ಮೈಸೂರು: ವಿದ್ಯಾರ್ಥಿನಿ ಸಾವು; ಡೆಂಗ್ಯು ಜ್ವರದ ಶಂಕೆ

ಡೆಂಗ್ಯು ಜ್ವರದ ಶಂಕೆಯಿಂದ ಮೈಸೂರಿನ ಮಹಾರಾಣಿ ಹುಡುಗಿಯರ ಹಾಸ್ಟೆಲ್ ನಲ್ಲಿ ವಿದ್ಯಾರ್ಥಿನಿಯೊಬ್ಬಳು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಮೈಸೂರು: ಡೆಂಗ್ಯು ಜ್ವರದ ಶಂಕೆಯಿಂದ ಮೈಸೂರಿನ ಮಹಾರಾಣಿ ಹುಡುಗಿಯರ ಹಾಸ್ಟೆಲ್ ನಲ್ಲಿ ವಿದ್ಯಾರ್ಥಿನಿಯೊಬ್ಬಳು ಮೃತಪಟ್ಟಿದ್ದು ವಿದ್ಯಾರ್ಥಿಗಳು ನಿನ್ನೆ ಪ್ರತಿಭಟನೆ ನಡೆಸಿದರು. 
ಪೆರಿಯಾಪಟ್ಟಣ ತಾಲ್ಲೂಕಿನ ದ್ವಿತೀಯ ಬಿಎಸ್ಸಿ ವಿದ್ಯಾರ್ಥಿನಿ ಸಂಚಿತಾ ಎಂ.ಅರದ(20 ವರ್ಷ) ತೀವ್ರ ಜ್ವರದಿಂದ ಬಳಲುತ್ತಿದ್ದಳು. ಹಾಸ್ಟೆಲ್ ಶುಲ್ಕ ಪಾವತಿಸುವವರೆಗೆ ವಾರ್ಡನ್ ಆಕೆಯನ್ನು ಮನೆಗೆ ಹೋಗಲು ಬಿಟ್ಟಿರಲಿಲ್ಲ. ಕೊನೆಗೆ ಊರಿಗೆ ಹೋದ ಮೇಲೆ ಆಕೆಯ ಪೋಷಕರು ಜೆಎಸ್ಎಸ್ ಆಸ್ಪತ್ರೆಗೆ ಕರೆದುಕೊಂಡು ಹೋದರು. ಅಲ್ಲಿ ಒಂದು ವಾರದವರೆಗೆ ಸಾವು ಬದುಕಿನ ನಡುವೆ ಹೋರಾಟ ನಡೆಸಿ ನಿನ್ನೆ ಅಪರಾಹ್ನ ಮೃತಪಟ್ಟಿದ್ದಾಳೆ. ಆಕೆ ಹಾಸ್ಟೆಲ್ ಗೆ ಪ್ರವೇಶ ಶುಲ್ಕ 7,500 ಮತ್ತು ತಿಂಗಳ ಶುಲ್ಕ 1,500ನ್ನು ಪಾವತಿಸಿದ್ದಳು.
ಸಂಚಿತಾ ಅತೀ ಜ್ವರದಿಂದ ಬಳಲುತ್ತಿದ್ದರೂ ಕೂಡ ಆಕೆ ಶುಲ್ಕ ಪಾವತಿಸುವವರೆಗೆ ಹಾಸ್ಟೆಲ್ ವಾರ್ಡನ್ ಮನೆಗೆ ಹೋಗಲು ಬಿಟ್ಟಿರಲಿಲ್ಲ. ಸಮಯಕ್ಕೆ ಸರಿಯಾಗಿ ಸಂಚಿತಾಗೆ ಹಾಸ್ಟೆಲ್ ಗೆ ಫೀಸು ಕಟ್ಟಲು ಸಾಧ್ಯವಾಗಲಿಲ್ಲ. ಒಂದು ವಾರದ ಹಿಂದೆಯಷ್ಟೇ ಆಕೆಯ ಪೋಷಕರು ಹಣ ಕಳುಹಿಸಿದ್ದರು. ಹಾಸ್ಟೆಲ್ ಶುಲ್ಕ ಪಾವತಿಸಿದ ನಂತರ ಆಕೆ ತನ್ನ ಊರಿಗೆ ಹೋಗಿದ್ದಳು ಎಂದು ಸಂಚಿತಾಳ ರೂಂಮೇಟ್ ಹೇಳುತ್ತಾಳೆ.
ಆದರೆ ಮಹಾರಾಣಿ ಕಾಲೇಜಿನ ಪ್ರೊಫೆಸರ್ ಹೇಳುವ ಪ್ರಕಾರ ಆಕೆ ಊರಿಗೆ ಹೋಗುತ್ತಿದ್ದಾಗ ಸಣ್ಣ ಮಟ್ಟಿಗೆ ಜ್ವರ ಇತ್ತು. 
ವಿದ್ಯಾರ್ಥಿನಿ ಮಿದುಳಿನ ಉರಿಯೂತದಿಂದ ಮೃತಪಟ್ಟಿರಬಹುದು. ಕಳೆದ ಮಂಗಳವಾರ ಪರೀಕ್ಷೆ ಮಾಡಿಸಿದಾಗ ಡೆಂಗ್ಯು ಪರೀಕ್ಷೆಯಲ್ಲಿ ನೆಗೆಟಿವ್ ಬಂದಿತ್ತು. ನಾವು ಆಸ್ಪತ್ರೆಗೆ ಭೇಟಿ ನೀಡಿದಾಗ ಆಕೆಯ ಪರಿಸ್ಥಿತಿ ಚಿಂತಾಜನಕವಾಗಿತ್ತು. ವರದಿ ನೋಡಿದ ಮೇಲೆಯೇ ಇದು ಡೆಂಗ್ಯುವಿನಿಂದ ಮೃತಪಟ್ಟಿದ್ದು ಹೌದೇ ಅಲ್ಲವೇ ಎಂಬುದನ್ನು ನಿರ್ಧರಿಸಬಹುದು ಎನ್ನುತ್ತಾರೆ  ಜಿಲ್ಲಾ ವೆಕ್ಟರ್ ಬೋರ್ನ್ ಡಿಸೀಸಸ್ ಕಂಟ್ರೋಲ್ ಆಫೀಸರ್ ಡಾ.ಎಸ್. ಚಿದಂಬರ್ ತಿಳಿಸಿದ್ದಾರೆ.
ವಿದ್ಯಾರ್ಥಿನಿ ಮೃತಪಟ್ಟ ಸುದ್ದಿ ತಿಳಿಯುತ್ತಿದ್ದಂತೆ ಹಾಸ್ಟೆಲ್ ನ ವಿದ್ಯಾರ್ಥಿನಿಯರು ವಾರ್ಡನ್ ವಿರುದ್ಧ ಪ್ರತಿಭಟನೆ ನಡೆಸಲು ಸಜ್ಜಾದರು. ಹಾಸ್ಟೆಲ್ ನ ಪರಿಸ್ಥಿತಿ ಕೂಡ ಹದಗೆಟ್ಟಿದೆ. ಇನ್ನೂ ಐವರು ವಿದ್ಯಾರ್ಥಿನಿಯರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಳೆದೆರಡು ವಾರಗಳಿಂದ ಇನ್ನೂ 15 ಮಂದಿ ಜ್ವರದಿಂದ ಬಳಲುತ್ತಿದ್ದಾರೆ ಎಂದು ದೂರಿದರು.
ಏಪ್ರಿಲ್ ನಿಂದ ನೀರಿಗೆ ಭಾರೀ ತೊಂದರೆಯಿದೆ. ಟ್ಯಾಂಕ್ ನ್ನು ಸ್ವಚ್ಛಗೊಳಿಸಿಲ್ಲ. ಹಾಸ್ಟೆಲ್ ಆವರಣ ಸುತ್ತಮುತ್ತ ಸ್ವಚ್ಛವಾಗಿಲ್ಲ. ಸೊಳ್ಳೆಗಳ ಕಾಟದಿಂದ ಬಸವಳಿದು ಹೋಗಿದ್ದೇವೆ ಎಂದು ವಿದ್ಯಾರ್ಥಿನಿಯರು ಆರೋಪಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com