ಅಧಿಕಾರಿಗಳನ್ನು ವರ್ಗಾವಣೆ ಮಾಡುವ ಹಕ್ಕು ಸರ್ಕಾರಕ್ಕಿದೆ: ಡಿಐಜಿ ರೂಪಾ

ಅಧಿಕಾರಿಗಳನ್ನು ವರ್ಗಾವಣೆ ಮಾಡುವ ಹಕ್ಕು ಸರ್ಕಾರಕ್ಕಿದ್ದು, ಸರ್ಕಾರದ ಆದೇಶಗಳನ್ನು ನಾನು ಪಾಲನೆ ಮಾಡಿದ್ದೇನೆಂದು ರಾಜ್ಯ ಸಂಚಾರ ಮತ್ತು ರಸ್ತೆ ಸುರಕ್ಷತಾ ವಿಭಾಗದ ಡಿಐಜಿ ರೂಪಾ ಅವರು ಮಂಗಳವಾರ ಹೇಳಿದ್ದಾರೆ...
ರಾಜ್ಯ ಸಂಚಾರ ಮತ್ತು ರಸ್ತೆ ಸುರಕ್ಷತಾ ವಿಭಾಗದ ಡಿಐಜಿ ರೂಪಾ
ರಾಜ್ಯ ಸಂಚಾರ ಮತ್ತು ರಸ್ತೆ ಸುರಕ್ಷತಾ ವಿಭಾಗದ ಡಿಐಜಿ ರೂಪಾ
ಬೆಂಗಳೂರು: ಅಧಿಕಾರಿಗಳನ್ನು ವರ್ಗಾವಣೆ ಮಾಡುವ ಹಕ್ಕು ಸರ್ಕಾರಕ್ಕಿದ್ದು, ಸರ್ಕಾರದ ಆದೇಶಗಳನ್ನು ನಾನು ಪಾಲನೆ ಮಾಡಿದ್ದೇನೆಂದು ರಾಜ್ಯ ಸಂಚಾರ ಮತ್ತು ರಸ್ತೆ ಸುರಕ್ಷತಾ ವಿಭಾಗದ ಡಿಐಜಿ ರೂಪಾ ಅವರು ಮಂಗಳವಾರ ಹೇಳಿದ್ದಾರೆ. 
ನಗರ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಅವ್ಯವಹಾರಗಳನ್ನು ಪೊಲೀಸ್ ಅಧಿಕಾರಿ ಡಿ. ರೂಪಾ ಅವರು ಬಯಲಿಗೆ ಎಳೆದಿದ್ದರು. ಜೈಲಿನಲ್ಲಿ ಕೈದಿಯಾಗಿರುವ ಶಶಿಕಲಾ ನಟರಾಜನ್ ಗೆ ಆತಿಥ್ಯ ನೀಡಲಾಗುತ್ತಿರುವುದನ್ನು ರೂಪಾ ಅವರು ಸರ್ಕಾರದ ಗಮನಕ್ಕೆ ತಂದಿದ್ದರು. ಪ್ರಕರಣ ಸಂಬಂಧ ಡಿಜಿಪಿ ಸತ್ಯನಾರಾಯಣ ಹಾಗೂ ಡಿಐಜಿ ರೂಪಾ ನಡುವೆ ವಾಕ್ಸಮರ ಆರಂಭವಾಗಿತ್ತು. ಈ ಎಲ್ಲಾ ಬೆಳವಣಿಗೆಗಳ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರೂಪಾ ಅವರನ್ನು ರಾಜ್ಯ ಸಂಚಾರ ಮತ್ತು ರಸ್ತೆ ಸುರಕ್ಷತಾ ವಿಭಾಗದ ಡಿಐಜಿಯಾಗಿ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದರು. 
ವರ್ಗಾವಣೆ ಕುರಿತಂತೆ ಪ್ರತಿಕ್ರಿಯೆ ಇದೀಗ ಪ್ರತಿಕ್ರಿಯೆ ನೀಡಿರುವ ಡಿ. ರೂಪಾ ಅವರು, ಅಧಿಕಾರಿಗಳನ್ನು ವರ್ಗಾವಣೆ ಮಾಡುವ ಹಕ್ಕು ಸರ್ಕಾರಕ್ಕಿದೆ. ಸರ್ಕಾರದ ಆದೇಶಗಳನ್ನು ನಾನು ಪಾಲನೆ ಮಾಡಿದ್ದೇನೆ. ನನಗೆ ಬೆಂಬಲ ವ್ಯಕ್ತಪಡಿಸಿರುವ ಕಿರಣ್ ಬೇಡಿಯವರಿಗೆ ಈ ಮೂಲಕ ಧನ್ಯವಾದಗಳನ್ನು ಹೇಳಲು ಇಚ್ಛಿಸುತ್ತೇನೆ. ಅವರ ಬೆಂಬಲ ನನಗೆ ಅತ್ಯಮೂಲ್ಯವಾದದ್ದು ಎಂದು ಹೇಳಿದ್ದಾರೆ. 
ಇದೇ ವೇಳೆ ಜೈಲಿನ ಅವ್ಯವಹಾರ ಕುರಿತಂತೆ ತಾವು ಸಲ್ಲಿಸಿದ್ದ ವರದಿಯನ್ನು ಸಮರ್ಥಿಸಿಕೊಂಡಿರುವ ಅವರು, ನಾನು ಸಲ್ಲಿಕೆ ಮಾಡಿದ್ದ ವರದಿಗೆ ನಾನು ಬದ್ಧಳಾಗಿದ್ದೇನೆ. ಅವ್ಯವಹಾರ ನಡೆಯುತ್ತಿರುವುದಕ್ಕೆ ಸಾಕ್ಷ್ಯಾಧಾರಗಳಿವೆ ಎಂದು ತಿಳಿಸಿದ್ದಾರೆ. 
ಜೈಲಿನಲ್ಲಿ ನಡೆಯುತ್ತಿರುವ ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ರೂಪಾ ಅವರಿಗೆ ಈ ಹಿಂದೆ ಪುದುಚೇರಿ ಲೆಫ್ಟಿನೆಂಟ್ ಗವರ್ನರ್, ಪ್ರಥಮ ಮಹಿಳಾ ಐಪಿಎಸ್ ಅಧಿಕಾರಿ ಕಿರಣ್ ಬೇಡಿಯವರು ಬೆಂಬಲ ವ್ಯಕ್ತಪಡಿಸಿದ್ದರು. 
ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ಎಲ್ಲಾ ಬೆಳವಣಿಗೆಗಳನ್ನು ಗಮನಿಸುತ್ತಿರುವ ಕಿರಣ್ ಬೇಡಿಯವರು ಅಂದಿನಿಂದಲೂ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಸರಣಿ ಟ್ವೀಟ್ ಗಳನ್ನು ಮಾಡುತ್ತಿದ್ದಾರೆ. 
ಕಾರಾಗೃಹದಲ್ಲಿ ಶಶಿಕಲಾಗೆ ಸಿಗುತ್ತಿರುವ ಆತಿಥ್ಯದ ಬಗ್ಗೆ ರೂಪಾ ಅವರು ಬೆಳಕು ಚೆಲ್ಲಿದ ಪತ್ರಿಕಾ ವರದಿಗಳನ್ನು ಈ ಹಿಂದೆ ಟ್ವಿಟರ್ ನಲ್ಲಿ ಶೇರ್ ಮಾಡಿದ್ದ ಕಿರಣ್ ಬೇಡಿಯವರು, ಇಂತಹ ಇನ್ನಷ್ಟು ಐಪಿಎಸ್ ಅಧಿಕಾರಿಗಳು ನಮಗೆ ಬೇಕು ಎಂದು ಕೊಂಡಾಡಿದ್ದರು. 
ಇದೀಗ ವರ್ಗಾವಣೆ ಕುರಿತಂತೆ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಇದು ವರ್ಗಾವಣೆಗೆ ಸಕಾಲವಲ್ಲ. ಅಕ್ರಮಗಳ ಕೊಳಕನ್ನು ನಿವಾರಿಸುವ ಸಮಯ ಎಂದು ಟ್ವೀಟ್ ಮಾಡಿದ್ದಾರೆ. ಅಲ್ಲದೆ. ಈ ಟ್ವೀಟ್ ಗಳನ್ನು ಪ್ರಧಾನಿ ಕಾರ್ಯಾಲಯ ಮತ್ತು ಕೇಂದ್ರ ಗೃಹ ಕಚೇರಿಗೂ ಟ್ಯಾಗ್ ಮಾಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com