ಬೆಂಗಳೂರು: ಮೇ 30ರಂದು ರಾಜ್ಯಾದ್ಯಂತ ಔಷಧ ಅಂಗಡಿಗಳು ಹಾಗೂ ಹೋಟೆಲ್ ಗಳನ್ನು ಬಂದ್ ಮಾಡಲು ಅಖಿಲ ಭಾರತ ಔಷಧ ವ್ಯಾಪಾರಿಗಳ ಸಂಘ ಮತ್ತು ಹೋಟೆಲ್ ಮಾಲೀಕರ ಸಂಘ ಕರೆ ನೀಡಿದ್ದು, ನಾಳೆ ಬೆಂಗಳೂರು ಸೇರಿದಂತೆ ಹಲವು ನಗರಗಳ ಹೋಟೆಲ್ ಗಳಲ್ಲಿ ಊಟ ಮತ್ತು ಔಷಧಿ ಎರಡೂ ದೊರೆಯುವುದಿಲ್ಲ.
ಆನ್ ಲೈನ್ ಮೂಲಕ ಔಷಧ ಮಾರಾಟ ವಿರೋಧಿಸಿ ಅಖಿಲ ಭಾರತ ಔಷಧ ವ್ಯಾಪಾರಿಗಳ ಸಂಘ ಕರೆ ನೀಡಿದರೆ, ಕೇಂದ್ರ ಸರ್ಕಾರದ ಬಹುನಿರೀಕ್ಷಿತ ಜಿಎಸ್ಟಿಯನ್ನು ವಿರೋಧೀಸಿ ಹೋಟೆಲ್ಗಳ ಸಂಘ ದಕ್ಷಿಣ ಭಾರತದಾದ್ಯಂತ ಬಂದ್‌ಗೆ ಕರೆ ನೀಡಿದೆ.
ಈ ಬಂದ್ ನಿಂದಾಗಿ ರಾಜ್ಯಾದ್ಯಂತ ಇರುವ ಸುಮಾರು 28 ಸಾವಿರ ಔಷಧ ಅಂಗಡಿಗಳು ಬಂದ್ ಆಗಲಿದ್ದು, ಬಂದ್‌ಗೆ ಬೃಹತ್ ಬೆಂಗಳೂರು ಕೆಮಿಸ್ಟ್ಸ್ಅಂಡ್ ಡ್ರಗ್ಗಿಸ್ಟ್ ಸಂಘ ಸಂಪೂರ್ಣ ಬೆಂಬಲ ನೀಡಿದೆ ಎಂದು ತಿಳಿದುಬಂದಿದೆ.
ಇನ್ನು ಬೆಂಗಳೂರು ನಗರ ಸೇರಿದಂತೆ ರಾಜ್ಯದ ಎಲ್ಲಾ ನಗರಗಳಲ್ಲಿ ನಾಳೆ ಒಂದು ಇಡೀ ದಿನ ಹೋಟೆಲ್‌ಗಳು ಬಾಗಿಲು ಹಾಕಿ ಬಂದ್‌ನಲ್ಲಿ ಪಾಲ್ಗೊಳ್ಳಲಿವೆ. ಹಾಗಾಗಿ ಊಟ, ತಿಂಡಿಗಳಿಗೆ ಹೋಟೆಲ್‌ಗಳನ್ನು ನೆಚ್ಚಿಕೊಂಡಿರುವವರು ಬೇರೆ ವ್ಯವಸ್ಥೆ ಮಾಡಿಕೊಳ್ಳಬೇಕು. ಇಲ್ಲದಿದ್ದರೇ ಹೊಟ್ಟೆ ತುಂಬಿಸಿಕೊಳ್ಳಲು ಪರದಾಡಬೇಕಾಗುತ್ತದೆ.
ನಾಳಿನ ಹೋಟೆಲ್ ಬಂದ್‌ಗೆ, ಬೇಕರಿ, ಸಿಹಿ ತಿಂಡಿ ಮಾರಾಟಗಾರರು ಬೆಂಬಲ ರೂಪಿಸಿದ್ದು, ನಾಳೆ ಇಡೀ ದಿನ ತಿನ್ನಲಿಕ್ಕೂ ಹೊರಗಡೆ ತಿಂಡಿ, ಊಟ ಸಿಗುವುದು ಕಷ್ಟ.
ಔಷಧ ವ್ಯಾಪಾರಿಗಳ ಹಿತರಕ್ಷಣೆಗಾಗಿ ಆನ್ ಲೈನ್ ಔಷಧ ಮಾರಾಟ ವಿರೋಧಿಸಿ ದೇಶಾದ್ಯಂತ ಮೇ 30ರಂದು ಒಂದು ದಿನದ ವ್ಯಾಪಾರ ವಹಿವಾಟು ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ಔಷಧ ವ್ಯಾಪಾರಿಗಳ ಸಂಘದ ಅಧ್ಯಕ್ಷ ಮಾಯಣ್ಣ ಅವರು ತಿಳಿಸಿದ್ದಾರೆ.
ಸಂಘದ ವತಿಯಿಂದ ಬೆಂಗಳೂರಿನ ಪುರಭವನದ ಆವರಣದಲ್ಲಿ ಬೆಳಗ್ಗೆ 10ರಿಂದ 1ರವರೆಗೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಅಂದು ಯಾವುದೇ ವ್ಯಾಪಾರ ವಹಿವಾಟು ಇರುವುದಿಲ್ಲ ಎಂದು ಅವರು ಹೇಳಿದ್ದಾರೆ.