ನಮ್ಮ ಮೆಟ್ರೊ: ಜೂನ್ 18 ರಂದು ಸಂಪೂರ್ಣ ಮೊದಲ ಹಂತದ ಲೋಕಾರ್ಪಣೆ

ಯಲಚೇನಹಳ್ಳಿ– ಮಂತ್ರಿ ಸ್ಕ್ವೇರ್-ಸಂಪಿಗೆ ರಸ್ತೆ ಮೆಟ್ರೋ ರೈಲಿನ ಮೊದಲ ಹಂತದ ಯೋಜನೆಯನ್ನು ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅವರು ಜೂನ್‌ 17 ರಂದು ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ಯಲಚೇನಹಳ್ಳಿ– ಮಂತ್ರಿ ಸ್ಕ್ವೇರ್-ಸಂಪಿಗೆ ರಸ್ತೆ  ಮೆಟ್ರೋ ರೈಲಿನ   ಮೊದಲ ಹಂತದ ಯೋಜನೆಯನ್ನು ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅವರು ಜೂನ್‌ 17 ರಂದು ಉದ್ಘಾಟಿಸಲಿದ್ದಾರೆ. ಅದರ ಮುಂದಿನ ದಿನ ಅಂದರೇ ಜೂನ್ 18 ರಿಂದ ಸಂಚಾರ ಆರಂಭವಾಗಲಿದೆ.
ಮೊದಲ ಹಂತದಲ್ಲಿ 42.3 ಕಿಮೀ ಮೆಟ್ರೊ ರೈಲು ಮಾರ್ಗ ಕಾಮಗಾರಿ ಪೂರ್ಣಗೊಂಡಿದೆ. ಇದೇ ವೇಳೆ ಕೊಚ್ಚಿ ಮೆಟ್ರೋ ರೈಲು ಮಾರ್ಗ ಅದೇ ದಿನ ಪ್ರಧಾನಿ ನರೇಂದ್ರ ಮೋದಿ ಅವರಿಂದ ಉದ್ಘಾಟನೆಯಾಗಲಿದೆ ಎಂದು ಸಿಎಂಆರ್ ಎಸ್ ಆಯುಕ್ತ ,ಕೆ.ಎ ಮನೋಹರ್ ಹೇಳಿದ್ದಾರೆ.
ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಎರಡು ದಿನಗಳ ರಾಜ್ಯಪ್ರವಾಸ ಕೈಗೊಳ್ಳಲಿದ್ದಾರೆ. ಜೂನ್ 17 ಮತ್ತು 18 ರಂದು ಕರ್ನಾಟಕದಲ್ಲಿರಲಿದ್ದಾರೆ, ಹೀಗಾಗಿ ಜೂನ್ 17 ರಂದು ಮೆಟ್ರೊ ರೈಲು ಉದ್ಘಾಟನೆಗೆ ಮುಹೂರ್ತ ನಿಗದಿ ಪಡಿಸಲಾಗಿದೆ ಎಂದು ನವದೆಹಲಿಯಲ್ಲಿರುವ ರಾಜ್ಯ ಸರ್ಕಾರದ ಸಂವಹನ ಕಚೇರಿ ತಿಳಿಸಿದೆ. 
ಜೂನ್ 17 ರಂದು ರಾಷ್ಟ್ರಪತಿಗಳು ಬೆಂಗಳೂರಿಗೆ ಆಗಮಿಸಲಿದ್ದಾರೆ, ಮಧ್ಯಾಹ್ನದ ನಂತರ ಉದ್ಘಾಟನಾ ಕಾರ್ಯಕ್ರಮ ನೆರವೇರಲಿದೆ, ಉಳಿದ ಮಾಹಿತಿಯನ್ನು ಇನ್ನೆರಡು ದಿನಗಳಲ್ಲಿ ನೀಡಲಾಗುವುದು ಎಂದು ಮನೋಹರನ್ ಹೇಳಿದ್ದಾರೆ. 
ಯಲಚೇನಹಳ್ಳಿ– ಸಂಪಿಗೆ ರಸ್ತೆ ಮಾರ್ಗದ ಸುರಕ್ಷತಾ ತಪಾಸಣೆ ಪೂರ್ಣ ಗೊಳಿಸುತ್ತಿದ್ದು, ಈ ಮಾರ್ಗವನ್ನು ಪ್ರಯಾಣಿಕರ ಸಂಚಾರಕ್ಕೆ ಮುಕ್ತಗೊಳಿಸುವ ಮುನ್ನ ಮಹತ್ತರವಾದ ಬದಲಾವಣೆ ಅಗತ್ಯ ಇಲ್ಲ, ಜೊತೆಗೆ ಯಾವ ನಿಲ್ದಾಣದಲ್ಲಿ ರಾಷ್ಟ್ರಪತಿಗಳು ಉದ್ಘಾಟನೆ ಮಾಡಲಿದ್ದಾರೆ ಎಂಬುದು ಇನ್ನೂ ನಿರ್ಧಾರವಾಗಿಲ್ಲ ಎಂದು  ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಕಾರ್ಯದರ್ಶಿ ಮಹೇಂದ್ರ ಜೈನ್ ತಿಳಿಸಿದ್ದಾರೆ.
ಈ ಮಾರ್ಗದ ಯೋಜನೆ ಸಿದ್ಧವಾಗಿ 10 ವರ್ಷಗಳೇ ಕಳೆದಿವೆ. ಕೆ.ಆರ್‌.ಮಾರುಕಟ್ಟೆ ಹಾಗೂ ಚಿಕ್ಕಪೇಟೆ ನಿಲ್ದಾಣಗಳಲ್ಲಿ ಇನ್ನೂ ಎಸ್ಕಲೇಟರ್ ನಿರ್ಮಾಣವಾಗಿಲ್ಲ, ಅದಕ್ಕಾಗಿ ಸೂಕ್ತ ಜಾಗದ ಹುಡುಕಾಟ ನಡೆಸಲಾಗಿದೆ, ಸಣ್ಣಪುಟ್ಟೆ ಕೆಲಸಗಳಿದ್ದು, ಜೂನ್ 10 ರ ಒಳಗೆ ಕೆಲಸಗಳನ್ನು ಪೂರ್ಣಗೊಳಿಸಲಾಗುವುದು ಎಂದು ಅವರು ಹೇಳಿದ್ದಾರೆ.
ಬೆಂಗಳೂರು ಮೆಟ್ರೊ ರೈಲು ನಿಗಮವು (ಬಿಎಂಆರ್‌ಸಿಎಲ್‌) ಮೊದಲ ಹಂತ ಪೂರ್ಣಗೊಂಡ ಸಂಭ್ರಮದ ಕ್ಷಣವನ್ನು ಸ್ಮರಣೀಯವಾಗಿ ಆಚರಿಸಲು ಸಿದ್ಧತೆ ನಡೆಸಿದೆ.
ಮೆಟ್ರೊ ಮೊದಲ ಹಂತದ ಉದ್ಘಾಟನೆಗೆ ಸಿದ್ಧತೆಗಳು ನಡೆದಿವೆ. ಅನೇಕ ಅಡೆತಡೆಗಳ ನಡುವೆಯೂ, ನಗರದ ಸಾರಿಗೆ ವ್ಯವಸ್ಥೆಯನ್ನು ಉನ್ನತ ಮಟ್ಟಕ್ಕೇರಿಸುವ ನಿಟ್ಟಿನಲ್ಲಿ ಪ್ರಮುಖ ಮೈಲಿಗಲ್ಲನ್ನು ಸಾಧಿಸಿದ ತೃಪ್ತಿ ನಮ್ಮದು, ಯಲಚೇನಹಳ್ಳಿ– ಸಂಪಿಗೆ ರಸ್ತೆ ಮಾರ್ಗದಲ್ಲಿ ಸಂಚಾರ ಆರಂಭಿಸಲು ಅಡ್ಡಿ ಇಲ್ಲ. ಪ್ರತಿ ನಿಲ್ದಾಣಕ್ಕೂ ಸೆಕ್ಯೂರಿಟಿ ಗಾರ್ಡ್ ಮತ್ತು ಹೌಸ್ ಕೀಪಿಂಗ್ ಸಿಬ್ಬಂದಿಯನ್ನು ಕಳಹಿಸಲಾಗಿದೆ, ಪ್ರತಿ ನಿಲ್ದಾಣದಲ್ಲಿ 40 ಮಂದಿ ಸಿಬ್ಬಂದಿ ಇರಲಿದ್ದಾರೆ. 10 ಮಂದಿ ಟಿಕೆಟ್ ವಿತರಕರನ್ನು ನೇಮಿಸಲಾಗುವುದು, ಹಾಗೂ ವಾರಾಂತ್ಯದಲ್ಲಿ ಅವರನ್ನು 10 ಮಂದಿಯನ್ನು ಪ್ರತಿ ಮೆಟ್ರೋ ರೇಲ್ವೆ ನಿಲ್ದಾಣಕ್ಕೆ ಕಳುಹಿಸಲಾಗುವುದು ಎಂದು ಬಿಎಂಆರ್‌ಸಿಎಲ್‌ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್ ಸಿಂಗ್ ಖರೋಲ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com