ಮಿನರಲ್ ವಾಟರ್ ಸುಲಿಗೆ: ಕಂಪನಿಗಳ ಮೇಲೆ ದಾಳಿಗೆ ಸರ್ಕಾರ ಸಿದ್ಧತೆ

ನಿಗದಿತ ದರಕ್ಕಿಂತ ದುಪ್ಪಟ್ಟು ದರದಲ್ಲಿ ಕುಡಿಯುವ ನೀರಿನ ಬಾಟಲಿಗಳನ್ನು ಮಾರಾಟ ಮಾಡುತ್ತಿರುವ ಕಂಪನಿಗಳಿಗೆ ಶೀಘ್ರದಲ್ಲೇ ಕಂಟಕ ಎದುರಾಗಲಿದ್ದು, ದಾಳಿಗೆ ರಾಜ್ಯ ಕಾನೂನು ಮಾಪನಶಾಸ್ತ್ರ ಇಲಾಖೆ ಸಿದ್ಧತೆ ನಡೆಸಿದೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೆಂಗಳೂರು: ನಿಗದಿತ ದರಕ್ಕಿಂತ ದುಪ್ಪಟ್ಟು ದರದಲ್ಲಿ ಕುಡಿಯುವ ನೀರಿನ ಬಾಟಲಿಗಳನ್ನು ಮಾರಾಟ ಮಾಡುತ್ತಿರುವ ಕಂಪನಿಗಳಿಗೆ ಶೀಘ್ರದಲ್ಲೇ ಕಂಟಕ ಎದುರಾಗಲಿದ್ದು, ದಾಳಿಗೆ ರಾಜ್ಯ ಕಾನೂನು ಮಾಪನಶಾಸ್ತ್ರ ಇಲಾಖೆ ಸಿದ್ಧತೆ ನಡೆಸಿದೆ ಎಂದು ತಿಳಿದುಬಂದಿದೆ. 
ಕೆಲ ದಿನಗಳ ಹಿಂದಷ್ಟೇ 1 ಬಾಟಲ್ ನೀರಿಗೆ ರೂ.50 ಪಡೆದು ಸುಲಿಗೆ ಮಾಡುತ್ತಿದ್ದ ಮಾಲ್'ಗಳು ಹಾಗೂ ಮಲ್ಟಿಪ್ಲೆಕ್ಸ್ ಗಳ ಮೇಲೆ ದಾಳಿ ಮಾಡಿದ್ದ ಅಧಿಕಾರಿಗಳು 46ಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲು ಮಾಡಿಕೊಂಡಿತ್ತು. ಇದೀಗ ನೀರಿನ ಬಾಟಲಿಗಳನ್ನು ತಯಾರು ಮಾಡುತ್ತಿರುವ ಕಂಪನಿಗಳ ಮೇಲೆಯೇ ಅಧಿಕಾರಿಗಳು ದಾಳಿ ನಡೆಸಲು ಸಿದ್ಥತೆ ನಡೆಸುತ್ತಿದ್ದಾರೆಂದು ಮೂಲಗಳು ತಿಳಿಸಿವೆ. 
ಮಾಲ್'ಗಳು, ಮಲ್ಟಿಪ್ಲೆಕ್ಸ್'ಗಳು, ವಿಮಾನ ನಿಲ್ದಾಣ ಸೇರಿದಂತೆ ಇನ್ನಿತರೆ ವಾಣಿಜ್ಯ ಸಂಸ್ಥೆಗಳಿಗೆ ನೀರಿನ ಬಾಟಲಿಗಳನ್ನು ಪೂರೈಕೆ ಮಾಡುವ ಕಂಪನಿಗಳೇ ನಿಗದಿತ ಮಾರಾಟ ಬೆಲೆಗಿಂತಲೂ ಹೆಚ್ಚಿನ ಬೆಲೆಗಳನ್ನು ಮುದ್ರಣ ಮಾಡುತ್ತಿವೆ. ಹೀಗಾಗಿ ಗ್ರಾಹಕ ರಕ್ಷಣಾ ಕಾಯ್ದೆಯಡಿಯಲ್ಲಿ ಕಂಪನಿಗಳ ವಿರುದ್ಧವೇ ಕ್ರಮ ಕೈಗೊಳ್ಳಲು ಮುಂದಾಗುತ್ತಿದ್ದಾರೆ. 
ವಿವಿಧ ಪ್ರದೇಶಗಳಲ್ಲಿ ಮಾರಾಟ ಮಾಡುವ ನೀರಿನ ಬಾಟಲಿಗಳ ಬೆಲೆ ವಿವಿಧ ರೀತಿಯಲ್ಲಿರುತ್ತವೆ. ಕಂಪನಿಗಳು ಹಾಗೂ ವಾಣಿಜ್ಯ ಸಂಸ್ಥೆಗಳಲ್ಲಿ ಇಷ್ಟಕ್ಕೆ ಬಂದಂತೆ ಬೆಲೆಗಳನ್ನು ನಿಗದಿ ಮಾಡಲಾಗುತ್ತಿವೆ. ಹೀಗಾಗಿ ರಾಜ್ಯ ಕಾನೂನು ಮಾಪನಶಾಸ್ತ್ರ ಇಲಾಖೆ 270 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದು, ಮೇ.4 ಮತ್ತು 5 ರಂದು ನಡೆಸಲಾದ ಎರಡು ದಿನಗಳ ದಾಳಿಯಲ್ಲಿ 299 ನೀರಿನ ಬಾಟಲಿಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಇದಲ್ಲದೆ, ಮಾಲ್ ಗಳು ಹಾಗೂ ಮಲ್ಟಿಪ್ಲೆಕ್ಸ್ ಗಳಲ್ಲಿ ಪ್ಯಾಕ್ ಮಾಡಲಾಗಿರುವ ಆಹಾರ ಪದಾರ್ಥಗಳನ್ನು ನಿಗದಿಗಿಂತಲೂ ಹೆಚ್ಚಿನ ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಆದರೆ, ನಾವು ಅಂಗಡಿಗಳ ವಿರುದ್ಧ ಕ್ರಮ ಕೈಗೊಂಡಿಲ್ಲ. ಏಕೆಂದರೆ, ಅಂಗಡಿ ಮಾಲೀಕರು ಆಹಾರ ಪದಾರ್ಥಗಳು ಹಾಗೂ ನೀರಿನ ಬಾಟಲಿಗಳ ಮೇಲೆ ಹಾಕಿರುವ ಬೆಲೆಯಂತೆಯೇ ಮಾರಾಟ ಮಾಡುತ್ತಿದ್ದೇವೆಂದು ತಿಳಿಸುತ್ತಿದ್ದಾರೆಂದು ಅಧಿಕಾರಿಗಳು ತಿಳಿಸಿದ್ದಾರೆ. 
ಈಗಾಗಲೇ ಆಹಾರ ಪದಾರ್ಥ ಹಾಗೂ ನೀರಿನ ಬಾಟಲಿಗಳನ್ನು ಪೂರೈಕೆ ಮಾಡುತ್ತಿರುವ ಕಂಪನಿಗಳ ಕುರಿತಂತೆ ಮಾಹಿತಿ ಕಲೆ ಹಾಕಲಾಗಿದೆ. ನಿಯಮ ಉಲ್ಲಂಘಿಸುತ್ತಿರುವ ಕಂಪನಿಗಳ ವಿರುದ್ಧ ಶೀಘ್ರದಲ್ಲೇ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ. 
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೂ ಆಹಾರ ಪದಾರ್ಥಗಳು ಹಾಗೂ ನೀರಿನ ಬಾಟಲಿಗಳಿಗೆ ದುಪ್ಪಟ್ಟು ಹಣ ಪಡೆದುಕೊಳ್ಳುತ್ತಿದ್ದಾರೆಂದು ಹೇಳಿ ಹಲವಾರು ದೂರುಗಳು ಬಂದಿವೆ. ವಿಮಾನ ನಿಲ್ದಾಣಗಳಿಗೆ ನಾವು ಯಾವುದೇ ರೀತಿಯ ವಿನಾಯಿತಿಗಳನ್ನು ನೀಡುವುದಿಲ್ಲ ಎಂದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com