯಿ ಇತ್ಯಾದಿ ಬೀಜಗಳನ್ನು ಬಿತ್ತಲು ಜುಲೈ ಕೊನೆಯವರೆಗೆ ಸಮಯವಿದೆ. ಉತ್ತರ ಒಳನಾಡು ಭಾಗಗಳಲ್ಲಿ ಜುಲೈ ಕೊನೆಯವರೆಗೆ ಜೋಳ, ಮೆಕ್ಕೆ ಜೋಳ, ಬಜ್ರಾ, ಕೆಂಪುಗ್ರಾಮ ಮತ್ತು ಸೋಯಾ ಬೀಜಗಳನ್ನು ಬಿತ್ತಬಹುದು. ಈ ವರ್ಷ ಪೂರ್ವ ಮುಂಗಾರು ಮಳೆ ವಿಶೇಷವಾಗಿ ದಕ್ಷಿಣ ಒಳನಾಡಿನಲ್ಲಿ ಅಧಿಕವಾಗಿತ್ತು ಎಂದು ಆಯುಕ್ತ ಸತೀಶ್ ಹೇಳುತ್ತಾರೆ.
ಮೈಸೂರು, ಮಂಡ್ಯ, ಚಾಮರಾಜನಗರ ಇತ್ಯಾದಿ ಜಿಲ್ಲೆಗಳಲ್ಲಿ ಬೀಜ ಬಿತ್ತನೆ ಏಪ್ರಿಲ್, ಮೇ ತಿಂಗಳಲ್ಲಿ ನಡೆದಿದೆ.ಈ ವರ್ಷ ಜೂನ್ 7ಕ್ಕೆ ಮುಂಗಾರು ರಾಜ್ಯವನ್ನು ಪ್ರವೇಶಿಸಿದ್ದು ಎಲ್ಲಾ ಜಿಲ್ಲೆಗಳನ್ನು ತಲುಪುವ ಹೊತ್ತಿಗೆ ಜೂನ್ 12 ಆಗಿತ್ತು. ಆದರೆ ಮಳೆ ಎಲ್ಲಾ ಕಡೆ ಸಾಕಷ್ಟು ಬಿದ್ದಿಲ್ಲ. ಮೊನ್ನೆ ಶುಕ್ರವಾರದ ಅಂಕಿಅಂಶ ಪ್ರಕಾರ, 18 ಜಿಲ್ಲೆಗಳಲ್ಲಿ ಈ ವರ್ಷ ಮಳೆಯ ಕೊರತೆ ಕಂಡುಬಂದಿದೆ. 176 ತಾಲ್ಲೂಕುಗಳಲ್ಲಿ 104 ತಾಲ್ಲೂಕುಗಳಲ್ಲಿ ಮಳೆಯ ಕೊರತೆಯಾಗಿದೆ. ಗದಗ, ಹಾವೇರಿ, ಬೆಳಗಾವಿ, ಬಳ್ಳಾರಿ ಮತ್ತು ಧಾರವಾಡಗಳಲ್ಲಿ ಮಳೆಯ ಕೊರತೆ ತೀವ್ರವಾಗಿದೆ.
ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣೆ ಕೇಂದ್ರದ ನಿರ್ದೇಶಕ ಶ್ರೀನಿವಾಸ ರೆಡ್ಡಿ ಅವರ ಪ್ರಕಾರ, ಜೂನ್ 1ರಿಂದ ಜುಲೈ 4ರವರೆಗೆ ಈ ವರ್ಷ ಸರಾಸರಿ ಮಳೆಯ ಪ್ರಮಾಣ 232 ಮಿಲಿ ಮೀಟರ್ ಇದ್ದು, ಅದರಲ್ಲಿ ಇದುವರೆಗೆ 210 ಮಿಲಿ ಮೀಟರ್ ಮಳೆಯಾಗಿದೆ.
ಶೇಕಡಾ 8ರಷ್ಟು ಮಳೆಯ ಕೊರತೆಯುಂಟಾಗಿದೆ. ದಕ್ಷಿಣ ಒಳನಾಡು ಭಾಗಗಳ ಮೇಲೆ ತೀವ್ರ ಹಾನಿಯುಂಟಾಗಿದೆ. ಕೊಡಗು ಜಿಲ್ಲೆಯಲ್ಲಿ ಈ ವರ್ಷ ಶೇಕಡಾ 34ರಷ್ಟು ಮಳೆಯ ಕೊರತೆಯುಂಟಾಗಿದೆ. ಮುಂದಿನ ಒಂದು ವಾರದವರೆಗೆ ಉತ್ತಮ ಮಳೆಯಾಗುವ ನಿರೀಕ್ಷೆಯಿಲ್ಲ ಎಂದು ಹೇಳುತ್ತಾರೆ.
ಇತ್ತೀಚಿನ ಅಂಕಿಅಂಶ ಪ್ರಕಾರ, ದಕ್ಷಿಣ ಒಳನಾಡಿನಲ್ಲಿ ಶೇಕಡಾ 40ರಷ್ಟು ಮಳೆಯ ಕೊರತೆಯುಂಟಾಗಿದ್ದು, ಶಿವಮೊಬ್ಬ ಹೊರತುಪಡಿಸಿ ಮಲೆನಾಡಿನಲ್ಲಿ ಶೇಕಡಾ 24ರಷ್ಟು ಮಳೆಯ ಕೊರತೆಯುಂಟಾಗಿದೆ. ಕರಾವಳಿ ಕರ್ನಾಟಕ ಭಾಗಗಳಲ್ಲಿ ಸಾಧಾರಣ ಮಳೆಯಾಗಿದೆ. ಮುಂದಿನ ಎರಡು ವಾರಗಳವರೆಗೆ ಉತ್ತಮ ಮಳೆಯಾಗುವ ನಿರೀಕ್ಷೆಯಿಲ್ಲ ಎಂದು ಶ್ರೀನಿವಾಸ್ ರೆಡ್ಡಿ ಹೇಳಿದರು.
ತೇವಾಂಶದ ಕೊರತೆ ಬೆಳೆ ಮೇಲೆ ಹಾನಿ: ಮೇ ಆರಂಭದಲ್ಲಿ ಬೀಜ ಬಿತ್ತಲು ಆರಂಭಿಸಿದ್ದ ಚಾಮರಾಜನಗರ, ಮೈಸೂರು, ಮಂಡ್ಯ ಜಿಲ್ಲೆಗಳ ರೈತರು ಇದೀಗ ಸಂಕಷ್ಟದಲ್ಲಿದ್ದಾರೆ. ಕಾಳುಗಳು, ಜೋಳ, ಹತ್ತಿ ಮತ್ತು ಸೂರ್ಯಕಾಂತಿಯ ಬೆಳೆಗಳನ್ನು ಬೆಳೆಯಲು ಇಲ್ಲಿ ರೈತರು ಬೇಗನೆ ಆರಂಭಿಸಿದ್ದರು. ಬೀಜ ಬಿತ್ತಿದ ನಂತರ ತೇವಾಂಶವಿದ್ದರೆ ತೊಂದರೆಯಾಗುವುದಿಲ್ಲ. ಇಲ್ಲದಿದ್ದರೆ ಬೀಜಗಳು ಮಣ್ಣಿನಲ್ಲಿ ಹಾಳಾಗಿ ಹೋಗುತ್ತವೆ. ವಾತಾವರಣದಲ್ಲಿ ವಿಪರೀತ ಗಾಳಿ ಬಂದರೆ ಮಣ್ಣಿನಲ್ಲಿ ತೇವಾಂಶ ಕೊರತೆಯುಂಟಾಗುತ್ತದೆ ಎಂದು ಕೃಷಿ ಇಲಾಖೆ ನಿರ್ದೇಶಕ ಬಿ.ವೈ.ಶ್ರೀನಿವಾಸ್ ಹೇಳುತ್ತಾರೆ.
ರಾಜ್ಯದಲ್ಲಿ ಶೇ.66 ಟ್ಯಾಂಕುಗಳು ಒಣಗಿವೆ. ರಾಜ್ಯದ 3,602 ಬೃಹತ್ ನೀರಾವರಿ ಟ್ಯಾಂಕುಗಳ ಪೈಕಿ ಶೇಕಡಾ 2ರಷ್ಟು ಮಾತ್ರ ಶೇಕಡಾ 50ಕ್ಕಿಂತ ಹೆಚ್ಚು ನೀರಿನ ಸಂಗ್ರಹವನ್ನು ಹೊಂದಿದ್ದು ಶೇಕಡಾ 32ರಷ್ಟು ಟ್ಯಾಂಕುಗಳು ಶೇಕಡಾ 30ರಿಂದ 50ರಷ್ಟು ನೀರಿನ ಸಂಗ್ರಹ ಹೊಂದಿವೆ. ಇನ್ನು ಶೇಕಡಾ 66ರಷ್ಟು ಟ್ಯಾಂಕುಗಳು ಬರಡಾಗಿವೆ.
ಕಳೆದ 15 ವರ್ಷಗಳ ಸರಾಸರಿ ನೋಡಿದರೆ ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ನೀರಿನ ಮಟ್ಟ ಕಡಿಮೆಯಾಗಿದೆ. ಲಿಂಗನಮಕ್ಕಿ, ಹಾರಂಗಿ, ಹೇಮಾವತಿ, ಕೆಆರ್ಎಸ್ ಮತ್ತು ಭದ್ರಾ ಜಲಾಶಯಗಳಲ್ಲಿ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ವರ್ಷ ನೀರಿನ ಪ್ರಮಾಣ ಕಡಿಮೆಯಾಗಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ