ನಗರದ ಹೆದ್ದಾರಿ ಬಾರ್ ಗಳನ್ನು ಉಳಿಸಲು ಕೇಂದ್ರದ ಕದ ತಟ್ಟಿದ ರಾಜ್ಯ ಸರ್ಕಾರ!

ಹೆದ್ದಾರಿಗಳಲ್ಲಿರುವ ಮದ್ಯದ ಅಂಗಡಿಗಳನ್ನು ರಕ್ಷಿಸಲು ರಾಜ್ಯ ಸರ್ಕಾರ ಇದೀಗ ಕೇಂದ್ರದ ಕದ ತಟ್ಟಿದೆ. ಹೆದ್ದಾರಿಗಳಲ್ಲಿರುವ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ಹೆದ್ದಾರಿಗಳಲ್ಲಿರುವ ಮದ್ಯದ ಅಂಗಡಿಗಳನ್ನು ರಕ್ಷಿಸಲು ರಾಜ್ಯ ಸರ್ಕಾರ ಇದೀಗ ಕೇಂದ್ರದ ಕದ ತಟ್ಟಿದೆ. ಹೆದ್ದಾರಿಗಳಲ್ಲಿರುವ ಬಾರ್ ಗಳು ಸೇರಿದಂತೆ ಬೆಂಗಳೂರಿನ ಎಂ.ಜಿ.ರಸ್ತೆ, ಇಂದಿರಾನಗರ, ಚರ್ಚ್ ಸ್ಟ್ರೀಟ್ ರಸ್ತೆಗಳಲ್ಲಿರುವ ಮದ್ಯದಂಗಡಿಗಳನ್ನು ಮುಚ್ಚುವಂತೆ ಸುಪ್ರೀಂ ಕೋರ್ಟ್ ಆದೇಶ ಪ್ರಕಾರ ನೊಟೀಸ್ ನೀಡಲಾಗಿತ್ತು.
ರಾಜ್ಯ ಸರ್ಕಾರದ ಪ್ರತಿನಿಧಿಗಳು ಇಂದು ಕೇಂದ್ರ ಸರ್ಕಾರದ ಅಧಿಕಾರಿಗಳನ್ನು ಭೇಟಿ ಮಾಡಲಿದ್ದು ನಗರ ಪ್ರದೇಶಗಳ ಮೂಲಕ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಮದ್ಯದಂಗಡಿಗಳನ್ನು ಮುಚ್ಚದಿರಲು ಸೂಚಿಸಬೇಕೆಂದು ಒತ್ತಾಯಿಸಲಿದ್ದಾರೆ ಎಂದು ಲೋಕೋಪಯೋಗಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಂ. ಲಕ್ಷ್ಮೀನಾರಾಯಣ ತಿಳಿಸಿದ್ದಾರೆ.
ಬೆಂಗಳೂರಿನ ಲಿ ಮೆರಿಡಿಯನ್ ಮತ್ತು ಬಳ್ಳಾರಿ ರಸ್ತೆಯಲ್ಲಿರುವ ವಿಂಡ್ಸರ್ ಮ್ಯಾನರ್ ಹೊಟೇಲ್ ನಿಂದ ಟ್ರಿನಿಟಿ ಸರ್ಕಲ್ ವರೆಗೆ ಪ್ರಧಾನ ಅಂಚೆ ಕಚೇರಿ, ಎಂ.ಜಿ.ರಸ್ತೆ ಮೂಲಕ ಹೆದ್ದಾರಿ ಸಾಗುತ್ತಿದ್ದು ಇಲ್ಲಿನ ಬಾರ್ ಗಳನ್ನು ಮುಚ್ಚದಿರುವಂತೆ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳನ್ನು ಒತ್ತಾಯಿಸಲಾಗುವುದು ಎಂದು ಹೇಳಿದರು.
ಸುಪ್ರೀಂ ಕೋರ್ಟ್ ಆದೇಶದ ವಿರುದ್ಧ ನಾವು ನೇರವಾಗಿ ನ್ಯಾಯಾಲಯದ ಮೆಟ್ಟಿಲೇರಲು ಸಾಧ್ಯವಿಲ್ಲ. ಅಶೋಕ ನಗರ ಅಬಕಾರಿ ಇಲಾಖೆಯ ವ್ಯಾಪ್ತಿಯಲ್ಲಿರುವ ಹಲವು ಬಾರ್ ಗಳನ್ನು ಮುಚ್ಚಲು ಆದೇಶವಾಗಿದೆ. ಇದರಿಂದ ವ್ಯಾಪಾರಿಗಳಿಗೆ ತೀವ್ರ ತೊಂದರೆಯಾಗುವುದರಿಂದ ನಮ್ಮ ಪರವಾಗಿ ಸುಪ್ರೀಂ ಕೋರ್ಟ್ ಗೆ ಮನವಿ ಮಾಡಲು ರಾಜ್ಯ ಸರ್ಕಾರವನ್ನು ಕೋರಲಾಗುವುದು ಎಂದು ನ್ಯಾಶನಲ್ ರೆಸ್ಟೊರೆಂಟ್ ಅಸೊಸಿಯೇಷನ್ ಆಫ್ ಇಂಡಿಯಾದ ನಿರ್ವಹಣಾ ಸಮಿತಿಯ ಸದಸ್ಯ ಆಶಿಶ್ ಕೊತಾರೆ ಹೇಳುತ್ತಾರೆ.
ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ಜೊತೆ ಮಾತನಾಡಿದ ಕಾನೂನು ಸಚಿವ ಟಿ.ಬಿ.ಜಯಚಂದ್ರ,  ರಾಷ್ಟ್ರೀಯ ಹೆದ್ದಾರಿಗಳಲ್ಲಿ ಮದ್ಯದಂಗಡಿಗಳನ್ನು ಮುಚ್ಚದಿರುವಂತೆ ಸೂಚನೆ ನೀಡುವ ಸದನದ ತೀರ್ಮಾನದ ಕುರಿತು ನಾವು ಕೇಂದ್ರ ಸರ್ಕಾರದ ಅಧಿಕಾರಿಗಳಿಗೆ ಮಾಹಿತಿ ಕಳುಹಿಸಿದ್ದೇವೆ. ನಾಡಿದ್ದು 30ರವರೆಗೆ ಸಮಯವಿದ್ದು ಮುಂದಿನ ಕೆಲ ದಿನಗಳಲ್ಲಿ ಇದಕ್ಕೆ ಪರಿಹಾರ ಸಿಗಬಹುದೆಂಬ ನಿರೀಕ್ಷೆಯಿದೆ.ಲೋಕೋಪಯೋಗಿ ಇಲಾಖೆಯ ತಂಡವೊಂದು ಕೇಂದ್ರ ಸರ್ಕಾರದ ಪ್ರತಿನಿಧಿಗಳನ್ನು ಭೇಟಿ ಮಾಡಲಿದ್ದಾರೆ. ಈ ವಿಷಯದಲ್ಲಿ ನಾವು ನೇರ ಅಧಿಕಾರ ಹೊಂದಿಲ್ಲ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com