ಕೌನ್ಸಿಲರ್ ಗಳ ವರ್ತನೆ ನಾಚಿಕೆಗೇಡಿನ ಸಂಗತಿ: ಮೇಯರ್ ಪದ್ಮಾವತಿ

ಬಿಬಿಎಂಪಿ ಕೌನ್ಸಿಲ್ ಸಭೆಯಲ್ಲಿ ಮಂಗಳವಾರ ನಡೆದ ಗದ್ದಲದಲ್ಲಿ ಐವರು ಕೌನ್ಸಿಲರ್ ಗಳು ಗಾಯಗೊಂಡಿದ್ದಾರೆ. ಈ ಸಂಬಂಧ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ...
ಜಿ. ಪದ್ಮಾವತಿ
ಜಿ. ಪದ್ಮಾವತಿ
Updated on

ಬೆಂಗಳೂರು: ಬಿಬಿಎಂಪಿ ಕೌನ್ಸಿಲ್ ಸಭೆಯಲ್ಲಿ ಮಂಗಳವಾರ ನಡೆದ ಗದ್ದಲದಲ್ಲಿ ಐವರು ಕೌನ್ಸಿಲರ್ ಗಳು ಗಾಯಗೊಂಡಿದ್ದಾರೆ. ಈ ಸಂಬಂಧ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಬಿಬಿಎಂಪಿ ಮೇಯರ್ ಪದ್ಮಾವತಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಬಿಬಿಎಂಪಿ  ಕೌನ್ಸಿಲ್ ಸಭೆಯಲ್ಲಿ  ಎಲ್ಲಾ ಪಕ್ಷಗಳ ಪುರುಷ ಕೌನ್ಸಿಲರ್ ಗಳು ನಡೆದುಕೊಂಡ ರೀತಿ ಅಸಹನೀಯವಾದದ್ದು. ಕೌನ್ಸಿಲರ್ ಗಳು ಚುನಾಯಿತ ಪ್ರತಿನಿಧಿಗಳು. ಅವರವರ ವಾರ್ಡ್ ಗಳ ಸಮಸ್ಯೆಗಳ ಬಗ್ಗೆ ಚರ್ಚಿಸಬೇಕಾಗಿತ್ತು. ಆದರೆ ಅಂದು ಕರೆದಿದ್ದ ಸಭೆಯ ಮೂಲ ಉದ್ದೇಶವನ್ನೇ ಮರೆತರು, ಇದೊಂದು ನಾಚಿಕೆಗೇಡಿನ ಸಂಗತಿ ಎಂದು ಬೇಸರ ವ್ಯಕ್ತ ಪಡಿಸಿದ್ದಾರೆ.

ಇರುವ 198 ಕೌನ್ಸಿಲರ್ ಗಳ ಪೈಕಿ ನನ್ನನ್ನು ಸೇರಿ 102 ಮಂದಿ ಮಹಿಳಾ ಕಾರ್ಪೋರೇಟರ್ ಇದ್ದಾರೆ, ಹೆಣ್ಣು ಮಕ್ಕಳು ಬಾಯಿ ಮುಚ್ಚಿಕೊಂಡು ಮೂಕ ಪ್ರೇಕ್ಷಕರಂತೆ ಸುಮ್ಮನೆ ಕುಳಿತುಕೊಳ್ಳಬೇಕು ಎಂದಾದರೇ ಶೇ.50 ರಷ್ಟು ಮೀಸಲಾತಿಯ ಉಪಯೋಗವೇನು ಎಂದು ಅವರು ಪ್ರಶ್ನಿಸಿದ್ದಾರೆ. ಮಂಗಳವಾರದ ಘಟನೆಯಲ್ಲಿ ಮಹಿಳಾ ಕಾರ್ಪೋರೇಟರ್ ಕೂಡ ಗಾಯಗೊಂಡಿದ್ದಾರೆ. ಯಾವುದೇ ಪಕ್ಷಕ್ಕೆ ಸೇರಿರಲಿ ಅವರು ಗೌರವಯುತವಾಗಿ ನಡೆದುಕೊಳ್ಳಬೇಕು ಎಂದು ಹೇಳಿದ್ದಾರೆ.

ಮಂಗಳವಾರ ನಡೆದ ಗದ್ದಲದಲ್ಲಿ ಇಬ್ಬರು ಮಹಿಳೆಯರು ಗಾಯಗೊಂಡಿದ್ದಾರೆ, ಒಬ್ಬರು ಕಾಲಿನ ಗಾಯದಿಂದ ಬಳಲುತ್ತಿದ್ದಾರೆ, ಮತ್ತೊಬ್ಬರಿಗೆ ಬೆರಳಿನಲ್ಲಿ ರಕ್ತ ಸ್ರಾವವಾಗುತ್ತಿದೆ, ಘಟನೆಗೆ ಕಾರಣರಾದ ಕೌನ್ಸಿಲರ್ ಗಳನ್ನು ಅಮಾನತು ಮಾಡುವುದು ಹಾಗೂ ಅವರ ವಿರುದ್ಧ ದೂರು ದಾಖಲಿಸಬಹುದು, ಆದರೆ ಅದು ಪರಿಹಾರವಲ್ಲ, ಮುಖ್ಯ ಮಂತ್ರಿ ಸೇರಿದಂತೆ ಹಲವು ನಾಯಕರು ಮತ್ತೊಮ್ಮೆ ಕೌನ್ಸಿಲ್ ಸಭೆ ಕರೆದು ನಾಗರಿಕ ಸಮಸ್ಯೆಗಳ ಬಗ್ಗೆ ಚರ್ಚಿಸಬೇಕೆಂದು ಸಲಹೆ ನೀಡಿದ್ದಾರೆ ಎಂದು ಪದ್ಮಾವತಿ ತಿಳಿಸಿದ್ದಾರೆ.

ಬಿಬಿಎಂಪಿ ಕೌನ್ಸಿಲ್ ಸಭೆಗೆ ಮಾರ್ಷಲ್ ಗಳನ್ನು ನೇಮಿಸುವ ಅಗತ್ಯವಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ವಿಧಾನಸಭೆಯಲ್ಲಿ ಮಾರ್ಷಲ್ ಗಳನ್ನು ನೇಮಿಸುವಂತೆ ಬಿಬಿಎಂಪಿಗೂ ನೇಮಿಸಬೇಕು, ನಾಲ್ಕು ಅವಧಿಗೆ ಕೌನ್ಸಿಲರ್ ಆಗಿರುವ ನನಗೆ ಸುಮಾರು 30 ವರ್ಷಗಳ ರಾಜಕೀಯ ಅನುಭವವಿದೆ, ಇಷ್ಟು ವರ್ಷಗಳ ಅವಧಿಯಲ್ಲಿ ಒಮ್ಮೆಯೂ ಇಂಥ ವರ್ತನೆಯನ್ನು ನೋಡಿರಲಿಲ್ಲ, ನಾನು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ ಜಾರ್ಜ್ ಅವರ ಜೊತೆ ಚರ್ಚಿಸಿ ನಿವೃತ್ತ ಸೈನಿಕರನ್ನು ಕೌನ್ಸಿಲ್ ಸಭೆಗೆ ಮಾರ್ಷಲ್ ಗಳನ್ನಾಗಿ ನೇಮಿಸುವಂತೆ ಮನವಿ ಮಾಡುತ್ತೇನೆ ಎಂದು ಹೇಳಿದ್ದಾರೆ.

ಮಾರ್ಚ್ 20 ರಂದು ಮತ್ತೊಂದು ಕೌನ್ಸಿಲ್ ಸಭೆ ಇದೆ. ಅದಕ್ಕೂ ಮುನ್ನ ಎಲ್ಲಾ ಕೌನ್ಸಿಲರ್ ಗಳಿಗೆ ಪತ್ರ ಬರೆದು ಸಭೆಯಲ್ಲಿ ಹೇಗೆ ವರ್ತಿಸಬೇಕು ಎಂಬುದರ ಬಗ್ಗೆ ತಿಳಿಸುತ್ತೇನೆ ಎಂದು ಮೇಯರ್ ಪದ್ಮಾವತಿ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com