ಲಂಚ ಪಡೆದು ಶಶಿಕಲಾಗೆ ವಿಶೇಷ ಸವಲತ್ತು ಆರೋಪ: ಡಿ.ರೂಪಾಗೆ ಲೀಗಲ್ ನೋಟಿಸ್

ಲಂಚ ಪಡೆದು ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಶಶಿಕಲಾ ಅವರಿಗೆ ವಿಶೇಷ ಸವಲತ್ತು ನೀಡಿದ....
ಡಿ ರೂಪಾ
ಡಿ ರೂಪಾ
ಬೆಂಗಳೂರು: ಲಂಚ ಪಡೆದು ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಶಶಿಕಲಾ ಅವರಿಗೆ ವಿಶೇಷ ಸವಲತ್ತು ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಸಂಚಾರ ಮತ್ತು ರಸ್ತೆ ಸುರಕ್ಷತಾ ಡಿಐಜಿ ಡಿ ರೂಪಾ ಅವರಿಗೆ ಕಾರಾಗೃಹ ಡಿಜಿಪಿ ಸ್ಥಾನದಿಂದ ತೆರವುಗೊಂಡಿರುವ ಎಚ್ ಎನ್ ಸತ್ಯನಾರಾಯಣರಾವ್ ಅವರು ಬುಧವಾರ ಲೀಗಲ್ ನೋಟಿಸ್ ಜಾರಿ ಮಾಡಿದ್ದಾರೆ.
ತಮ್ಮ ವಿರುದ್ಧ ಮಾಡಿರುವ 2 ಕೋಟಿ ರುಪಾಯಿ ಲಂಚ ಆರೋಪಕ್ಕೆ ಸಂಬಂಧಿಸಿದಂತೆ ರೂಪಾ ಅವರು ಮುಂದಿನ ಮೂರು ದಿನಗಳಲ್ಲಿ ಬೇಷರತ್ ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ 50 ಕೋಟಿ ರುಪಾಯಿ ಮಾನನಷ್ಟ ಮೊಕದಮ್ಮೆ ಹೂಡುವುದಾಗಿ ಸತ್ಯನಾರಾಯಣರಾವ್ ಅವರು ಹಿರಿಯ ವಕೀಲ ಪುತ್ತಿಗೆ ಆರ್ ರಮೇಶ್ ಅವರ ಮೂಲಕ ಇಂದು ಲೀಗಲ್ ನೋಟಿಸ್ ಜಾರಿ ಮಾಡಿದ್ದಾರೆ.
ರೂಪಾ ಅವರು ಅಗ್ಗದ ಪ್ರಚಾರಕ್ಕಾಗಿ ತಮ್ಮ ವಿರುದ್ಧ ಸುಳ್ಳು ಆರೋಪ ಮಾಡಿದ್ದು, ಇದರಿಂದ ಸಿಬಿಐ ಹಾಗೂ ಲೋಕಾಯುಕ್ತದಲ್ಲಿ ಕೆಲಸ ಮಾಡಿದ ತಮ್ಮ ಗೌರವಕ್ಕೆ ಧಕ್ಕೆಯಾಗಿದೆ ಎಂದು ಸತ್ಯನಾರಾಯಣರಾವ್ ಅವರು ತಮ್ಮ ಲೀಗಲ್ ನೋಟಿಸ್ ನಲ್ಲಿ ಉಲ್ಲೇಖಿಸಿದ್ದಾರೆ.
ಪರಪ್ಪನ ಅಗ್ರಹಾರ ಜೈಲಿನ ಅಕ್ರಮಗಳ ಬಗ್ಗೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ಪತ್ರ ಬರೆದಿದ್ದ ಡಿ ರೂಪಾ ಅವರು, ಅಕ್ರಮ ಆಸ್ತಿ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿ.ಜಯಲಲಿತಾ ಅವರ ಆಪ್ತೆ ಶಶಿಕಲಾಗೆ ವಿಶೇಷ ಅಡುಗೆ ಮನೆ ಕಲ್ಪಿಸಲಾಗಿದೆ. ಇದು ಕಾರಾಗೃಹ ಕಾಯ್ದೆ ಹಾಗೂ ನಿಯಮಗಳ ಉಲ್ಲಂಘನೆಯಾಗುತ್ತದೆ. ಈ ವಿಷಯ ನಿಮ್ಮ (ಡಿಜಿಪಿ ಸತ್ಯನಾರಾಯಣರಾವ್) ಗಮನದಲ್ಲಿದ್ದರೂ ಅದನ್ನು ಮುಂದುವರಿಸಲಾಗಿದೆ ಎಂಬ ಊಹಾಪೋಹ ಇದೆ.’ಈ ಕಾರ್ಯಕ್ಕೆ 2 ಕೋಟಿ ಲಂಚ ಕೊಡಲಾಗಿದೆ ಎಂಬ ಮಾತಿದ್ದು, ಈ ಆಪಾದನೆಗಳು ದುರದೃಷ್ಟಕರವಾಗಿ ನಿಮ್ಮ ಮೇಲೆಯೇ ಇರುವುದರಿಂದ ನೀವು (ಸತ್ಯನಾರಾಯಣರಾವ್) ಇದರ ಬಗ್ಗೆ ಗಮನಹರಿಸಿ ಕೂಡಲೇ ಜೈಲಿನ ತಪ್ಪಿತಸ್ಥ ಅಧಿಕಾರಿ, ಸಿಬ್ಬಂದಿ ಮೇಲೆ  ಕಠಿಣ ಶಿಸ್ತುಕ್ರಮ ತೆಗೆದುಕೊಳ್ಳಲು ಕೋರಿದೆ’ ಎಂದು ಪತ್ರದಲ್ಲಿ ಬರೆದಿದ್ದರು. ಬಳಿಕ ರಾಜ್ಯ ಸರ್ಕಾರ ಈ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com