ಲಿಂಗಾಯತ ಧರ್ಮಕ್ಕೆ ಸಾಂವಿಧಾನಿಕ ಮಾನ್ಯತೆಗೆ ಆಗ್ರಹಿಸಿ ಹುಬ್ಬಳ್ಳಿಯಲ್ಲಿ ನಡೆದ ಲಿಂಗಾಯತರ ಬೃಹತ್ ಸಮಾವೇಶ' ಅಖಿಲ ಭಾರತ ವೀರಶೈವ ಮಹಾಸಭೆ ಮತ್ತು ಈ ಹೋರಾಟದಿಂದ ಹೊರಗಿರುವ ಲಿಂಗಾಯತ ಮುಖಂಡರು, ವಿರಕ್ತ ಮಠಾಧೀಶರನ್ನು ತೀವ್ರ ತರಾಟೆಗೆ ತೆಗೆದುಕೊಂಡಿತು.
ಸದ್ಯದಲ್ಲಿ ಬೆಂಗಳೂರಿನಲ್ಲಿ ನಡೆಯಲಿರುವ ಸಮಾವೇಶಕ್ಕೂ ಮೊದಲು ಲಿಂಗಾಯತರ ಹೋರಾಟಕ್ಕೆ ಬೆಂಬಲ ನೀಡುವಂತೆ ಸಮಾವೇಶದ ಮೂಲಕ ಖಡಕ್ ಎಚ್ಚರಿಕೆಯನ್ನೂ ರವಾನಿಸಿದೆ.
ಸಮಾವೇಶದಲ್ಲಿ ಲಿಂಗಾಯತಕ್ಕೆ ಪ್ರತ್ಯೇಕ ಧರ್ಮದ ಸ್ಥಾನಮಾನ ನೀಡುವಂತೆ ರಾಷ್ಟ್ರಪತಿ ಕೋವಿಂದ್ ಹಾಗೂ ಪ್ರಧಾನಮಮಂತ್ರಿ ನರೇಂದ್ರ ಮೋದಿಯವರನ್ನು ಆಗ್ರಹಿಸುವ ಏಕಸಾಲಿನ ನಿರ್ಣಯವನ್ನೂ ಸಮಾವೇಶದಲ್ಲಿ ತೆಗೆದುಕೊಳ್ಳಲಾಯಿತು.
ಹುಬ್ಬಳ್ಳಿಯ ನೆಹರೂ ಮೈದಾನದಲ್ಲಿ ನಡೆದ ಈ ಸಮಾವೇಶಕ್ಕೆ ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಅಪಾರ ಸಂಖ್ಯೆಯಲ್ಲಿ ಲಿಂಗಾಯಕರು ಭಾಗವಹಿಸಿದ್ದರು. ಚಿತ್ರದುರ್ಗ, ಗದಗ, ಬೆಳಗಾವಿ, ಕೂಡಲ ಸಂಗಮ ಸೇರಿ 50ಕ್ಕೂ ಹೆಚ್ಚು ಮಠಾಧೀಶರು, ಕಾಂಗ್ರೆಸ್ ಮತ್ತು ಜೆಡಿಎಸ್ ಗುರ್ತಿಸಿಕೊಂಡಿರುವ ನಾಯಕರು ಹಾಜರಿದ್ದರು.
ಡಿಸೆಂಬರ್ ಅಂತ್ಯ ಅಥವಾ ಜನವರಿ ತಿಂಗಳಿನಲ್ಲಿ ಬೆಂಗಳೂರಿನಲ್ಲಿ ಕೊನೆ ಸಮಾವೇಶವನ್ನು ಆಯೋಜಿಸಲಾಗಿದ್ದು, ಅಷ್ಟರೊಳಗಾಗಿ ಲಿಂಗಾಯತ ಹೋರಾಟಕ್ಕೆ ಬೆಂಬಲಿಸದಿದ್ದರೆ, ಪ್ರತ್ಯೇಕ ಅಖಿಲ ಭಾರತ ಲಿಂಗಾಯತ ಮಹಾಸಭಾ ಅಸ್ತಿತ್ವಕ್ಕೆ ಬರಲಿದೆ ಎಂದು ಅಖಿಲ ಭಾರತ ವೀರಶೈವ ಮಹಾಸಭೆಗೆ ಗಡುವು ನೀಡಿದರು. ಅಲ್ಲದೆ, ಸಮಾವೇಶದಲ್ಲಿ ಹಾಜರಿದ್ದ ಸಚಿವರಿಗೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುವಂತೆಯೂ ಒತ್ತಾಯಿಸಿದರು.
ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರ ಕುರಿತ ಶಿಫಾರಸ್ಸುಗಳನ್ನು ತಡ ಮಾಡದೆ ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ರವಾನಿಸಬೇಕು. ವಿಧಾನಸಭೆ ಚುನಾವಣೆ ಘೋಷಣೆಗೂ ಮುನ್ನ ಶಿಫಾರಸ್ಸುಗಳನ್ನು ರವಾನಿಸಬೇಕೆಂದು ಆಗ್ರಹಿಸಿದ್ದಾರೆ.
ಸಚಿವ ಎಂ.ಬಿ ಪಾಟೀಲ್ ಮಾತನಾಡಿ, ಪ್ರತ್ಯೇಕ ಧರ್ಮ ಕುರಿತ ಹೋರಾಟಗಳು ಹೊಸದೇನಲ್ಲ ಎಂದಿದ್ದಾರೆ. ಇದೇ ವೇಳೆ ಆರ್'ಎಸ್ಎಸ್ ನಾಯಕ ಎಸ್.ರಾಮಣ್ಣ ಅವರ ಹೇಳಿಕೆಯನ್ನು ಪ್ರಸ್ತಾಪಿಸಿರುವ ಅವರು, ಲಿಂಗಾಯತರನ್ನು ಶನಿ ಸಂತಾನ ಎಂದು ಹೇಳಿದ್ದಾರೆ. ಲಿಂಗಾಯಕರು ಶನಿ ಸಂತಾನರಲ್ಲ. ಶರಣರ ಸಂತಾನರು, ಲಿಂಗಾಯರ ಬಗ್ಗೆ ಇಷ್ಟೆಲ್ಲಾ ಹೇಳಿಕೆ ನೀಡುತ್ತಿದ್ದರು ಆರ್ಎಸ್ಎಸ್ ನಲ್ಲಿರುವ ಲಿಂಗಾಯತರಿಗೆ ಸ್ವಾಭಿಮಾನವೇ ಇಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಸಚಿವ ವಿನಯ್ ಕುಲಕರ್ಣಿ ಮಾತನಾಡಿ, ಲಿಂಗಾಯತರು ಜಂಗಮರ ವಿರುದ್ಧವಿಲ್ಲ. ವಿರಕ್ತ ಮಠದ ಸ್ವಾಮೀಜಿಗಳು ನಮ್ಮೊಂದಿಗೆ ಕೈಜೋಡಿಸಬೇಕೆಂದು ಹೇಳಿದ್ದಾರೆ.