ಬೆಂಗಳೂರು: ಇದೇ ಶೈಕ್ಷಣಿಕ ವರ್ಷದಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಠ ಪಂಗಡದ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಘೋಷಿಸಿದ್ದಾರೆ.
ಇಂದು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ 2017-18ನೇ ಸಾಲಿನ ಎಸ್ಸಿ-ಎಸ್ಟಿ, ಟಿಎಸ್‍ಪಿ ಉಪಯೋಜನೆಯ ಅನುದಾನದ ಬಳಕೆ ಕುರಿತು ಸಭೆ ನಡೆಸಿದ ಸಿದ್ದರಾಮಯ್ಯ ಅವರು, ಶಾಲಾ ಹಂತದಿಂದ ಕಾಲೇಜು ಹಂತದವರೆಗೂ ಎಸ್ಸಿ-ಎಸ್ಟಿ ಸಮುದಾಯದ ಎಲ್ಲಾ ವಿದ್ಯಾರ್ಥಿಗಳಿಗೂ ಉಚಿತ ಬಸ್ ಪಾಸ್ ನೀಡುವುದಾಗಿ ತಿಳಿಸಿದರು.
ಪ್ರಸ್ತುತ ಎಸ್ಸಿ ಹಾಗೂ ಎಸ್ಟಿ ವಿದ್ಯಾರ್ಥಿಗಳಿಗೆ ಶೇ. 25 ರಷ್ಟು ಹಣವನ್ನು ವಿದ್ಯಾರ್ಥಿಗಳು ಭರಿಸುತ್ತಿದ್ದು, ಸರ್ಕಾರ ಶೇ. 75 ರಷ್ಟು ರಿಯಾಯ್ತಿ ನೀಡುತ್ತಿದೆ. ಇನ್ನು ಮುಂದೆ ಈ ವರ್ಗದ ವಿದ್ಯಾರ್ಥಿಗಳಿಗೆ ಉಚಿತ ಬಸ್‌ಪಾಸ್ ನೀಡುವಂತೆ ಮುಖ್ಯಮಂತ್ರಿ ಸೂಚನೆ ನೀಡಿದರು.
ಉಚಿತ ಬಸ್ ಪಾಸ್ ಭಾಗ್ಯಕ್ಕಾಗಿ ಎಸ್‌ಇಪಿ ಮತ್ತು ಟಿಎಸ್‌ಪಿ ಯೋಜನೆಯಲ್ಲಿ 104 ಕೋಟಿ ರುಪಾಯಿಗಳನ್ನು ಹೆಚ್ಚುವರಿಯಾಗಿ ಮೀಸಲಿಡಲಾಗುವುದು ಎಂದು ಸಿಎಂ ತಿಳಿಸಿದರು.
ಇದೇ ವೇಳೆ ಗ್ರಾಮೀಣ ಭಾಗದ ಪರಿಶಿಷ್ಟ ಜಾತಿಗೆ ಸೇರಿದ ಹದಿಹರೆಯದ ಹೆಣ್ಣುಮಕ್ಕಳಿಗೆ ಪ್ರತಿ ತಿಂಗಳು 16 ಕೋಳಿ ಮೊಟ್ಟೆಗಳನ್ನು ವಿತರಿಸುವ ಯೋಜನೆಯನ್ನು ಟಿಎಸ್‌ಪಿ ಮತ್ತು ಎಸ್‌ಸಿಪಿ ಯೋಜನೆಯಡಿ ಕೈಗೆತ್ತಿಕೊಳ್ಳುವಂತೆಯೂ ಹಾಗೂ ಅಂಗನವಾಡಿ ಮೂಲಕ ಈ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸುವಂತೆ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.