ಸಶಸ್ತ್ರ ಮೀಸಲು ಸಿಬ್ಬಂದಿಗೆ ವಾರದ ರಜೆಗೆ ಕತ್ತರಿ; ಪರಿಹಾರದ ವೇತನವೂ ಇಲ್ಲ

ನಗರದ ಅನೇಕ ಸಶಸ್ತ್ರ ಮೀಸಲು ಸಿಬ್ಬಂದಿ ಕಳೆದೊಂದು ವರ್ಷದಿಂದ ವಾರದ ರಜೆ ಪಡೆದುಕೊಂಡಿಲ್ಲ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ನಗರದ ಅನೇಕ ಸಶಸ್ತ್ರ ಮೀಸಲು ಸಿಬ್ಬಂದಿ  ಕಳೆದೊಂದು ವರ್ಷದಿಂದ ವಾರದ ರಜೆ ಪಡೆದುಕೊಂಡಿಲ್ಲ ಮತ್ತು ಅದಕ್ಕೆ ಪರಿಹಾರದ ವೇತನ ಕೂಡ ಸಿಕ್ಕಿಲ್ಲ. 
ಕಳೆದ ವರ್ಷ ಜೂನ್ ನಿಂದ ವಾರದ ರಜೆಯೂ ನೀಡಿಲ್ಲ ಮತ್ತು ಆ ದಿನ ಕೆಲಸ ಮಾಡಿದ್ದಕ್ಕೆ ವೇತನವನ್ನೂ ನೀಡಿಲ್ಲ ಎಂದು ಕಾನ್ಸ್ಟೇಬಲ್ ವೊಬ್ಬರು ಹೇಳಿದರೆ ಮತ್ತೊಬ್ಬರಿಗೆ ಕಳೆದ ಅಕ್ಟೋಬರ್ ನಿಂದ ವಾರದ ರಜೆ ಮತ್ತು ಅದಕ್ಕೆ ಪರಿಹಾರದ ಹಣ ಸಿಕ್ಕಿಲ್ಲವಂತೆ. ಸಿಬ್ಬಂದಿ ಕೊರತೆಯಿಂದಾಗಿ ರಜಾ ದಿನಗಳಲ್ಲಿಯೂ ನಾವು ಕೆಲಸ ಮಾಡಬೇಕಾಗುತ್ತದೆ ಎನ್ನುತ್ತಾರೆ ಅವರು. ಹೆಚ್ಚಿನ ಸಮಯ ಕೆಲಸ ಮಾಡಿದರೆ ಸಿಬ್ಬಂದಿಗೆ 200 ರೂಪಾಯಿ ಹೆಚ್ಚುವರಿ ವೇತನ ನೀಡಬೇಕು. ಆದರೆ ಅದು ಸಿಗುತ್ತಿಲ್ಲ.
ಕೆಲವೊಮ್ಮೆ ಸಿಬ್ಬಂದಿ ವಿಐಪಿ ಮತ್ತು ವಿವಿಐಪಿಗಳಿಗೆ ಭದ್ರತೆ ಹೆಸರಿನಲ್ಲಿ ಬೆಳಗ್ಗೆಯಿಂದ ರಾತ್ರಿಯವರೆಗೆ ದುಡಿಯಬೇಕು. ಹಲವು ಬಾರಿ ಮೇಲಾಧಿಕಾರಿಗಳಿಂದ ಕಿರುಕುಳಕ್ಕೊಳಗಾಗಬೇಕಾಗುತ್ತದೆ. ತಮಗಾಗುತ್ತಿರುವ ಅನ್ಯಾಯಗಳನ್ನು ಪ್ರತಿಭಟಿಸಿ ಸಿಬ್ಬಂದಿ ಕಳೆದ ವರ್ಷ ಜೂನ್ ನಲ್ಲಿ ಮುಷ್ಕರ ನಡೆಸುವುದಾಗಿ ಎಚ್ಚರಿಕೆ ನೀಡಿದ್ದರು. ಅಧಿಕ ವೇತನ ಮತ್ತು ನಿಯಮಿತ ರಜೆ ಯೋಜನೆ ನೀಡುವಂತೆ ಒತ್ತಾಯಿಸಿದ್ದರು. ಆದರೆ ಸರ್ಕಾರ ಪ್ರತಿಭಟನೆ ನಡೆಸಿದವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ ಹಿನ್ನೆಲೆಯಲ್ಲಿ ಮೀಸಲು ಪಡೆ ಸಿಬ್ಬಂದಿ ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳಬೇಕಾಗಿ ಬಂತು.
ಕೆಲವು ವಿದ್ಯಾವಂತ ಮೀಸಲು ಪಡೆ ಸಿಬ್ಬಂದಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ತರಬೇತಿ ಪಡೆದಿರುತ್ತಾರೆ. ಅಂತವರು ಮನೆಗೆಲಸ, ಹಿರಿಯ ಅಧಿಕಾರಿಗಳಿಗೆ ವಾಹನ ಚಾಲಕರಾಗಿ ಕೆಲಸ ಮಾಡುತ್ತಾರೆ. ಹೆಡ್ ಕಾನ್ಸ್ಟೇಬಲ್ ಸೇರಿ ಗ್ರೇಡ್ ಸಿ ನೌಕರರನ್ನು ಇಂತಹ ಕೆಲಸ ಮಾಡಲು ಹೇಳುವುದು ನೋವಿನ ಸಂಗತಿ ಎಂದು ಹೆಡ್ ಕಾನ್ಸ್ಟೇಬಲ್ ವೊಬ್ಬರು ಹೇಳುತ್ತಾರೆ. 
ಈ ಬಗ್ಗೆ ನಗರ ಮೀಸಲು ಪಡೆ ಜಿಲ್ಲಾ ಪೊಲೀಸ್ ವರಿಷ್ಠ ಡಾ.ಕಿಶೋರ್ ಬಾಬು ಅವರನ್ನು ಕೇಳಿದಾಗ, ಈ ಸಮಸ್ಯೆ ಇದೆ. ಇಲಾಖೆ ಸದ್ಯದಲ್ಲಿಯೇ  ಹೆಚ್ಚುವರಿ ಅವಧಿ ಕೆಲಸ ಮಾಡಿದ ಸಿಬ್ಬಂದಿಗೆ ವೇತನ ನೀಡಲಿದೆ ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com