ವರ್ತೂರು ಕೆರೆ ಸಮಸ್ಯೆಗೆ ಶೀಘ್ರ ಪರಿಹಾರ: ಸಿಎಂ ಸಿದ್ದರಾಮಯ್ಯ

ವರ್ತೂರು ಕೆರೆ ಸುತ್ತಮುತ್ತ ಮತ್ತೆ ನೊರೆ ಕಾಟದಿಂದಾಗಿ ಸಾರ್ವಜನಿಕರು ಹಾಗೂ ವಾಹನ ಸವಾರರ ಪರದಾಡುತ್ತಿದ್ದು, ಕಡೆಗೂ....
ರಸ್ತೆಗೆ ಬಂದ ವರ್ತೂರು ಕರೆಯ ನೊರೆ
ರಸ್ತೆಗೆ ಬಂದ ವರ್ತೂರು ಕರೆಯ ನೊರೆ
ನವದೆಹಲಿ: ವರ್ತೂರು ಕೆರೆ ಸುತ್ತಮುತ್ತ ಮತ್ತೆ ನೊರೆ ಕಾಟದಿಂದಾಗಿ ಸಾರ್ವಜನಿಕರು ಹಾಗೂ ವಾಹನ ಸವಾರರ ಪರದಾಡುತ್ತಿದ್ದು, ಕಡೆಗೂ ಎಚ್ಚೆತ್ತುಕೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶೀಘ್ರದಲ್ಲೇ ನೊರೆ ಸಮಸ್ಯೆ ಪರಿಹರಿಸುವುದಾಗಿ ಸೋಮವಾರ ಹೇಳಿದ್ದಾರೆ.
ಇಂದು ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಶೀಘ್ರದಲ್ಲೇ ವರ್ತೂರು ಕೆರೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗುವುದು. ಈ ಕುರಿತು ಸಂಬಂಧಪಟ್ಟ ಸಚಿವರು ಹಾಗೂ ಬಿಬಿಎಂಪಿ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದರು. ಅಲ್ಲದೆ ಬೆಳ್ಳಂದೂರು ಕೆರೆಯನ್ನು ಸ್ವಚ್ಛಗೊಳಿಸುವ ಕಾರ್ಯ ಈಗಾಗಲೇ ನಡೆಯುತ್ತಿದೆ ಎಂದರು.
ಸಿಲಿಕಾನ್ ಸಿಟಿಯಲ್ಲಿ ಕಳೆದ ಒಂದು ವಾರದಿಂದ ಸುರಿದ ಧಾರಾಕಾರ ಮಳೆಯಿಂದಾಗಿ ಬೆಂಗಳೂರಿನ ತಗ್ಗು ಪ್ರದೇಶ, ಕೊಳಗೇರಿ ಪ್ರದೇಶಗಳು ನೀರಿನಿಂದ ಆವೃತ್ತವಾಗಿದ್ದು, ನೂರಾರು ಮರಗಳು ಧರಾಶಾಹಿಯಾಗಿದ್ದವು.  ಅಷ್ಟೇ ಅಲ್ಲ ಬೆಳ್ಳಂದೂರು ಕೆರೆಯಲ್ಲಿ ಕಾಣಿಸಿಕೊಂಡಿದ್ದ ನೊರೆ ಸಮಸ್ಯೆ ಈಗ ವರ್ತೂರು ಕೆರೆಯಲ್ಲೂ ಕಾಣಿಸಿಕೊಂಡಿರುವುದು ಜನರ ಆತಂಕಕ್ಕೆ ಕಾರಣವಾಗಿದೆ.
ಶನಿವಾರ, ಭಾನುವಾರದಿಂದ ವರ್ತೂರು ಕೆರೆಯಿಂದ ರಾಶಿ, ರಾಶಿ ವಿಷಕಾರಿ ರಾಸಾಯನಿಕ ನೊರೆ ದೊಡ್ಡ ಪ್ರಮಾಣದಲ್ಲಿ ವೈಟ್ ಫೀಲ್ಡ್  ಮುಖ್ಯರಸ್ತೆ ಮೇಲೆ ಹಾರಿ ಬರುತ್ತಿದೆ. ಇದರಿಂದಾಗಿ ವಾಹನ ಸವಾರರು, ಪ್ರಯಾಣಿಕರಿಗೆ ತೊಂದರೆಯಾಗುತ್ತಿರುವುದಾಗಿ ಮಾಧ್ಯಮಗಳು ವರದಿ ಮಾಡಿದ್ದವು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com