ನೆಲದಲ್ಲಿ ರಂಧ್ರ ಕೊರೆದು ಆಭರಣ ಅಂಗಡಿ ಕಳ್ಳತನ: ದರೋಡೆಕೋರ ಬಂಧನ

ನಗರದ ಕಾಟನ್ ಪೇಟೆಯ ಲಾಡ್ಜ್ ರೂಂನ್ನು ಕೊರೆದು ನೆಲಮಹಡಿಯಲ್ಲಿದ್ದ ಆಭರಣ ಅಂಗಡಿಯಿಂದ ಚಿನ್ನ...
ರಂಧ್ರ ಕೊರೆದ ಹೊಟೇಲ್ ರೂಂ
ರಂಧ್ರ ಕೊರೆದ ಹೊಟೇಲ್ ರೂಂ
ಬೆಂಗಳೂರು: ನಗರದ ಕಾಟನ್  ಪೇಟೆಯ ಲಾಡ್ಜ್ ರೂಂನ್ನು ಕೊರೆದು ನೆಲಮಹಡಿಯಲ್ಲಿದ್ದ ಆಭರಣ ಅಂಗಡಿಯಿಂದ ಚಿನ್ನ, ಬೆಳ್ಳಿಗಳನ್ನು ದರೋಡೆ ಮಾಡಿ ಪರಾರಿಯಾಗಿದ್ದವನನ್ನು ಪೊಲೀಸರು ಬಂಧಿಸಿದ್ದಾರೆ.
ತಾನು ಉಳಿದುಕೊಂಡಿದ್ದ ರೂಮಿನ ನೆಲವನ್ನು ರಂಧ್ರ ಮಾಡಿ ಜ್ಯುವೆಲ್ಲರಿ ಶಾಪ್ ಒಳಗೆ ನುಗ್ಗಿ ಆಭರಣಗಳನ್ನು ಕದ್ದ ದರೋಡೆಕೋರ ಮೊನ್ನೆ ಭಾನುವಾರ ಧಾರವಾಡಕ್ಕೆ ಓಡಿಹೋಗಿದ್ದ. ಯಾರಿಗೂ ಗುರುತು ಸಿಗಬಾರದೆಂದು ತಲೆ ಬೋಳಿಸಿಕೊಂಡಿದ್ದ. ಆದರೆ ಆತನ ಹೊಸ ಅವತಾರದಿಂದ ಪೊಲೀಸರ ಕೈಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ. ನಿನ್ನೆ ಪೊಲೀಸರು ಆತನನ್ನು ಬಂಧಿಸಿದ್ದಾರೆ.
ಅಹಮದಾಬಾದ್ ಮೂಲದ ಮುಹಮ್ಮದ್ ಹುಸೇನ್ ಕಾಟನ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಜ್ಯುವೆಲ್ಲರಿ ಶೋರೂಂ ಮೇಲ್ಮಹಡಿಯಲ್ಲಿ ಲಾಡ್ಜ್ ನಲ್ಲಿ ರೂಮೊಂದನ್ನು 20 ದಿನಗಳ ಹಿಂದೆ ಬಾಡಿಗೆ ಪಡೆದುಕೊಂಡಿದ್ದ.ಎರಡು ಮಹಡಿಯ ಕಟ್ಟಡದ ಕೆಳಗೆ ಆಭರಣದ ಮಳಿಗೆ ಇದ್ದರೆ ಮೊದಲ ಮಹಡಿಯಲ್ಲಿ ಪ್ಲಾಟಿನಂ ಲಾಡ್ಜ್ ಇದೆ. ಇಲ್ಲಿ 20 ದಿನಗಳ ಹಿಂದೆ ಹುಸೇನ್ ರೂಮೊಂದನ್ನು ಬಾಡಿಗೆಗೆ ಪಡೆದಿದ್ದ.
ನಕಲಿ ಮತದಾರರ ಗುರುತು ಪತ್ರದೊಂದಿಗೆ ಕಲಬುರಗಿಯವನು ಎಂದು ಹೇಳಿಕೊಂಡ ರೂಂ ಬಾಡಿಗೆಗೆ ಪಡೆದಿದ್ದ. ಜೂನ್ 19ರಿಂದ ಇಲ್ಲಿ ವಾಸವಾಗಿದ್ದ. ಆಭರಣದ ಅಂಗಡಿಯಿಂದ ಬೆಲೆಬಾಳುವ ಚಿನ್ನಾಭರಣಗಳನ್ನು ಕದ್ದು ಮೊನ್ನೆ ಭಾನುವಾರ ಬೆಳಗ್ಗೆ 6.30ಕ್ಕೆ ರೂಂ ಬಿಟ್ಟು ಹೋಗಿದ್ದ. ಕೆಎಸ್ಆರ್ ಟಿಸಿ ಬಸ್ಸಿನಲ್ಲಿ ಬೆಂಗಳೂರಿನಿಂದ ಧಾರವಾಡಕ್ಕೆ ಹೊರಟ.
 ಧಾರವಾಡದಲ್ಲಿ ವಿಶ್ರಾಂತಿ ಪಡೆಯಲೆಂದು ಲಾಡ್ಜ್ ನಲ್ಲಿ ಉಳಿದುಕೊಂಡು ನಂತರ ಸೆಲೂನ್ ವೊಂದಕ್ಕೆ ಹೋಗಿ ತನ್ನ ತಲೆ ಬೋಳಿಸಿಕೊಂಡ. ಇದರಿಂದ ಯಾರಿಗೂ ಗುರುತು ಸಿಗಲಿಕ್ಕಿಲ್ಲ ಎಂಬ ಲೆಕ್ಕಾಚಾರ ಆತನದ್ದು.ನಂತರ ಅಹಮದಾಬಾದಿಗೆ ತೆರಳಲು ಹುಬ್ಬಳ್ಳಿಯಿಂದ ಖಾಸಗಿ ಬಸ್ಸಿನಲ್ಲಿ ಟಿಕೆಟ್ ಬುಕ್ ಮಾಡಿದ್ದನು.
ಭಾನುವಾರ ಸಾಯಂಕಾಲ 7.45ಕ್ಕೆ ಹುಬ್ಬಳ್ಳಿಯಿಂದ ಹೊರಟನು. ಕಿತ್ತೂರು ಹತ್ತಿರ ಬಸ್ಸು ವಿಶ್ರಾಂತಿಗೆಂದು ನಿಂತಿತ್ತು. ಆಗ ಅಲ್ಲಿ ಪೊಲೀಸರು ಹುಸೇನ್ ನ್ನು ಬಂಧಿಸಿದರು.  ಆತನ ಬಳಿಯಿದ್ದ 1.3 ಕೆಜಿ ಚಿನ್ನ ಮತ್ತು 14 ಕೆಜಿ ಬೆಳ್ಳಿಗಳನ್ನು ವಶಪಡಿಸಿಕೊಂಡಿದ್ದಾರೆ.
ಪೊಲೀಸರಿಗೆ ಹುಸೇನ್ ಸಿಕ್ಕಿದ್ದೇಗೆ: ದರೋಡೆ ನಡೆದಿದ್ದು ಗೊತ್ತಾದ ತಕ್ಷಣ ಲಾಡ್ಜ್ ನ ಸಿಸಿಟಿವಿ ಕ್ಯಾಮರಾದ ದೃಶ್ಯಾವಳಿಗಳನ್ನು ಮತ್ತು ಹುಸೇನ್ ನ ನಕಲಿ ಗುರುತು ಚೀಟಿಯನ್ನು ಪಡೆದರು. ಅದು ನಕಲಿ ಗುರುತು ಚೀಟಿ ಎಂದು ಗೊತ್ತಾದಾಗ ಆತ ಬೇರೆ ರಾಜ್ಯದವನಾಗಿರಬಹುದು ಎಂಬ ಸಂಶಯ ಬಂತು. ಕೂಡಲೇ ನಕಲಿ ಗುರುತು ಪತ್ರವನ್ನು ರಾಜ್ಯಾದ್ಯಂತ ಖಾಸಗಿ ಮತ್ತು ಸರ್ಕಾರಿ ಬಸ್ ನಿಲ್ದಾಣಗಳಲ್ಲಿ ಹಂಚಿದರು. ಕೂಡಲೇ ಪೊಲೀಸರಿಗೆ ಖಾಸಗಿ ಬಸ್ ನವರಿಂದ ಹುಸೇನ್ ಧಾರವಾಡಕ್ಕೆ ಹೋಗುತ್ತಿದ್ದಾನೆ ಎಂದು ಕರೆಬಂತು. ನಂತರ ಹುಬ್ಬಳ್ಳಿಯಿಂದ ಅಹಮದಾಬಾದಿಗೆ ಹೋಗುವ ದಾರಿಯಲ್ಲಿ ಆತನನ್ನು ಬಂಧಿಸಿದರು.
ರಂಧ್ರ ಕೊರೆದದ್ದು ಹೇಗೆ: ಪ್ಲಾಟಿನಂ ಲಾಡ್ಜ್ ನಲ್ಲಿ ರೂಮನ್ನು ಬಾಡಿಗೆಗೆ ಪಡೆಯುವ ಎರಡು ದಿನಕ್ಕೆ ಮುನ್ನ ಹತ್ತಿರದ ಟೀ ಅಂಗಡಿಗೆ ಹೋಗಿ ಆಭರಣ ಮಳಿಗೆಯ ನೇರಕ್ಕೆ ಯಾವ ರೂಮು ಬರುತ್ತದೆ ಎಂದು ಪರಿಶೀಲಿಸಿದ್ದ. ಮೊದಲಿಗೆ 101 ಸಂಖ್ಯೆಯ ರೂಮ್ ಪಡೆದಿದ್ದ ಹುಸೇನ್ ಅಲ್ಲಿಂದ ಜ್ಯುವೆಲ್ಲರಿಗೆ ಹೋಗುವುದು ಸಾಧ್ಯವಿಲ್ಲ ಎಂದು ಗೊತ್ತಾಗಿ ನಂತರ 102 ಸಂಖ್ಯೆಯ ರೂಮನ್ನು ಬಾಡಿಗೆಗೆ ಪಡೆದ. ಪ್ರತಿದಿನ ಮಧ್ಯರಾತ್ರಿ 1 ಗಂಟೆಯಿಂದ ನಸುಕಿನ ಜಾವ 5 ಗಂಟೆಯವರೆಗೆ ನೆಲವನ್ನು ಕೊರೆಯುತ್ತಿದ್ದ. ಹಗಲು ಹೊತ್ತಿನಲ್ಲಿ ಹೊರಗೆ ಸುತ್ತಾಡುತ್ತಿದ್ದ. ಬೇರೆ ಕೊಠಡಿಯಲ್ಲಿ ಉಳಿದುಕೊಂಡಿದ್ದವರು ಮೆಶಿನ್ ನ ಸದ್ದು ಕೇಳುತ್ತದೆ ಎಂದರೂ ಲಾಡ್ಜ್ ನ ಸಿಬ್ಬಂದಿ ಅದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ.
ಸೋದರಿಯ ಮದುವೆಗಾಗಿ ಕದ್ದಿದ್ದು: ಹುಸೇನ್ ಒಬ್ಬ ಕುಖ್ಯಾತ ದರೋಡೆಕೋರ. ಚಿಕ್ಕ ವಯಸ್ಸಿನಲ್ಲಿಯೇ ಮನೆ ಬಿಟ್ಟು ದೇಶದ ನಾನಾ ಕಡೆ ಸುತ್ತುತ್ತಿದ್ದ. ಬೆಳಗಾವಿಯಲ್ಲಿ ಕೆಲ ವರ್ಷಗಳ ಕಾಲವಿದ್ದ. ಅಲ್ಲಿ ಸುಮಾರು 15 ಲಕ್ಷ ರೂಪಾಯಿ ಕದ್ದು 300 ಗ್ರಾಂ ಚಿನ್ನ ಕದ್ದಿದ್ದ. ತನ್ನೂರಿಗೆ ಹೋಗಿ ಸೋದರಿಯ ಮದುವೆಗೆ ಹಣ ಖರ್ಚು ಮಾಡಿದ್ದ. ಕಲಬುರಗಿಯಲ್ಲಿ ಕೆಲ ವರ್ಷಗಳ ಕಾಲವಿದ್ದ. ಆದರೆ ಎಲ್ಲಿ ಕೆಲಸ ಮಾಡುತ್ತಿದ್ದ ಎಂಬ ಬಗ್ಗೆ ಪೊಲೀಸರಿಗೆ ಮಾಹಿತಿಯಿಲ್ಲ. ಜೂನ್ 15ಕ್ಕೆ ಬೆಂಗಳೂರಿಗೆ ಬರುವ ಮುನ್ನ ಮಂಗಳೂರಿನಲ್ಲಿ ದರೋಡೆ ಮಾಡಲು ಸಂಚು ನಡೆಸಿದ್ದ. ಆದರೆ ಅಲ್ಲಿ ಕೇವಲ ಒಂದೂವರೆ ಸಾವಿರ ರೂಪಾಯಿ ಕದಿಯಲು ಸಾಧ್ಯವಾಯಿತಷ್ಟೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com