ಬೆಂಗಳೂರು: ಪಾರ್ಕುಗಳಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಾಣಕ್ಕೆ ನಿವಾಸಿಗಳ ವಿರೋಧ

ರಾಜ್ಯ ಸರ್ಕಾರದ ಮಹಾತ್ವಾಕಾಂಕ್ಷಿ ಇಂದಿರಾ ಗಾಂಧಿ ಕ್ಯಾಂಟೀನ್ ಸ್ಥಾಪನೆಗೆ ಎದುರಾಗುತ್ತಿರುವ ವಿಘ್ನಗಳು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ರಾಜ್ಯ ಸರ್ಕಾರದ ಮಹಾತ್ವಾಕಾಂಕ್ಷಿ ಇಂದಿರಾ ಗಾಂಧಿ ಕ್ಯಾಂಟೀನ್ ಸ್ಥಾಪನೆಗೆ ಎದುರಾಗುತ್ತಿರುವ ವಿಘ್ನಗಳು ಒಂದೆರಡಲ್ಲ. ನಗರದ ಮತ್ತೆರಡು ಕಡೆಗಳಲ್ಲಿ ನಿವಾಸಿಗಳು ತಮ್ಮ ಬಡಾವಣೆಗಳಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಿಸದಂತೆ ಪ್ರತಿಭಟನೆ ನಡೆಸುತ್ತಿದ್ದಾರೆ. 
ಮೊನ್ನೆ ಶುಕ್ರವಾರ ದೊಮ್ಮಲೂರು ನಿವಾಸಿಗಳು ಮತ್ತು 9 ನಿವಾಸಿ ಅಭಿವೃದ್ಧಿ ಸಂಘಗಳು ಬಿಡಿಎ ಕಾಂಪ್ಲೆಕ್ಸ್ ಎದುರು ಪ್ರತಿಭಟನೆ ನಡೆಸಿದರು. ಇನ್ನು ವೈಯ್ಯಾಲಿಕಾವಲ್ ಲೇ ಔಟ್ ನಿವಾಸಿಗಳು ಟ್ವಿಟ್ಟರ್ ನಲ್ಲಿ ತಮ್ಮ ಕಳವಳ, ಆತಂಕವನ್ನು ವ್ಯಕ್ತಪಡಿಸಿದ್ದಾರೆ.
ಪಾರ್ಕ್ ಒಳಗೆ ಸ್ಥಾಪಿಸಲು ಉದ್ದೇಶಿಸಿರುವ ಇಂದಿರಾ ಕ್ಯಾಂಟೀನ್ ಪಾದಚಾರಿ ಮಾರ್ಗವನ್ನು ಕಬಳಿಸುತ್ತದೆ ಎಂದು ದೊಮ್ಮಲೂರು ನಿವಾಸಿಗಳು ಆರೋಪಿಸುತ್ತಾರೆ. 80 ಮರಗಳಿರುವ ಪಾರ್ಕನ್ನು ಅಭಿವೃದ್ಧಿಪಡಿಸಲು 15 ವರ್ಷಗಳು ಬೇಕಾದವು ಎನ್ನುತ್ತಾರೆ ಇಲ್ಲಿನ ನಿವಾಸಿಗಳು.
ದೊಮ್ಮಲೂರು ಕಾರ್ಪೊರೇಟರ್ ಸಿ.ಆರ್.ಲಕ್ಷ್ಮೀನಾರಾಯಣ, ಪಾರ್ಕನ್ನು ಮತ್ತಷ್ಟು ಅಭಿವೃದ್ಧಿಪಡಿಸಲು 50 ಲಕ್ಷ ಬಿಬಿಎಂಪಿಯಿಂದ ಮಂಜೂರು ಆಗಿದೆ. ಸ್ಥಳವನ್ನು ಆಯ್ಕೆ ಮಾಡಿಕೊಳ್ಳುವಾಗ ಸರ್ಕಾರ ನಮ್ಮನ್ನು ಕೇಳಲಿಲ್ಲ. ಈ ವಿಷಯವನ್ನು ಸರ್ಕಾರದ ಗಮನಕ್ಕೆ ತರುವುದಾಗಿ ಶಾಸಕ ಎನ್.ಎ.ಹ್ಯಾರಿಸ್ ಭರವಸೆ ನೀಡಿದ್ದಾರೆ ಎಂದರು.
ನಾವು ಕ್ಯಾಂಟೀನ್ ಸ್ಥಾಪನೆಯನ್ನು ವಿರೋಧಿಸುತ್ತಿಲ್ಲ. ಅದು ಬಡವರಿಗೆ ಸಹಾಯ ಮಾಡುತ್ತದೆ. ಆದರೆ ಬೇರೆ ಸ್ಥಳದಲ್ಲಿ ಸ್ಥಾಪನೆ ಮಾಡಬೇಕು ಎನ್ನುತ್ತಾರೆ ಶಂಕರ್ ಪಂಜಾಬಿ ಎಂಬ ರಕ್ಷಣಾ ಇಲಾಖೆಯ ಉದ್ಯೋಗಿ.
ಬಿಡಿಎ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ, ದೊಮ್ಮಲೂರು ಜನಪರ ವೇದಿಕೆ, ದೊಮ್ಮಲೂರು ಕನ್ನಡ ಗೆಳೆಯರ ಬಳಗ, ಶಂಕರ್ ನಾಗ್ ಅಭಿಮಾನಿಗಳ ಸಂಘ, ಎಂಐಜಿ ಫ್ಲ್ಯಾಟ್ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ, ದೊಮ್ಮಲೂರು 2ನೇ ಹಂತ ನಿವಾಸಿಗಳ ಸಂಘ, ಹೆಚ್ ಎಎಲ್ 2ನೇ ಹಂತ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ, ಶಂಕರ್ ನಾಗ್ ಪಾರ್ಕ್ ವಾಕಿಂಗ್ ಸಿಟಿಜೆನ್ಸ್ ಮತ್ತು ದೊಮ್ಮಲೂರು ಗ್ರಾಮ ನಿವಾಸಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ನಾಗವಾರದ ವೈಯಾಲಿಕಾವಲ್ ಲೇ ಔಟ್ ನಿವಾಸಿಗಳು ಕೂಡ ಪಾರ್ಕಿ ಸ್ಥಾಪಿಸಲು ಉದ್ದೇಶಿಸಿದ್ದ ಜಾಗದಲ್ಲಿ ಇಂದಿರಾ ಕ್ಯಾಂಟೀನ್ ಸ್ಥಾಪಿಸುವುದಕ್ಕೆ ಟ್ವಿಟ್ಟರ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಲ್ಲಿ 40x40 ಸ್ಥಳದಲ್ಲಿ ಮಾತ್ರ ಕ್ಯಾಂಟೀನ್ ಸ್ಥಾಪಿಸಲಾಗುತ್ತದೆ ಎಂದು ಬಿಬಿಎಂಪಿ ಸಹಾಯಕ ಎಂಜಿನಿಯರ್ ಮೋಹನ್ ಹೇಳುತ್ತಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com