ಬೆಂಗಳೂರು: ರಾಜ್ಯ ಸರ್ಕಾರಿ ಶಾಲೆಯ ಒಂದನೇ ತರಗತಿಗೆ ಸೇರುವ ಮಕ್ಕಳ ವಯಸ್ಸಿನ ಮಿತಿಯನ್ನು 5 ತಿಂಗಳು ಸಡಿಲಗೊಳಿಸಲು ಮುಂದಾಗಿದೆ.
ಈ ವರ್ಷಕ್ಕೆ ಮಾತ್ರ ಅನ್ವಯವಾಗುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಪರಿಷ್ಕೃತ ಆದೇಶದಲ್ಲಿ, 5 ವರ್ಷ 5 ತಿಂಗಳು ಪೂರೈಸಿದ ಮಕ್ಕಳು ಒಂದನೇ ತರಗತಿಗೆ ಪ್ರವೇಶ ಪಡೆಯಲು ಅರ್ಹರಾಗಿರುತ್ತಾರೆ. ಈ ಮೊದಲು 5 ವರ್ಷ 10 ತಿಂಗಳು ವಯಸ್ಸು ಪೂರೈಸಿದ ಮಕ್ಕಳು ಒಂದನೇ ತರಗತಿಗೆ ಪ್ರವೇಶ ಪಡೆಯಬಹುದಾಗಿತ್ತು.
ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಪ್ರವೇಶಾತಿ ಪ್ರಮಾಣ ಗಣನೀಯವಾಗಿ ಇಳಿಮುಖವಾದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಇದು ಯಶಸ್ವಿಯಾದರೆ ಮುಂದಿನ ವರ್ಷ ಕೂಡ ಮುಂದುವರಿಸಲಾಗುತ್ತದೆ.
ಆದರೆ ಸರ್ಕಾರದ ತೀರ್ಮಾನವನ್ನು ಖಾಸಗಿ ಶಾಲೆಗಳ ಪ್ರತಿನಿಧಿಗಳು ಟೀಕಿಸಿದ್ದಾರೆ. ಇದರಿಂದ ಗೊಂದಲ ಮೂಡುತ್ತದೆ ಎಂದಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ಪ್ರವೇಶಾತಿಯಲ್ಲಿ ಇಳಿಮುಖವಾಗಿರುವುದು ವಯೋಮಿತಿ ಸಮಸ್ಯೆಯಿಂದಲ್ಲ ಅಥವಾ ನರ್ಸರಿ ತರಗತಿಗಳಿಂದಲ್ಲ. ಬದಲಾಗಿ ರಾಜ್ಯ ಸರ್ಕಾರಿ ಶಾಲೆಗಳಲ್ಲಿನ ಕಲಿಕೆಯ ಗುಣಮಟ್ಟದಿಂದಾಗಿ ಎಂದು ಇಂಗ್ಲೀಷ್ ಮಾಧ್ಯಮ ಶಾಲೆಗಳ ಸಂಬಂಧಿ ನಿರ್ವಹಣಾ ಪ್ರಧಾನ ಕಾರ್ಯದರ್ಶಿ ಡಿ.ಶಶಿ ಕುಮಾರ್ ಹೇಳುತ್ತಾರೆ.
ಶಿಕ್ಷಣ ಹಕ್ಕು ಕಾಯ್ದೆ ಕೋಟಾದಡಿ ಸೀಟು ಹಂಚಿಕೆ ಪ್ರಕ್ರಿಯೆ ಮುಗಿದ ನಂತರ ಪರಿಷ್ಕೃತ ಆದೇಶವನ್ನು ಏಕೆ ಬಿಡುಗಡೆ ಮಾಡಲಾಗಿದೆ. ವಯಸ್ಸಿನ ಮಿತಿಯಲ್ಲಿ ಕೇವಲ ಒಂದು ದಿನದ ವ್ಯತ್ಯಾಸದಿಂದ ಸೀಟು ಕಳೆದುಕೊಂಡ ಮಕ್ಕಳು ಕೂಡ ಇದ್ದಾರೆ ಎಂದು ಖಾಸಗಿ ಶಾಲೆ ಪ್ರತಿನಿಧಿಗಳು ಹೇಳುತ್ತಾರೆ.