ಯೋಜನೆಯನ್ನು ಜಾರಿಗೆ ತರುವಲ್ಲಿ ರಾಜ್ಯ ಹಾಗೂ ರೈಲ್ವೇ ಸಚಿವಾಲಯಗಳೆರಡರ ಸಮಾನ ಹೊಣೆಗಾರಿಕೆ ಇರಬೇಕು. ಉಪನಗರ ರೈಲು ಯೋಜನೆಗೆಂದೇ ಪ್ರತ್ಯೇಕ ಮೂಲಸೌಕರ್ಯವನ್ನು ಕಲ್ಪಿಸಲು ಒತ್ತಡ ಹೇರಬಾರದು. ಹಾಗೆ ಮಾಡುವುದರಿಂದ ಪ್ರಸ್ತುತ ಇರುವ ಸೌಕರ್ಯಗಳ ಪೂರ್ಣ ಲಾಭವನ್ನು ಅಗತ್ಯವಿರುವೆಡೆ ಬಳಸಿಕೊಳ್ಳಲು ತೊಡಕಾಗುವುದೇ ಅಲ್ಲದೆ, ಯೋಜನೆಯು ಆರ್ಥಿಕವಾಗಿಯೂ ಸಾಧುವಾಗುವುದಿಲ್ಲ ಎಂದು ವಿವರಿಸಿದ್ದೇನೆ.
ಪ್ರಸ್ತುತ ರೂಪಿಸಲಾಗಿರುವ ನಿಯಮಾವಳಿಗಳಲ್ಲಿ, ಒಂದೊಮ್ಮೆ ಯೋಜನೆಯ ಅನುಷ್ಠಾನದ ಹೊಣೆ ಹೊತ್ತ ವಿಶೇಷ ಉದ್ದೇಶ ವಾಹಕವು (ಎಸ್ ಪಿ ವಿ) ಆರಂಭಿಕ ನಷ್ಟವನ್ನು ಹೊರಲು ಆಗದೆ ಹೋದ ಸಂದರ್ಭದಲ್ಲಿ ರಾಜ್ಯವೇ ಆ ಹೊಣೆಯನ್ನು ಹೊರಬೇಕು ಎಂದಿದೆ. ದರ ನಿಗದಿ ಮಾಡುವ ಅಂತಿಮ ಅಧಿಕಾರವನ್ನು ಭಾರತೀಯ ರೈಲ್ವೇ ಉಳಿಸಿಕೊಂಡಿದೆ. ಹಾಗಾಗಿ ಆರಂಭಿಕ ನಷ್ಟದ ಕುರಿತಾದ ನಿಯಮಾವಳಿಯನ್ನು ಸಡಿಲಿಸಿ ವಿಕೇಂದ್ರೀರಿಸಬೇಕು, ಆ ಮೂಲಕ ಇಬ್ಬರೂ ಪಾಲುದಾರರನ್ನು ಸಮಾನ ಭಾಧ್ಯಸ್ಥರನ್ನಾಗಿಸಬೇಕು ಹಾಗೂ ದರ ನಿಗದಿ ಸ್ವಾತಂತ್ರ್ಯವನ್ನು ವಿಶೇಷ ಉದ್ದೇಶ ವಾಹಕಕ್ಕೆ ವಹಿಸಬೇಕು ಎಂದು ಸಲಹೆ ನೀಡಿದ್ದೇನೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.
ಯೋಜನೆಯ ಕುರಿತಾದ ಆರ್ಥಿಕ ಹೊರೆಯನ್ನು ಸಮನಾಗಿ ಹಂಚಿಕೊಳ್ಳಬೇಕು ಹಾಗೂ ಎಲ್ಲ್ಲಿ ಪ್ರಸ್ತುತ ಇರುವ ಮೂಲಸೌಕರ್ಯಗಳನ್ನು ಬಳಸಿಕೊಳ್ಳಲು ಸಾಧ್ಯವಿದೆಯೋ ಅಲ್ಲಿ ರೈಲ್ವೇ ಇಲಾಖೆಯ ಸಮಾಲೋಚನೆಯೊಂದಿಗೆ ಅದನ್ನು ಬಳಸಿಕೊಳ್ಳುವ ಅನುಮತಿ ನೀಡುವಂತೆ ನಿಯಮಾವಳಿಗಳಲ್ಲಿ ಅವಕಾಶ ಕಲ್ಪಿಸಬೇಕು ನಮ್ಮ ಈ ಸಲಹೆಗಳನ್ನು ಸಚಿವರು ಸಕಾರಾತ್ಮಕವಾಗಿ ಪರಿಗಣಿಸುತ್ತಾರೆ ಎನ್ನುವ ವಿಶ್ವಾಸವಿದೆ ಎಂದು ಸಿದ್ದರಾಮಯ್ಯ ಪತ್ರದಲ್ಲಿ ಹೇಳಿದ್ದಾರೆ.