ಪ್ರತ್ಯೇಕ ರಾಜ್ಯ ಧ್ವಜಕ್ಕೆ ಸಿಎಂ ಪಟ್ಟು; ವಿಪಕ್ಷಗಳಿಂದ ಅನಗತ್ಯ ವಿವಾದ ಸೃಷ್ಟಿ: ಸಿದ್ದರಾಮಯ್ಯ

ಪ್ರತ್ಯೇಕ ಧ್ವಜ ವಿವಾದ ಸಂಬಂಧ ವಿರೋಧ ಪಕ್ಷಗಳು ಅನಗತ್ಯವಾಗಿ ವಿವಾದಗಳನ್ನು ಸೃಷ್ಟಿಸುತ್ತಿವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ ಹೇಳಿದ್ದಾರೆ...
ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ
ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ
ಹುಬ್ಬಳ್ಳಿ: ಪ್ರತ್ಯೇಕ ಧ್ವಜ ವಿವಾದ ಸಂಬಂಧ ವಿರೋಧ ಪಕ್ಷಗಳು ಅನಗತ್ಯವಾಗಿ ವಿವಾದಗಳನ್ನು ಸೃಷ್ಟಿಸುತ್ತಿವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ ಹೇಳಿದ್ದಾರೆ. 
ಬಸ್ ದಿನಾಚರಣೆ ಹಿನ್ನಲೆಯಲ್ಲಿ ಧಾರವಾಡಕ್ಕೆ ಭೇಟಿ ನೀಡುವ ವೇಳೆ ಪ್ರತಿಕ್ರಿಯೆ ನೀಡಿರುವ ಅವರು, ಸರ್ಕಾರದ ಮೇಲೆ ಬೆಟ್ಟು ಮಾಡಿ ತೋರಿಸಲು ವಿರೋಧ ಪಕ್ಷಗಳಿಗೆ ಬೇರಾವುದೇ ಕೆಲಸಗಳಿಲ್ಲ. ಹೀಗಾಗಿ ಪ್ರತ್ಯೇಕ ಧ್ವಜ ವಿಚಾರ ಕುರಿತು ಅನಗತ್ಯವಾಗಿ ವಿವಾದಗಳನ್ನು ಸೃಷ್ಟಿಸುತ್ತಿವೆ ಎಂದು ಹೇಳಿದ್ದಾರೆ. 
ರಾಜ್ಯವೊಂದು ಪ್ರತ್ಯೇಕ ನಾಡ ಧ್ವಜ ಹೊಂದುವ ಅಥವಾ ಹೊಂದದ ಕುರಿತು ಸಂವಿಧಾನದಲ್ಲಿ ಯಾವುದೇ ಉಲ್ಲೇಖಗಳಿಲ್ಲ. ರಾಜ್ಯಕ್ಕೆ ಪ್ರತ್ಯೇಕ ಧ್ವಜ ಆಗ್ರಹಿಸುವ ಮೂಲಕ ನಾವು ರಾಷ್ಟ್ರ ಧ್ವಜದ ಸಮಗ್ರತೆ ಹಾಗೂ ಪ್ರಾಬಲ್ಯವನ್ನು ಕಡೆಗಣಿಸುತ್ತಿಲ್ಲ. ಪ್ರತ್ಯೇಕ ಧ್ವಜ ಸಂಬಂಧ ಕಾನೂನು ರೀತಿಯಲ್ಲಿ ಸಮಿತಿ ವರದಿ ಬಳಿಕವಷ್ಟೇ ನಾವು ನಿರ್ಧಾರ ಕೈಗೊಳ್ಳುತ್ತೇವೆಂದು ತಿಳಿಸಿದ್ದಾರೆ. 
ಇದೇ ವೇಳೆ ಮೋಡ ಬಿತ್ತನೆ ಕುರಿತಂತೆ ಪ್ರತಿಕ್ರಿಯೆ ನೀಡಿರು ಅವರು, ರಾಜ್ಯದಲ್ಲಿ ಕೆಲ ದಿನಗಳಿಂದ ಮಳೆಯಾಗುತ್ತಿರುವುದು ಸಂತಸವನ್ನು ತಂದಿದೆ. ಮಳೆ ಹೀಗೆಯೇ ಮುಂದುವರೆಯಲಿ ಎಂದು ಆಶಿಸುತ್ತೇನೆ. ರಾಜ್ಯದಲ್ಲಿ ಹೆಚ್ಚಾಗಿ ಮಳೆಯಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ಮಳೆಯಾಗದ ಪ್ರದೇಶಗಳಲ್ಲಿ ಮೋಡ ಬಿತ್ತನೆ ಮಾಡಲಾಗುತ್ತದೆ ಎಂದಿದ್ದಾರೆ. 
ಅಮಿತ್ ಶಾ, ಮೋದಿಯವರ ತಂತ್ರಗಳು ಕೆಲಸ ಮಾಡಲ್ಲ
ರಾಜ್ಯದಲ್ಲಿ ನಿಗದಿತ ಸಮಯದಲ್ಲಿಯೇ ಚುನಾವಣೆ ನಡೆಯಲಿದ್ದು, ಪ್ರಧಾನಮಂತ್ರಿ ಮೋದಿ ಹಾಗೂ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರ ತಂತ್ರಗಳು ಕೆಲಸ ಮಾಡುವುದಿಲ್ಲ ಎಂದು ಹೇಳಿದ್ದಾರೆ. 
ಅವಧಿಗೂ ಮುನ್ನವೇ ಚುನಾವಣೆ ನಡೆಯುವ ಯಾವುದೇ ಪರಿಸ್ಥಿಗಳು ರಾಜ್ಯದಲ್ಲಿ ನಿರ್ಮಾಣವಾಗಿಲ್ಲ. ಇವೆಲ್ಲಾ ವಿರೋಧ ಪಕ್ಷಗಳ ತಂತ್ರವಷ್ಟೇ. ರಾಜ್ಯದಲ್ಲಿ ನಮ್ಮ ಸರ್ಕಾರ ಉತ್ತಮವಾಗಿ ಕೆಲಸ ಮಾಡುತ್ತಿದ್ದು, ರಾಜ್ಯದ ಜನತೆ ನಮ್ಮ ಸರ್ಕಾರಕ್ಕೆ ಮತ್ತೊಂಡು ಅವಕಾಶ ನೀಡುತ್ತದೆ ಎಂದು ಹೇಳಿದ್ದಾರೆ. 
ಮಹದಾಯಿ ವಿವಾದ: ಸೊಬರದ ಮಠ ಮನವೊಲಿಕೆಗೆ ಯತ್ನ
ಮಹದಾಯಿ ಸಮಸ್ಯೆ ಪರಿಹಸಿರುವ ನಿಟ್ಟಿನಲ್ಲಿ ಗೋವಾ ಸರ್ಕಾರಕ್ಕೆ ಈಗಾಗಲೇ ಪತ್ರ ಬರೆಯಲಾಗಿದ್ದು, ರಾಜ್ಯ ಸರ್ಕಾರ ತನ್ನಿಂದಾಗುವ ಎಲ್ಲಾ ಪ್ರಯತ್ನಗಳನ್ನು ಮಾಡಿದೆ. ಹೀಗಾಗಿ ಉಪವಾಸ ಕೈಬಿಡುವಂತೆ ರೈತ ಸೇನೆ ರಾಜ್ಯ ಘಟಕದ ಅಧ್ಯಕ್ಷ ವೀರೇಶ್ ಸೊಬರದ ಮಠ ಅವರಿಗೆ ಕರೆ ಮಾಡಿ ಮನವಿ ಮಾಡಲಾಗಿದೆ ಎಂದು ಹೇಳಿದ್ದಾರೆ. 

ಇದೇ ವೇಳೆ ಸರ್ಕಾರದ ಪ್ರತಿನಿಧಿಯಾಗಿ ಸಚಿವ ವಿನಯ್ ಕುಲಕರ್ಣಿಯವರನ್ನು ಪ್ರತಿಭಟನಾ ಸ್ಥಳಕ್ಕೆ ಕಳುಹಿಸವುದಾಗಿ  ಭರವಸೆ ನೀಡಿದ್ದಾರೆ. 

ನಂತರ ಕುಲಕರ್ಣಿಯವರೊಂದಿಗೆ ಮಾತನಾಡಿ ಸಿದ್ದರಾಮಯ್ಯ ಅವರು, ನರಗುಂದದಲ್ಲಿ ಪ್ರತಿಭಟನೆ ನಡೆಸುವ ಬದಲು ಸಂಸತ್ತಿನ ಮುಂದೆ ಪ್ರತಿಭಟನೆ ನಡೆಸಿದರೆ ಶೀಘ್ರಗತಿಯಲ್ಲಿ ಫಲ ದೊರಕಲಿದೆ ಎಂದು ಭೇಟಿ ವೇಳೆ ವೀರೇಶ್ ಅವರಿಗೆ ತಿಳಿಸಿ ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com