ನಮ್ಮ ಕ್ಯಾಂಟೀನ್ ಆರಂಭಕ್ಕೆ ಪ್ರಕ್ರಿಯೆ ಆರಂಭಿಸಿರುವ ಬಿಬಿಎಂಪಿ

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ವರ್ಷ ಮಂಡಿಸಿದ ಬಜೆಟ್ ನ ವಿಶೇಷತೆಗಳಲ್ಲಿ ನಮ್ಮ ಕ್ಯಾಂಟೀನ್...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು:ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ವರ್ಷ ಮಂಡಿಸಿದ ಬಜೆಟ್ ನ ವಿಶೇಷತೆಗಳಲ್ಲಿ ನಮ್ಮ ಕ್ಯಾಂಟೀನ್ ಕೂಡ ಒಂದು. ಬೆಳಗಿನ ಉಪಹಾರ, ಊಟ ಮತ್ತು ರಾತ್ರಿಯ ಊಟ ಜನರಿಗೆ ಅತ್ಯಂತ ಕಡಿಮೆ ಬೆಲೆಯಲ್ಲಿ ನೀಡುವ ಉದ್ದೇಶವನ್ನು ಹೊಂದಿದೆ. ಬೆಂಗಳೂರು ನಗರದ ಎಲ್ಲಾ 198 ವಾರ್ಡುಗಳಲ್ಲಿ ನಮ್ಮ ಕ್ಯಾಂಟೀನು ಆರಂಭವಾಗಲಿದ್ದು, ಇದಕ್ಕಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕಾರ್ಯಾರಂಭ ಮಾಡಿದೆ.
ಈ ಸಾಲಿನ ಬಜೆಟ್ ನಲ್ಲಿ ನಮ್ಮ ಕ್ಯಾಂಟೀನ್ ಗೆ 100 ಕೋಟಿ ರೂಪಾಯಿ ಮೀಸಲಿಡಲಾಗಿದೆ.
ಈ ಬಗ್ಗೆ ವಿವರ ನೀಡಿದ ಬಿಬಿಎಂಪಿ ಮೇಯರ್ ಜಿ.ಪದ್ಮಾವತಿ, ಈ ಕುರಿತು ವಿವರಗಳನ್ನು ಇನ್ನೂ ಅಂತಿಮಗೊಳಿಸಿಲ್ಲ. ಪ್ರತಿ ವಾರ್ಡುಗಳಲ್ಲಿ ನಮ್ಮ ಕ್ಯಾಂಟೀನ್ ಆರಂಭಿಸಲು ಟೆಂಡರ್ ಕರೆಯಲಾಗುವುದು ಅಥವಾ ಸ್ವಸಹಾಯ ಗುಂಪುಗಳಿಗೆ ನೀಡಲಾಗುವುದು ಎಂದು ಹೇಳಿದರು.
ಮಹಿಳಾ  ಸ್ವಸಹಾಯ ಗುಂಪುಗಳಿಗೆ ನೀಡಿದರೆ   ಹಲವು ಮಹಿಳೆಯರಿಗೆ ಉದ್ಯೋಗ ದೊರಕಲು ಸಹಾಯವಾಗುತ್ತದೆ ಎಂದು ಮೇಯರ್ ಅಭಿಪ್ರಾಯಪಟ್ಟರು. ಕ್ಯಾಂಟೀನ್ ನ ಮೆನುಗಳು ಇನ್ನೂ ನಿರ್ಧಾರವಾಗಿಲ್ಲ ಎಂದು ಅವರು ಹೇಳಿದರು.
ಇಂಟರ್ ನ್ಯಾಷನಲ್ ಸೊಸೈಟಿ ಫಾರ್ ಕೃಷ್ಣಾ ಕಾನ್ಷಿಯಸ್ ನೆಸ್ ಗೆ ಗುತ್ತಿಗೆ ನೀಡುವ ಸಲಹೆ ಕೂಡ ಕೇಳಿಬಂದಿದೆ ಎಂದು ಬಿಬಿಎಂಪಿಯ ಕಾಂಗ್ರೆಸ್ ಹಿರಿಯ ನಾಯಕರೊಬ್ಬರು ಹೇಳುತ್ತಾರೆ. ಅದು ಬಿಬಿಎಂಪಿ ಕೌನ್ಸಿಲ್ ನಲ್ಲಿ ಚರ್ಚೆಯಾಗಿ ತೀರ್ಮಾನಕ್ಕೆ ಬರಲಾಗುವುದು. ತಮಿಳುನಾಡಿನ ಅಮ್ಮಾ ಕ್ಯಾಂಟೀನ್ ಮಾದರಿಯಲ್ಲಿಯೇ ಮೆನುಗಳಿರುತ್ತವೆ. 5 ರೂಪಾಯಿಗೆ ಇಡ್ಲಿ, ಉಪ್ಮಾ, ಪೊಹಾ, ಪೊಂಗಲ್, ರೈಸ್ ಬಾತ್ ಮೊದಲಾದವುಗಳನ್ನು ನೀಡಲಾಗುವುದು. 10 ರೂಪಾಯಿಗೆ ಅನ್ನ-ಸಾಂಬಾರ್, ಅನ್ನ-ರಸಂ, ಮುದ್ದೆ ಸಾರು ಮೊದಲಾದವುಗಳು ಇರುತ್ತವೆ ಎಂದು ಹೇಳಿದರು.
ಸರ್ಕಾರದ ಬೆಂಬಲವಿಲ್ಲದೆ 5, 10 ರೂಪಾಯಿಗೆ ಊಟ, ತಿಂಡಿ ಕೊಡಲು ಸಾಧ್ಯವಿಲ್ಲ. ಈ ಬಗ್ಗೆ ಹೊಟೇಲಿನ ಮಾಲಿಕನಾಗಿ ನನಗೆ ಅರಿವಿದೆ ಎನ್ನುತ್ತಾರೆ ಬೃಹತ್ ಬೆಂಗಳೂರು ಹೊಟೇಲ್ ಸಂಘದ ಮಾಜಿ ಕಾರ್ಯದರ್ಶಿ ರಮಾ ಮೂರ್ತಿ.
ಇದರಿಂದ ದರ್ಶಿನಿ ಮತ್ತು ಹೊಟೇಲ್ ಗಳಿಗೆ ತಮಿಳುನಾಡಿನಂತೆ ತೊಂದರೆಯಾಗುವುದಿಲ್ಲ. ಸರ್ಕಾರ ಬಿಪಿಎಲ್ ಕುಟುಂಬಗಳಿಗೆ ಕಾರ್ಡು ನೀಡಬೇಕು. ಆಗ ಬಡವರಿಗೆ ಮಾತ್ರ ಆಹಾರ ಒದಗಿಸಲು ಅನುಕೂಲವಾಗುತ್ತದೆ. ಇಲ್ಲದಿದ್ದರೆ ಎಲ್ಲಾ ಜನರು ನಮ್ಮ ಕ್ಯಾಂಟೀನ್ ಗೆ ಹೋಗುತ್ತಾರೆ. ಬಡಜನತೆಗೆ ಆಹಾರ ಒದಗಿಸುವ ಉದ್ದೇಶ ಈಡೇರಬೇಕು ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com