ಬಿಜೆಪಿಗೆ ಸೇರ್ಪಡೆಗೊಳ್ಳುವಂತೆ ಡಿ.ಕೆ.ಶಿವಕುಮಾರ್'ಗೆ ಐಟಿಯವರೇ ಹೇಳಿದ್ರು: ಸಿಎಂ ಸಿದ್ದರಾಮಯ್ಯ

ಇತ್ತೀಚೆಗಷ್ಟೆ ರಾಜ್ಯದ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಅವರ ನಿವಾಸದ ಮೇಲೆ ದಾಳಿ ನಡೆಸಿದ್ದ ಆದಾಯ ಮತ್ತು ತೆರಿಗೆ ಇಲಾಖೆಯ ಅಧಿಕಾರಿಗಳು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಳ್ಳುವಂತೆ ಡಿ.ಕೆ. ಶಿವಕುಮಾರ್ ಅವರನ್ನು ಕೇಳಿದ್ದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ...
ಮುಖ್ಯಮಂತ್ರಿ ಸಿದ್ದರಾಮಯ್ಯ
ಮುಖ್ಯಮಂತ್ರಿ ಸಿದ್ದರಾಮಯ್ಯ
ಬೆಂಗಳೂರು: ಇತ್ತೀಚೆಗಷ್ಟೆ ರಾಜ್ಯದ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಅವರ ನಿವಾಸದ ಮೇಲೆ ದಾಳಿ ನಡೆಸಿದ್ದ ಆದಾಯ ಮತ್ತು ತೆರಿಗೆ ಇಲಾಖೆಯ ಅಧಿಕಾರಿಗಳು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಳ್ಳುವಂತೆ ಡಿ.ಕೆ. ಶಿವಕುಮಾರ್ ಅವರನ್ನು ಕೇಳಿದ್ದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ಹೇಳಿದ್ದಾರೆ. 
ಕೇಂದ್ರ ಸರ್ಕಾರದ ನೋಟು ನಿಷೇಧ ನಿರ್ಧಾರಕ್ಕೆ ಒಂದು ವರ್ಷ ಪೂರ್ಣಗೊಂಡ ಹಿನ್ನಲೆಯಲ್ಲಿ ಕೆಪಿಸಿಸಿ ಬುಧವಾರ ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿ ಆಯೋಜಿಸಿದ್ದ 'ಭಾರತ ನರಳುತ್ತಿದೆ' ಕರಾಳ ದಿನಾಚರಣೆಯಲ್ಲಿ ಮಾತನಾಡಿರುವ ಅವರು, ಸಚಿವ ಡಿ.ಕೆ. ಶಿವಕುಮಾರ್ ಅವರಿಗೆ ಬಿಜೆಪಿಗೆ ಪಕ್ಷಕ್ಕೆ ಸೇರ್ಪಡೆಗೊಳ್ಳುವಂತೆ ದಾಳಿ ಸಂದರ್ಭದಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳೇ ಹೇಳಿದ್ದರು ಎಂದು ಹೇಳಿದ್ದಾರೆ. 
ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರ ನಿವಾಸದ ಮೇಲೆ ದಾಳಿ ನಡೆಸಿದ್ದ ಐಟಿ ಅಧಿಕಾರಿಗಳು ದಾಳಿಯಿಂದ ತಪ್ಪಿಸಿಕೊಳ್ಳಲು ಬಿಜೆಪಿ ಸೇರಿ ಎಂದು ನೇರವಾಗಿಯೇ ಹೇಳಿದ್ದರಂತೆ. ಅಧಿಕಾರಿಗಳ ಮಟ್ಟದಲ್ಲಿ ಕೇಸರೀಕರಣ ಯಾವ ಮಟ್ಟಕ್ಕೆ ಆಗುತ್ತಿದೆ ಎಂಬುದನ್ನು ಇದರಿಂದ ಅರ್ಥಮಾಡಿಕೊಳ್ಳಬೇಕೆಂದು ತಿಳಿಸಿದ್ದಾರೆ. 
ಇದೇ ವೇಳೆ ಕೇಂದ್ರ ಮೋದಿ ಸರ್ಕಾರದ ವಿರುದ್ಧ ಗುಡುಗಿರುವ ಅವರು, ದುಬಾರಿ ಮೌಲ್ಯದ ನೋಟುಗಳ ಅಮಾನ್ಯೀಕರಣವು ಕಪ್ಪುಹಣವನ್ನು ಬಿಳಿ ಮಾಡಲು ಕಾನೂನಾತ್ಮಕವಾಗಿಯೇ ಮಾಡಿದ ವ್ಯವಸ್ಥಿತ ಹುನ್ನಾರ. ಕಪ್ಪುಹಣ, ಭ್ರಷ್ಟಾಚಾರ, ಭಯೋತ್ಪಾದನೆಗೆ ಕಡಿವಾಣದ ಹೆಸರಿನಲ್ಲಿ ನೋಟು ಅಮಾನ್ಯ ಮಾಡಿ ದೇಶದ್ರೋಹ ಮಾಡಲಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ. 

ಕಳೆದ ವರ್ಷದ ನ.8 ರಂದು ರಾತ್ರೋರಾತ್ರಿ ರೂ.500 ಹಾಗೂ 1000 ಮುಖಬೆಲೆಯ ನೋಟುಗಳ ಮೇಲೆನಿಷೇಧ ಹೇಲಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು, ಕಪ್ಪುಹಣ, ಭ್ರಷ್ಟಾಚಾರ, ಭಯೋತ್ಪಾದನೆ, ನಕಲಿ ನೋಟುಗಳಿಗೆ ಕಡಿವಾಣ ಹಾಕಲು ನೋಟುಗಳನ್ನು ನಿಷೇಧ ಮಾಡಿರುವುದಾಗಿ ಹೇಳಿದ್ದರು. ಆದರೆ, ಇದೀಗ ಅವರ ಹೇಳಿಕೆ ಸುಳ್ಳು ಎಂಬುದು ಜಗಜ್ಜಾಹೀರಾಗಿದೆ. ನೋಟು ನಿಷೇಧ ಎಂಬುದು ಕಪ್ಪುಹಣ ಹೊಂದಿದ್ದವರಿಗೆ ಕಾನೂನಾತ್ಮಕವಾಗಿಯೇ ಬಿಳಿಹಣವಾಗಿಸಿಕೊಳ್ಳಲು ಮಾಡಿಕೊಟ್ಟ ವ್ಯವಸ್ಥಿತ ಹುನ್ನಾರ ಎಂದು ಆರೋಪಿಸಿದರು. 

ಬಿಜೆಪಿ ಐಟಿ ಇಲಾಖೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಇಂಧನ ಸಚಿವ ಡಿ.ಕೆ. ಶಿವಕುಮಾರ್ ಅವರ ನಿವಾಸದ ಮೇಲೆ ದಾಳಿ ಮಾಡಿದ್ದ ಐಟಿ ಅಧಿಕಾರಿಗಳು ನೇರವಾಗಿಯೇ ಸಚಿವರನ್ನು ದಾಳಿಯಿಂದ ತಪ್ಪಿಸಿಕೊಳ್ಳಬೇಕಾದರೆ, ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಳ್ಳಿ ಎಂದು ಕೇಳಿದ್ದರಂತೆ. ದಾಳಿ ಬಳಿಕ ಡಿಕೆಶಿ ಅವರನ್ನು 7 ಬಾರಿ ವಿಚಾರಣೆ ನಡೆಸಲಾಗಿದೆ. ಡಿ.ಕೆ. ಶಿವಕುಮಾರ್ ಅವರ ತಾಯಿಯವರನ್ನು ವಿಚಾರಣೆಗೊಳಪಡಿಸಲಾಗಿದೆ. ಆದರೂ, ಡಿ.ಕೆ.ಶಿವಕುಮಾರ್ ಅವರು ಮೋದಿ ಸರ್ಕಾರದ ವಿರುದ್ಧ ಯಾವುದೇ ರೀತಿಯ ಹೇಳಿಕೆಗಳನ್ನು ನೀಡಿಲ್ಲ ಎಂದು ತಿಳಿಸಿದ್ದಾರೆ. 

ಬಳಿಕ ಜೆಡಿಎಸ್ ನಾಯಕ ಹೆಚ್.ಡಿ. ಕುಮಾರಸ್ವಾಮಿಯವರ ವಿರುದ್ಧ ವಾಗ್ದಾಳಿ ನಡೆಸಿರುವ ಅವರು, ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ತಮ್ಮದೇ ತಮ್ಮದೇ ಹಾಸಿಗೆ ಹಾಗೂ ತಲೆದಿಂಬನ್ನು ತೆಗೆದುಕೊಂಡು ಹೋಗಿ ಹಳ್ಳಿ ವಾಸ್ತವ್ಯ ಎಂದು ಹೇಳುತ್ತಿದ್ದರು. ರಾತ್ರಿ 2 ಗಂಟೆಗೆ ಹಾಸಿಗೆ, ದಿಂಬು, ಕಮೋಡ್ ತೆಗೆದುಕೊಂಡು ಹೋಗಿ ಉಳಿಯುತ್ತಿದ್ದರು. ಮಾರನೇ ದಿನ ಈ ಸಾಮಾಗ್ರಿಗಳನ್ನು ವಾಪಸ್ ಕೊಂಡೊಯ್ಯಲಾಗುತ್ತಿತ್ತು. ಕಡೆಪಕ್ಷ ಹಾಸಿಗೆ, ದಿಂಬನ್ನಾದರೂ ಬಿಟ್ಟು ಹೋಗಬಹುದಿತ್ತಲ್ಲವಾ ಎಂದು ವ್ಯಂಗ್ಯವಾಡಿದ್ದಾರೆ. 

ಹಾಸಿಗೆ, ದಿಂಬು, ಶೌಚಾಲಯಗಳನ್ನು ತಮ್ಮದೊಂದಿಗೆ ತೆಗೆದುಕೊಂಡು ಹೋಗಿ ಅದು ಹಳ್ಳಿ ವಾಸ್ತವ್ಯ ಎಂದು ಹೇಗೆ ಹೇಳುತ್ತಾರೆ ಎಂದು ಪ್ರಶ್ನಿಸಿದ್ದಾರೆ. 

ಬಳಿಕ ರಾಜ್ಯದಲ್ಲಿ ಬಿಜೆಪಿ ನಡೆಸುತ್ತಿರುವ ಪರಿವರ್ತನಾ ರ್ಯಾಲಿ ವಿರುದ್ಧ ಟೀಕಾ ಪ್ರಹಾರ ನಡೆಸಿರುವ ಅವರು, ಸಿದ್ದರಾಮಯ್ಯ ಸರ್ಕಾರದಂತಹ ಭ್ರಷ್ಟ ಸರ್ಕಾರ ದೇಶದಲ್ಲೇ ಇಲ್ಲ ಎಂದು ಇತ್ತೀಚಿನ ಪರಿವರ್ತನಾ ರ್ಯಾಲಿಯಲ್ಲಿ ಬಿಡೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಮತ್ತು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಹೇಳುತ್ತಾರೆ. ಇಬ್ಬರೂ ನಾಯಕರಿಗೂ ನಾಚಿಕೆಯಾಗಬೇಕು. ಭ್ರಷ್ಟಾಚಾರ ನಡೆಸಿ ಜೈಲಿಗೆ ಹೋಗಿ ಬಂದ ಅವರಿಬ್ಬರಿಗೂ ಮಾನ ಮರ್ಯಾದೆ ಇದ್ದರೆ ಸಾರ್ವಜನಿಕವಾಗಿ ತಲೆಯೆತ್ತಿಕೊಂಡು ತಿರುಗಾಡಲೇಬಾರದು. ಇಂತಹವರು ನಮಗೆ ಪಾಠ ಮಾಡರು ಬರುತ್ತಿದ್ದಾರೆಂದು ಹೇಳಿದ್ದಾರೆ. 

ಪರಿವರ್ತನಾ ಯಾತ್ರೆಗೆ ಹಣ, ಸೀರೆಕೊಟ್ಟು ಜನರನ್ನು ಕರೆತರುತ್ತಿದ್ದಾರಂತೆ. ಬಿಡೆಪಿಯ ಮಾಜಿ ಸಚಿವ ಸೊಗಡು ಶಿವಣ್ಣ ಅವರೇ ಈ ಗುಟ್ಟನ್ನು ಬಹಿರಂಗ ಮಾಡಿದ್ದಾರೆ. ಹಾಸನದ ಚೆನ್ನರಾಯಪಟ್ಟಣದಲ್ಲೂ ಸೀರೆ ಹಂಚಿದ್ದಾರಂತ. ಆದರೂ 2-3 ಸಾವಿರ ಜನ ರ್ಯಾಲಿಯಲ್ಲಿ ಸೇರ್ತಾರೆ. ಬಿಜೆಪಿಯಲ್ಲಿ ಯಡಿಯೂರಪ್ಪ ಪರವಾಗಿ ಇರೋದು ಇಬ್ಬರೇ... ಅದು ಶೋಬಾ ಕರಂದ್ಲಾಜೆ, ಪುಟ್ಟಸ್ವಾಮಿಯಷ್ಟೇ ಎಂದರು. 

ನಂತರ ಮಾತನಾಡಿರುವ ಕೆಪಿಸಿಸಿ ಅಧ್ಯಕ್ಷ ಡಿ. ಪರಮೇಶ್ವರ್ ಅವರು, ಕೆಲ ದಿನಗಳ ಹಿಂದಷ್ಟೇ ಸಿ.ಟಿ. ರವಿಯವರು ಪರಮೇಶ್ವರ ಅವರು ಬಿಜೆಪಿಗೆ ಸೇರ್ಪಡೆಗೊಳ್ಳುತ್ತಾರೆಂದು ಹೇಳಿದ್ದಾರೆ. ಹೇಳಿಕೆ ಸಂಬಂಧ ದಿನಗಳ ಹಿಂದಷ್ಟೇ ರವಿಯವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದೆ. ಈ ವೇಳೆ ರವಿಯವರು ತುಮಕೂರಿನಲ್ಲಿ ರ್ಯಾಲಿಯಲ್ಲಿ ಭಾಗಿಯಾಗಿದ್ದ ಸಂದರ್ಭದಲ್ಲಿ ಮಾತನಾಡುವುದಕ್ಕೆ ಬೇರಾವುದೇ ವಿಷಯ ಇರಲಿಲ್ಲ. ಅದಕ್ಕೆ ನಿಮ್ಮ ವಿಷಯ ಮಾತನಾಡಿದೆ ಎಂದರು. ನನ್ನ ರಕ್ತದಲ್ಲಿಯೇ ಕಾಂಗ್ರೆಸ್ ಇದ್ದು, ಬಿಜೆಪಿಗೆ ನನ್ನನ್ನು ಕರೆಯುವ ಮಾತುಗಳನ್ನು ಆಡಬೇಕಿ. ಪರಮೇಶ್ವರ್ ವಿಚಾರ ಮಾತನಾಡುವುಗಾ ಎಚ್ಚರಿಕೆಯಿಂದ ಇರಿ. ಸಿಟಿ ರವಿಯವರನ್ನೂ ನಾನು ಕಾಂಗ್ರೆಸ್ ಗೆ ಕರೆಯುವುದಿಲ್ಲ. ಅವರು ಅಲ್ಲೇ ಇರಬೇಕು, ಅಲ್ಲೇ ಸಾಯಬೇಕು ಎಂದು ತಿಳಿಸಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com