ಕೆಪಿಎಂಇ ಕಾಯ್ದೆ ತಿದ್ದುಪಡಿಗೆ ವಿರೋಧ: ರಾಜ್ಯದ 8,000 ಖಾಸಗಿ ಆಸ್ಪತ್ರೆಗಳು ಬಂದ್

ಕೆಪಿಎಂಇ ತಿದ್ದುಪಡಿ ಮಸೂದೆ ಜಾರಿ ವಿರೋಧಿಸಿ ನ.13ರಂದು ಸುವರ್ಣ ವಿಧಾನಸೌಧದ ಮುಂದೆ ಭಾರತೀಯ ವೈದ್ಯಕೀಯ ಸಂಘದ (ಐಎಂಎ) ನೇತೃತ್ವದಲ್ಲಿ ರಾಜ್ಯದ ಖಾಸಗಿ ವೈದ್ಯರು ಬೃಹತ್ ಪ್ರತಿಭಟನೆ ನಡೆಸುತ್ತಿದ್ದು...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೆಂಗಳೂರು; ಕೆಪಿಎಂಇ ತಿದ್ದುಪಡಿ ಮಸೂದೆ ಜಾರಿ ವಿರೋಧಿಸಿ ನ.13ರಂದು ಸುವರ್ಣ ವಿಧಾನಸೌಧದ ಮುಂದೆ ಭಾರತೀಯ ವೈದ್ಯಕೀಯ ಸಂಘದ (ಐಎಂಎ) ನೇತೃತ್ವದಲ್ಲಿ ರಾಜ್ಯದ ಖಾಸಗಿ ವೈದ್ಯರು ಬೃಹತ್ ಪ್ರತಿಭಟನೆ ನಡೆಸುತ್ತಿದ್ದು, ಪ್ರತಿಭಟನೆ ಹಿನ್ನಲೆಯಲ್ಲಿ ರಾಜ್ಯದ ಎಲ್ಲಾ ಕ್ಲಿನಿಕ್ ಗಳು ಸೇರಿದಂದೆ ಒಟ್ಟು 8,000 ಖಾಸಗಿ ಆಸ್ಪತ್ರೆಗಳು ಬಂದ್ ಗೆ ಬೆಂಬಲ ನೀಡುತ್ತಿವೆ ಎಂದು ಸೋಮವಾರ ತಿಳಿದುಬಂದಿದೆ. 
ಚಿಕಿತ್ಸೆ ವಿಫಲವಾದ ಸಂದರ್ಭಗಳಲ್ಲಿ ಜೈಲು ಶಿಕ್ಷೆ ಹಾಗೂ ಇತರೆ ಅಂಶಗಳನ್ನು ಒಳಗೊಂಡಿರುವ ಕೆಪಿಎಂಇ ತಿದ್ದುಪಡಿ ಕಾಯ್ದೆಯಿಂದ ವೈದ್ಯ ಸಮೂಹದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಪ್ರಸ್ತುತ ಅಧಿವೇಶನದಲ್ಲಿ ಇಂಥಹ ಕರಾಳ ಕಾಯ್ದೆ ಜಾರಿಗೆ ಮುಂದಾಗಿರುವ ಸರ್ಕಾರದ ಕ್ರಮ ಖಂಡನೀಯ ಎಂದರು ವೈದ್ಯರು ಹೇಳಿದ್ದಾರೆ. 
ಭಾರತೀಯ ವೈದ್ಯಕೀಯ ಸಂಘ ನೀಡಿರುವ ಪ್ರತಿಭಟನೆ ಕರೆಗೆ ರಾಜ್ಯದ ಎಲ್ಲೆಡೆಯಿಂದ ವೈದ್ಯರು ಹೋರಾಟದಲ್ಲಿ ಭಾಗವಹಿಸುತ್ತಿದ್ದು, ವೈದ್ಯರ ಆಗ್ರಹಗಳಿಗೆ ಸರ್ಕಾರ ಸ್ಪಂದನೆ ನೀಡದಿದ್ದರೆ ಆಮರಣ ಉಪವಾಸ ಧರಣಿ ನಡೆಸಲಾಗುತ್ತದೆ ಎಂದು ವೈದ್ಯರು ಸರ್ಕಾರಕ್ಕೆ ಎಚ್ಚರಿಸಿದ್ದಾರೆ. 
ಪ್ರತಿಭಟನೆ ಕುರಿತಂತೆ ಮಾತನಾಡಿರುವ ಐಎಂಎ ಕರ್ನಾಟಕ ಅಧ್ಯಕ್ಷ ಡಾ.ರಾಜಶೇಖರ್ ಅವರು, ಸಂಘದ ವತಿಯಿಂದ ಸಂಪೂರ್ಣ ಬಂದ್'ಗೆ ಕರೆ ನೀಡಲಾಗಿದೆ. ರಾಜ್ಯದಲ್ಲಿರುವ ಎಲ್ಲಾ ಕ್ಲಿನಿಕ್ ಗಳು, ನರ್ಸಿಂಗ್ ಹೋಂಗಳು ಹಾಗೂ ಖಾಸಗಿ ಆಸ್ಪತ್ರೆಗಳು ಸೇರಿದಂತೆ ಒಟ್ಟು 8,000 ಆಸ್ಪತ್ರೆಗಳು ಬಂದ್'ಗೆ ಬೆಂಬಲವನ್ನು ಸೂಚಿಸಿದೆ. ಎಂದಿನಂತೆ ತುರ್ತು ಚಿಕಿತ್ಸಾ ಸೇವೆ, ಶಸ್ತ್ರಚಿಕಿತ್ಸೆಗಳು ಮುಂದುವರೆಯಲಿದೆ. ತುರ್ತು ಸೇವೆಗಳನ್ನು ಸರ್ಕಾರಿ ಆಸ್ಪತ್ರೆಗಳು ನೋಡಿಕೊಳ್ಳುತ್ತಿದ್ದು, ರೋಗಿಗಳ ಶಸ್ತ್ರಚಿಕಿತ್ಸಾ ದಿನವನ್ನು ಮುಂದೂಡಲಾಗಿದೆ ಎಂದು ಹೇಳಿದ್ದಾರೆ. 
ಎಪಿಎಹ್ಐ ಅಧ್ಯಕ್ಷ ಡಾ.ಅಜಯ್ ಕುಮಾರ್ ಅವರು ಮಾತನಾಡಿ, ಕೆಪಿಎಂಇ ತಿದ್ದುಪಡಿ ಕಾಯ್ದೆ ಕುರಿತಂತೆ ಚರ್ಚೆ ನಡೆಸಲು ವೈದ್ಯರ ತಂಡ ಈಗಾಗಲೇ ಬೆಳಗಾವಿ ತಲುಪಿದೆ. ತುರ್ತು ಸೇವೆಗಳಿಗೆ ಕಿರಿಯ ವೈದ್ಯರು ಆಸ್ಪತ್ರೆಗಳಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆ. ವೈದ್ಯ ಸಂಘಟನೆ ಪ್ರತಿಭಟನೆ ನಡೆಸುತ್ತಿದ್ದರೂ, ಸರ್ಕಾರ ಮಾತ್ರ ನಮ್ಮನ್ನು ಸಂಪರ್ಕಿಸುವ ಪ್ರಯತ್ನವನ್ನು ಮಾತ್ರ ಮಾಡುತ್ತಿಲ್ಲ. ವೈದ್ಯರ ಬಗ್ಗೆ ರಾಜಕೀಯ ಗಣ್ಯರು ಕೀಳುಮಟ್ಟದಲ್ಲಿ ಚಿಂತನೆ ನಡೆಸುತ್ತಿದ್ದಾರೆ. ಉತ್ತಮ ಗುಣಮಟ್ಟದ ಚಿಕಿತ್ಸೆ ನೀಡುತ್ತಿರುವುದಕ್ಕಾಗಿ ನಮ್ಮ ಮೇಲೆ ಅನಗತ್ಯವಾಗಿ ದಾಳಿ ನಡೆಸಲಾಗುತ್ತಿದೆ. ಚುನಾವಣೆ ಹತ್ತಿರ ಬರುತ್ತಿರುವ ಹಿನ್ನಲೆಯಲ್ಲಿ ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಈ ರೀತಿ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ. 
ಮಣಿಪಾಲ್ ಆಸ್ಪತ್ರೆಗಳ ಮುಖ್ಯಸ್ಥ ಡಾ.ಹೆಚ್. ಸುದರ್ಶನ್ ಬಲ್ಲಾಳ್ ಅವರು ಮಾತನಾಡಿ, ಸಾಕಷ್ಟು ವೈದ್ಯರು ಬೆಳಗಾವಿಗೆ ಹೋಗಿದ್ದಾರೆ. ನಗರದಲ್ಲಿರುವ ಖಾಸಗಿ ಆಸ್ಪತ್ರೆಗಳಲ್ಲಿ ತುರ್ತು ಚಿಕಿತ್ಸೆಗಳನ್ನು ನೀಡಲು ಈಗಾಗಲೇ ಪ್ರತ್ಯೇಕ ವ್ಯವಸ್ಥೆಯನ್ನು ಮಾಡಲಾಗಿದೆ. ನಮ್ಮ ಒಗ್ಗಟ್ಟನ್ನು ನಾವು ಪ್ರದರ್ಶಿಸಿದ್ದೇವೆ. ಇಂದು ನಡೆಯಲಿರುವ ಚರ್ಚೆ ಬಳಿಕ ನಾವು ಮುಂದಿನ ನಡೆ ಕುರಿತು ತೀರ್ಮಾನ ಕೈಗೊಳ್ಳಲಿದ್ದೇವೆ.
ಪ್ರತಿಭಟನೆ ಕುರಿತಂತೆ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲೂ ಸಾಕಷ್ಟು ಪೋಸ್ಟ್ ಗಳು ಹರಿದಾಡುತ್ತಿವೆ. ಸರ್ಕಾರ ನಮ್ಮೊಂದಿಗೆ ಮಾತುಕತೆ ನಡೆಸಲು ವಿಫಲವಾಗಿದ್ದೇ ಆದರೆ, ನಾವು ಉಪವಾಸ ಸತ್ಯಾಗ್ರಹ ಮಾಡುತ್ತೇವೆಂದು ತಿಳಿಸಲಾಗಿದೆ ಎಂದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com