ಮಂಗಳೂರಿನ ಎಸ್.ಸಿ/ಎಸ್.ಟಿ ಹಾಸ್ಟೆಲ್ ನಲ್ಲಿ ಕಾಸರಗೋಡು ಕನ್ನಡಿಗರಿಗೆ ಪ್ರವೇಶ ನಿರಾಕರಣೆ

ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಪ್ರಥಮ ದರ್ಜೆಯಲ್ಲಿ ತೇರ್ಗಡೆ ಹೊಂದಿದ ಬಬಿತಾಳಿಗೆ ಮುಂದೆ ಶಿಕ್ಷಣವನ್ನು....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಮಂಗಳೂರು: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಪ್ರಥಮ ದರ್ಜೆಯಲ್ಲಿ ತೇರ್ಗಡೆ ಹೊಂದಿದ ಬಬಿತಾಳಿಗೆ ಮುಂದೆ ಶಿಕ್ಷಣವನ್ನು ಮುಂದುವರಿಸಿ ಆರ್ಥಿಕವಾಗಿ ಸ್ವಾವಲಂಬಿಯಾಗುವ ಕುರಿತು ಖಾತರಿಯಿಲ್ಲ.
ಮಂಗಳೂರಿನ ಸುತ್ತಮುತ್ತ ಇರುವ ಸರ್ಕಾರಿ ಹಾಸ್ಟೆಲ್ ನಲ್ಲಿ ಎಸ್ ಸಿ/ಎಸ್ ಟಿ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರವೇಶ ನಿರಾಕರಿಸುತ್ತಿದ್ದಾರೆ.  ಮಂಗಳೂರು ಸಮೀಪ ಕಾವೂರಿನ ಹತ್ತಿರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರವೇಶ ಪಡೆಯಬೇಕೆಂಬ ಬಬಿತಾಳ ಪ್ರಯತ್ನಕ್ಕೆ ಇದುವರೆಗೆ ಫಲ ಸಿಕ್ಕಿಲ್ಲ. 
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳಿಗಾಗಿ ಇರುವ ಸರ್ಕಾರಿ ಹಾಸ್ಟೆಲ್ ನಲ್ಲಿ ಬಬಿತಾಳಿಗೆ ಪ್ರವೇಶ ನಿರಾಕರಿಸಿದ್ದಾರೆ. ಅದಕ್ಕೆ ಕಾರಣ ಆಕೆ ಕಾಸರಗೋಡು ಜಿಲ್ಲೆಯವರೆಂದು.
ಬಬಿತಾ ಮುಗೇರ ಸಮುದಾಯಕ್ಕೆ ಸೇರಿದವಳು. ಕೇರಳದ ಕಾಸರಗೋಡು ಜಿಲ್ಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಓದಿದವಳು. ಪಿಯುಸಿ ವಿದ್ಯಾಭ್ಯಾಸವನ್ನು ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಲ್ಲಿ ಮುಗಿಸಿದಳು. ಮುಂದೆ ಡಿಗ್ರಿಯಲ್ಲಿ ಮಂಗಳೂರಿನ ಸರ್ಕಾರಿ ಕಾಲೇಜಿನಲ್ಲಿ ಮತ್ತು ಹಾಸ್ಟೆಲ್ ನಲ್ಲಿ ಪ್ರವೇಶ ಸಿಗಬಹುದೆಂದು ಭಾವಿಸಿದ್ದಳು. ಆದರೆ ಅದಕ್ಕೀಗ ಬೇರೆ ರಾಜ್ಯದ ಜಿಲ್ಲೆಯವಳೆಂದು ಅಡ್ಡಿ, ಆತಂಕ ಎದುರಾಗಿದೆ.
ಇದು ಕೇವಲ ಬಬಿತಾಳಿಗೊಬ್ಬಳಿಗೆ ಎದುರಾದ ಸಮಸ್ಯೆಯಲ್ಲ. ಕಲಿಕೆಯಲ್ಲಿ ಮುಂದಿರುವ ಕಾಸರಗೋಡು ಜಿಲ್ಲೆಯ ಅನೇಕ ವಿದ್ಯಾರ್ಥಿಗಳಿಗೆ ಮುಖ್ಯವಾಗಿ ಹೆಣ್ಣು ಮಕ್ಕಳು ಎಸ್ ಸಿ/ ಎಸ್ ಟಿ ಹಾಸ್ಟೆಲ್ ನಲ್ಲಿ ಪ್ರವೇಶ ನೀಡಿಲ್ಲವೆಂದು ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸಿದ ಉದಾಹರಣೆಗಳಿವೆ.ಇದರಿಂದಾಗಿ ಕಾಸರಗೋಡಿನಿಂದ ಮಂಗಳೂರಿಗೆ ಒಂದು ಗಂಟೆಗೂ ಅಧಿಕ ಕಾಲ ಪ್ರಯಾಣಿಸಿ ಕಾಲೇಜಿಗೆ ಹೋಗಿ ಕಲಿಯುವವರು ಕೂಡ ಇದ್ದಾರೆ ಎಂದು ಡಾ.ಪಿ.ದಯಾನಂದ ಪೈ-ಪಿ. ಸತೀಶ್ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ರಾಜಶೇಖರ್ ಹೆಬ್ಬಾರ್ ಸಿ ಹೇಳುತ್ತಾರೆ. ಈ ಕಾಲೇಜಿನಲ್ಲಿ ಕಾಸರಗೋಡು ಜಿಲ್ಲೆಯ 250 ವಿದ್ಯಾರ್ಥಿನಿಯರು ವ್ಯಾಸಂಗ ಮಾಡುತ್ತಿದ್ದಾರೆ.
ಕಾಸರಗೋಡು ಜಿಲ್ಲೆಯ ಎಸ್.ಸಿ/ಎಸ್.ಟಿ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ನಲ್ಲಿ ಪ್ರವೇಶ ನಿರಾಕರಿಸಿರುವುದರಲ್ಲಿ ಯಾವುದೇ ತಪ್ಪಿಲ್ಲ ಎನ್ನುತ್ತಾರೆ ಮಂಗಳೂರು ಜಂಟಿ ನಿರ್ದೇಶಕ ಉದಯಶಂಕರ್ ಹೆಚ್.
ಹೆಸರು ಹೇಳಲಿಚ್ಛಿಸದ ಕಾಲೇಜಿನ ಪ್ರಾಂಶುಪಾಲರೊಬ್ಬರು, ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ಮಾಹಿತಿ ನೀಡಿ, ಕಾಲೇಜು ಶಿಕ್ಷಣ ಆಯುಕ್ತರಿಗೆ ಪತ್ರ ಬರೆದಿದ್ದು, ಅದರಲ್ಲಿ ಕಾಸರಗೋಡು ಕನ್ನಡಿಗರಿಗೆ ಗಡಿನಾಡು ಕನ್ನಡಿಗ ವಿಭಾಗದಲ್ಲಿ ಎಲ್ಲಾ ರೀತಿಯ ಸೌಲಭ್ಯ ನೀಡಬೇಕೆಂದು ಒತ್ತಾಯಿಸಲಾಗಿದೆ ಎಂದು ಹೇಳಿದ್ದಾರೆ.
ಪ್ರಸ್ತುತ ಕಾಸರಗೋಡು ಜಿಲ್ಲೆಯ ವಿದ್ಯಾರ್ಥಿಗಳನ್ನು ಸಾಮಾನ್ಯ ಅರ್ಹತೆ ವಿದ್ಯಾರ್ಥಿಗಳು ಎಂದು ಪರಿಗಣಿಸಲಾಗುತ್ತಿದ್ದು ಬಸ್ ಪಾಸು ಸೌಲಭ್ಯವನ್ನು ಮಾತ್ರ ಹೊಂದಿದ್ದಾರೆ ಎಂದರು.
ದಕ್ಷಿಣ ಕನ್ನಡ ಸಾಮಾಜಿಕ ಅಭಿವೃದ್ಧಿ ಅಧಿಕಾರಿ ಜಿ.ಸಂತೋಷ್ ಕುಮಾರ್, ಎಕ್ಸ್ ಪ್ರೆಸ್ ಪತ್ರಿಕೆಯ ಕರೆಗೆ ಅಥವಾ ಎಸ್ಎಂಎಸ್ ಗೆ ಪ್ರತಿಕ್ರಿಯಿಸಿಲ್ಲ. ಮಂಗಳೂರು ಶಾಸಕ ಮತ್ತು ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತರ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಜೆ.ಆರ್.ಲೊಬೊ, ಸಾಮಾಜಿಕ ಕಲ್ಯಾಣ ಇಲಾಖೆ ಸಚಿವ ಆಂಜನೇಯ ಅವರಿಗೆ ಮನವಿ ಮಾಡಲಾಗಿದ್ದು, ಎಸ್.ಸಿ/ಎಸ್.ಟಿ ಹಾಸ್ಟೆಲ್ ಗಳಲ್ಲಿ ಕಾಸರಗೋಡು ಜಿಲ್ಲೆಯ ವಿದ್ಯಾರ್ಥಿಗಳ ದಾಖಲಾತಿಗೆ ಮನವಿ ಮಾಡಲಾಗಿದೆ ಎಂದು ಹೇಳಿದರು.
ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಡಾ.ಎಮ್. ಅಣ್ಣಯ್ಯ ಕುಲಾಲ್ ಈ ವಿಷಯವನ್ನು ಉನ್ನತ ಮಟ್ಟದಲ್ಲಿ ತೆಗೆದುಕೊಂಡು ಹೋಗುವುದಾಗಿ ಭರವಸೆ ನೀಡಿದ್ದಾರೆ.
ಸರ್ಕಾರಿ ಹಾಸ್ಟೆಲ್ ಗಳು ಅಲಭ್ಯ: ಮಂಗಳೂರಿನಲ್ಲಿ ಡಿಗ್ರಿ ಕಾಲೇಜುಗಳು ಜೂನ್ 15ರಂದು ಆರಂಭಗೊಂಡಿವೆ. ಆದರೆ ಎಸ್.ಸಿ/ಎಸ್.ಟಿ ಮತ್ತು ಇತರ ಹಿಂದುಳಿದ ಸಮುದಾಯಗಳಿಗೆ ಸರ್ಕಾರಿ ಹಾಸ್ಟೆಲ್ ಗಳು ಇನ್ನೂ ಆರಂಭಗೊಂಡಿಲ್ಲ. ಸಮಾಜ ಕಲ್ಯಾಣ ಇಲಾಖೆ ಇನ್ನೂ ಅರ್ಜಿಗಳನ್ನು ಸ್ವೀಕರಿಸುತ್ತಿದ್ದು ಜುಲೈ 15 ನ್ನು ಕೊನೆಯ ದಿನಾಂಕ ಎಂದು ನಿಗದಿಪಡಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com