ರೈತರಿಂದ ನೇರವಾಗಿ ಗ್ರಾಹಕರಿಗೆ; ಮೈಸೂರಿನ ರೈತರ ಯಶೋಗಾಥೆ!

ರೈತ ಸಮುದಾಯ ಮತ್ತು ಗ್ರಾಹಕರಿಗೆ ಅನುಕೂಲವಾಗಲು ಮೈಸೂರಿನ ರೈತರ ಸಮೂಹವೊಂದು ಕಂಪೆನಿ ರಚಿಸಿದ್ದು...
ಮೈಸೂರಿನಲ್ಲಿ ತಾವು ಬೆಳೆದ ಟೊಮ್ಯಾಟೊಗಳನ್ನು ಲಾರಿಗೆ ಹಾಕಲು ಕಾಯುತ್ತಿರುವ ರೈತರು
ಮೈಸೂರಿನಲ್ಲಿ ತಾವು ಬೆಳೆದ ಟೊಮ್ಯಾಟೊಗಳನ್ನು ಲಾರಿಗೆ ಹಾಕಲು ಕಾಯುತ್ತಿರುವ ರೈತರು
ಮೈಸೂರು: ರೈತ ಸಮುದಾಯ ಮತ್ತು ಗ್ರಾಹಕರಿಗೆ ಅನುಕೂಲವಾಗಲು ಮೈಸೂರಿನ ರೈತರ ಸಮೂಹವೊಂದು ಕಂಪೆನಿ ರಚಿಸಿದ್ದು ಮಾರುಕಟ್ಟೆ ದರದಲ್ಲಿ ತರಕಾರಿಗಳನ್ನು ಗ್ರಾಹಕರಿಗೆ ಪೂರೈಕೆ ಮಾಡುತ್ತಿದೆ.  
ಕರ್ನಾಟಕ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರಬೂರು ಶಾಂತಕುಮಾರ್ ಅವರ ಕಲ್ಪನೆಯ ಕೂಸಾಗಿರುವ ರೈತ ಮಿತ್ರ ರೈತ ಬೆಳೆಗಾರರ ಸಂಘ ಕಂಪೆನಿಯು ಕೇರಳದ ಸರ್ಕಾರಿ ಸೊಸೈಟಿಗಳಿಗೆ ಪ್ಯಾಕ್ ಮಾಡಿದ ಶುದ್ಧ ತರಕಾರಿಗಳನ್ನು ಕಳೆದ ಅನೇಕ ತಿಂಗಳುಗಳಿಂದ ಪೂರೈಕೆ ಮಾಡುತ್ತಿದೆ. ಇಲ್ಲಿಯವರೆಗೆ ಸುಮಾರು ಒಂದೂವರೆ ಕೋಟಿ ರೂಪಾಯಿ ವ್ಯವಹಾರ ಕಂಪೆನಿ ನಡೆಸಿದೆ.
ನಮ್ಮ ರಾಜ್ಯದ ಮೈಸೂರು, ಚಾಮರಾಜನಗರ, ಧಾರವಾಡ, ಬೆಳಗಾವಿ, ಕಾರವಾರ ಮತ್ತು ಹಾವೇರಿ ಜಿಲ್ಲೆಗಳ ಸುಮಾರು 1,200 ಮಂದಿ ಈ ಕಂಪೆನಿಗೆ ಸದಸ್ಯರಾಗಿದ್ದು ಇವರು ಕೂಡ ತರಕಾರಿಗಳನ್ನು ರೈತರಿಂದ ನೇರವಾಗಿ ಖರೀದಿಸುತ್ತಾರೆ. 
ಮಾರುಕಟ್ಟೆ ದರದಲ್ಲಿ ಗ್ರಾಹಕರಿಗೆ ಸ್ವಚ್ಛ ಮತ್ತು ಶುದ್ಧ ತರಕಾರಿಗಳನ್ನು ಪೂರೈಸಲು ಈ ಕಂಪೆನಿಯನ್ನು ಸ್ಥಾಪಿಸಲಾಗಿದೆ. ಇಲ್ಲಿಯವರೆಗೆ ಕೇರಳಕ್ಕೆ ಸುಮಾರು 1,500 ಟನ್ ತರಕಾರಿಗಳನ್ನು ಪೂರೈಸಲಾಗಿದೆ ಎಂದರು.
ಕಂಪೆನಿಯು ರೈತರಿಗೆ ರಸಗೊಬ್ಬರಗಳನ್ನು ಕಡಿಮೆ ದರಕ್ಕೆ ಸರಬರಾಜು ಮಾಡುತ್ತಿದೆ. ಇದಕ್ಕೆ ಪ್ರತಿಯಾಗಿ ರೈತರು ತರಕಾರಿಗಳನ್ನು ಸರ್ಕಾರಿ ಸೊಸೈಟಿಗಳಿಗೆ ಪೂರೈಕೆ ಮಾಡುತ್ತಾರೆ. ಹೀಗಾಗಿ ರೈತರು ಇದೀಗ ಮಧ್ಯವರ್ತಿಗಳ ಕಿರಿಕಿರಿಯನ್ನು ಅನುಭವಿಸಬೇಕಾಗಿಲ್ಲ ಎಂದು ಹೇಳಿದರು.
ಅಧಿಕ ಬೆಲೆ ನೀಡಿ ತರಕಾರಿ ಕೊಳ್ಳುವುದರ ಬದಲಾಗಿ ಇಂದು ರೈತರು ಮೈಸೂರಿನ ಕೃಷಿ ಉತ್ಪಾದಕರ ಮಾರುಕಟ್ಟೆ ಸಮಿತಿಯಲ್ಲಿ(ಎಪಿಎಂಸಿ) ಚಾಲ್ತಿಯಲ್ಲಿರುವ ದರದಂತೆ ಒಳ್ಳೆಯ ತರಕಾರಿಗಳನ್ನು ಖರೀದಿಸಬಹುದು. ಇಲ್ಲಿ ಟೊಮ್ಯಾಟೊ ಮತ್ತು ಕುಂಬಳಕಾಯಿಯನ್ನು ಕಿಲೋಗೆ 6 ರೂಪಾಯಿಯಂತೆ ಮಾರಾಟ ಮಾಡಲಾಗುತ್ತದೆ.  
ರೈತರು ಕಮಿಷನ್ ನೀಡಬೇಕಾಗಿಲ್ಲ ಮತ್ತು ಅವರನ್ನು ಇನ್ನು ಮುಂದೆ ಮೋಸ ಮಾಡುವವರು ಕೂಡ ಇಲ್ಲ ಎನ್ನುತ್ತಾರೆ ಶಾಂತಕುಮಾರ್.
ಕೇರಳದ ಕೆಲವು ಸೊಸೈಟಿಗಳ ಜೊತೆ ಒಪ್ಪಂದ ಮಾಡಿಕೊಂಡಿರುವ ಕಂಪೆನಿ ಸೇವಾ ಶುಲ್ಕ ತೆಗೆದುಕೊಳ್ಳುತ್ತದೆ. ಎಪಿಎಂಸಿಗಳಲ್ಲಿ ರೈತರು ಕುಂಬಳಕಾಯಿಯನ್ನು ಕಿಲೋಗೆ 3 ರೂಪಾಯಿಯಂತೆ ಮಾರಾಟ ಮಾಡುತ್ತಾರೆ. ನಮ್ಮ ಕಂಪೆನಿಯಲ್ಲಿ ರೈತರಿಂದ 6 ರೂಪಾಯಿಗೆ ಕುಂಬಳಕಾಯಿ ಖರೀದಿಸಿ  ಲಾಭವನ್ನು ಹಿಂದಿರುಗಿಸುತ್ತೇವೆ. ತರಕಾರಿ ಬೆಲೆ ಕುಸಿತವಾದರೆ ರೈತರು ಸಂಕಷ್ಟಕ್ಕೀಡಾಗಬಾರದು ಎಂಬುದು ನಮ್ಮ ಉದ್ದೇಶ ಎನ್ನುತ್ತಾರೆ ಶಾಂತಕುಮಾರ್.
ಕಂಪೆನಿ ಮೂಲಕ ಗೊಬ್ಬರ ಪೂರೈಕೆ: ಮುಕ್ತ ಮಾರುಕಟ್ಟೆಗಿಂತ 40 ರೂಪಾಯಿ ಕಡಿಮೆ ದರದಲ್ಲಿ ಸುಮಾರು 2.2 ಕೋಟಿ ರೂಪಾಯಿಗಳ ರಸಗೊಬ್ಬರ ಮತ್ತು ಇತರ ಕೃಷಿ ಉತ್ಪನ್ನಗಳನ್ನು ಕಂಪೆನಿ ಇದುವರೆಗೆ ಮಾರಾಟ ಮಾಡಿದೆ. ದೊಡ್ಡ ಪ್ರಮಾಣದಲ್ಲಿ ರಸಗೊಬ್ಬರಗಳನ್ನು ಖರೀದಿಸುವ ಕಂಪೆನಿ ಧಾರವಾಡ, ಬೆಳಗಾವಿ ಮತ್ತು ಹಾವೇರಿ ಜಿಲ್ಲೆಗಳ ರೈತರಿಗೆ ರಸಗೊಬ್ಬರ ಪೂರೈಸಲು ನಿರ್ಧರಿಸಿದೆ. ಕಾರ್ಮಿಕರು ಮತ್ತು ಉತ್ಪನ್ನ ವೆಚ್ಚವನ್ನು ಕಡಿತ ಮಾಡುವ ಆಧುನಿಕ ಕೃಷಿ ವಿಧಾನದ ಮಾಹಿತಿಗಳನ್ನು ಕೂಡ ನೀಡಲಾಗುತ್ತದೆ. 
ಈ ಎಲ್ಲ ಕ್ರಮಗಳು ರೈತರನ್ನು ಆಕರ್ಷಿಸುತ್ತಿದ್ದು ಕಂಪೆನಿಯ ಸದಸ್ಯರಾಗಲು ಮುಂದೆ ಬರುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com