ಎಸ್ ಎಸ್ ಎಲ್ ಸಿಯಲ್ಲಿ ಶೇ. 51 ರಷ್ಟು ಅಂಕ ಪಡೆದ ಮಗ: ಸಂಭ್ರಮಾಚರಣೆಗೆ 20 ಸಾವಿರ ಖರ್ಚು ಮಾಡಿದ ಅಪ್ಪ!

ಮಗ ಎಸ್ಸೆಸ್ಸೆಲ್ಸಿಯಲ್ಲಿ ಶೇ 51ರಷ್ಟು ಅಂಕಗಳನ್ನು ಪಡೆದು ದ್ವಿತೀಯ ದರ್ಜೆಯಲ್ಲಿ ಪಾಸಾಗಿರುವುದರಿಂದ ಖುಷಿಯಾದ ತಂದೆ ಗ್ರಾಮದಲ್ಲಿ ಸಂಭ್ರಮಾಚರಣೆಗಾಗಿ 20 ಸಾವಿರ ...
ಎಸ್ ಎಸ್ ಎಲ್ ಸಿಯಲ್ಲಿ ಶೇ.51 ರಷ್ಟು ಅಂಕ ಪಡೆದ ವಿದ್ಯಾರ್ಥಿ
ಎಸ್ ಎಸ್ ಎಲ್ ಸಿಯಲ್ಲಿ ಶೇ.51 ರಷ್ಟು ಅಂಕ ಪಡೆದ ವಿದ್ಯಾರ್ಥಿ
ಕಲಬುರಗಿ: ಮಗ ಎಸ್ಸೆಸ್ಸೆಲ್ಸಿಯಲ್ಲಿ ಶೇ 51ರಷ್ಟು ಅಂಕಗಳನ್ನು ಪಡೆದು ದ್ವಿತೀಯ ದರ್ಜೆಯಲ್ಲಿ ಪಾಸಾಗಿರುವುದರಿಂದ ಖುಷಿಯಾದ ತಂದೆ ಗ್ರಾಮದಲ್ಲಿ ಸಂಭ್ರಮಾಚರಣೆಗಾಗಿ 20 ಸಾವಿರ ರು ಹಣ ಖರ್ಚು ಮಾಡಿದ್ದಾರೆ.
ಮೈಕ್‌ ಸೆಟ್‌ನಲ್ಲಿ ಸಂಗೀತ ಹಚ್ಚಿ ಗ್ರಾಮಸ್ಥರ ಜೊತೆ ಕುಣಿದು ಕುಪ್ಪಳಿಸಿದ್ದಾರೆ. ಜೊತೆಗೆ ಗ್ರಾಮದ ಎಲ್ಲ ಮನೆಗಳಿಗೂ ಸಿಹಿ ಹಂಚಿ, ಮಗನ ಫಲಿತಾಂಶ ತಿಳಿಸಿದ್ದಾರೆ. ಜಿಲ್ಲೆಯ ಸೇಡಂ ತಾಲ್ಲೂಕು ಬೆನಕನಹಳ್ಳಿಯ ದೇವೀಂದ್ರಪ್ಪ ಗುಮ್ಮರಿ ಹೀಗೆ ಸಂಭ್ರಮವನ್ನು ಆಚರಿಸಿದ್ದಾರೆ.
ದೇವೀಂದ್ರಪ್ಪ ಅವರ ಮೊದಲ ಮಗ ಅರ್ಜುನ ಯಾದಗಿರಿ ಜಿಲ್ಲೆ ಗುರುಮಠಕಲ್‌ನ ಹಾಸ್ಟೆಲ್‌ನಲ್ಲಿ ಇದ್ದುಕೊಂಡು ಓದಿದ್ದಾನೆ. ಫಲಿತಾಂಶ ಪ್ರಕಟವಾದ ಬಳಿಕ ತಾತ್ಕಾಲಿಕ ಅಂಕಪಟ್ಟಿಯೊಂದಿಗೆ ಗ್ರಾಮಕ್ಕೆ ಬಂದಿದ್ದಾನೆ.
ಈ ವೇಳೆ ದೇವೀಂದ್ರಪ್ಪ ಮಗನಿಗೆ ಹಾರ ಹಾಕಿ, ದೇವಸ್ಥಾನದಿಂದ ತಮ್ಮ ಮನೆಯವರೆಗೆ ಮೆರವಣಿಗೆಯಲ್ಲಿ ಕರೆ ತಂದಿದ್ದಾರೆ. ಬಳಿಕ ರಾತ್ರಿ ಡಿ.ಜೆ. ಹಚ್ಚಿ ಗ್ರಾಮಸ್ಥರೊಂದಿಗೆ ಕುಣಿದು ಕುಪ್ಪಳಿಸಿದ್ದಾರೆ. ಇದಕ್ಕಾಗಿ ಅವರು ರು. 20 ಸಾವಿರ ಖರ್ಚು ಮಾಡಿದ್ದಾರೆ.
ನಾನು ಅಷ್ಟೇ ಅಲ್ಲ, ನಮ್ಮ ತಂದೆ, ತಾತ ಯಾರೂ ಕಲಿತವರಲ್ಲ. ನಮ್ಮದು ಕೃಷಿ ಕುಟುಂಬ. ಎಸ್ಸೆಸ್ಸೆಲ್ಸಿಯಲ್ಲಿ  ಮಗ ದ್ವಿತೀಯ ದರ್ಜೆಯಲ್ಲಿ ಪಾಸಾಗಿರುವುದು ಖುಷಿ ತಂದಿದೆ ದೇವಿಂದ್ರಪ್ಪ ಸಂಭ್ರಮಿಸಿದ್ದಾರೆ.
ಆರು ಎಕರೆ ಹೊಲ ಇದೆ. ವರ್ಷಪೂರ್ತಿ ದುಡಿದರೂ ಹೊಟ್ಟೆ ತುಂಬುವುದಿಲ್ಲ. ನನ್ನಂತೆ ನನ್ನ ಮಕ್ಕಳೂ ಕೃಷಿ ಮಾಡುತ್ತ ತೊಂದರೆ ಅನುಭವಿಸಬಾರದು, ಅವರು ಚೆನ್ನಾಗಿ ಓದಿ ತಮ್ಮ ಕಾಲ ಮೇಲೆ ತಾವು ನಿಂತುಕೊಳ್ಳಬೇಕು. ಹೀಗಾಗಿ ಮಕ್ಕಳನ್ನು  ಓದಿಸುತ್ತಿದ್ದೇನೆ ಎಂದು ಹೇಳಿದರು.
ಮಗನಿಗೆ ಐಟಿಐ ಓದಿಸಬೇಕೆಂಬ ಹಂಬಲವಿದೆ. ಹೀಗಾಗಿ ಐಟಿಐ ಓದಿಸಿ ತಮ್ಮ ಗ್ರಾಮದಲ್ಲಿ ನಿರ್ಮಾಣವಾಗಲಿರುವ ಸಿಮೆಂಟ್ ಕಾರ್ಖಾನೆಯಲ್ಲಿ ಮಗ ಕೆಲಸ ಮಾಡಬೇಕೆಂಬ ಆಸೆ ವ್ಯಕ್ತ ಪಡಿಸಿದ್ದಾರೆ. 4ನೇ ತರಗತಿ ಓದಿರುವ  ನನಗೆ ಶಿಕ್ಷಣ ಎಷ್ಟು ಮುಖ್ಯ ಎಂಬುದರ ಬಗ್ಗೆ ತಿಳಿದಿದೆ ಎಂದು ದೇವಿಂದ್ರಪ್ಪ ಹೇಳುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com