ವಿವಾದಿತ ಕೆಪಿಎಂಇ ತಿದ್ದುಪಡಿ ಮಸೂದೆ ಬದಲಾವಣೆಗೆ ಮುಂದಾದ ಸಿಎಂ ಸಿದ್ದರಾಮಯ್ಯ

ಖಾಸಗಿ ಆಸ್ಪತ್ರೆಗಳ ಮೇಲೆ ನಿಯಂತ್ರಣ ಹೇರಲು ಉದ್ದೇಶಿಸಿರುವ ಕೆಪಿಎಂಇ ಮಸೂದೆಗೆ ವೈದ್ಯಕೀಯ ಸಂಘಗಳು ತೀವ್ರ ವಿರೋಧಗಳನ್ನು ವ್ಯಕ್ತಪಡಿಸುತ್ತಿರುವ ಹಿನ್ನಲೆಯಲ್ಲಿ ತಿದ್ದುಪಡಿಯಾಗಿರುವ ಮಸೂದೆಗೆ ಬದಲಾವಣೆ ತರಲು ಮುಖ್ಯಮಂತ್ರಿ ಸಿದ್ದರಾಮಯ್ಯ...
ಮುಖ್ಯಮಂತ್ರಿ ಸಿದ್ದರಾಮಯ್ಯ
ಮುಖ್ಯಮಂತ್ರಿ ಸಿದ್ದರಾಮಯ್ಯ
ಬೆಂಗಳೂರು: ಖಾಸಗಿ ಆಸ್ಪತ್ರೆಗಳ ಮೇಲೆ ನಿಯಂತ್ರಣ ಹೇರಲು ಉದ್ದೇಶಿಸಿರುವ ಕೆಪಿಎಂಇ ಮಸೂದೆಗೆ ವೈದ್ಯಕೀಯ ಸಂಘಗಳು ತೀವ್ರ ವಿರೋಧಗಳನ್ನು ವ್ಯಕ್ತಪಡಿಸುತ್ತಿರುವ ಹಿನ್ನಲೆಯಲ್ಲಿ ತಿದ್ದುಪಡಿಯಾಗಿರುವ ಮಸೂದೆಗೆ ಬದಲಾವಣೆ ತರಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಂದಾಗಿದ್ದಾರೆಂದು ಬುಧವಾರ ತಿಳಿದುಬಂದಿದೆ. 
ವಿಧೇಯಕ ಕುರಿತ ವಿಧಾನಮಂಡಲ ಜಂಟಿ ಪರಿಶೀಲನಾ ಸಮಿತಿ ಮಂಗಳವಾರ ತನ್ನ ವರದಿಯನ್ನು ಮಂಡಿಸಿದ್ದು, ಅದರಲ್ಲಿ ತಪ್ಪಿತಸ್ಥ ವೈದ್ಯಕೀಯ ಸಂಸ್ಥೆಗಳ ಮಾಲೀಕರಿಗೆ ಜೈಲು ಶಿಕ್ಷೆ ವಿಧಿಸುವ ಬಗ್ಗೆ ಪ್ರಸ್ತಾಪವನ್ನು ಕೈಬಿಟ್ಟು, ತಪ್ಪಿತಸ್ಥರಿಗೆ ದಂಡ ವಿಧಿಸುವ ನಿಯಮವನ್ನು ಹಾಗೆಯೇ ಉಳಿಸಿಕೊಂಡಿದೆ ಎಂದು ವರದಿಗಳು ತಿಳಿಸಿವೆ. 
ಇದರೊದಿಗೆ ಜಂಟಿ ಪರಿಶೀಲನಾ ಸಮಿತಿ ಕೆಲವು ಸಣ್ಣಪುಟ್ಟ ನಿಯಮ ಬದಲಾವಣೆಗಳೊಂದಿಗೆ ತನ್ನ ವರದಿಯನ್ನು ಸಲ್ಲಿಸಿದಂತಾಗಿದೆ. 
ಕೆಪಿಎಂಇ ತಿದ್ದುಪಡಿ ಕಾಯ್ದೆಗೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿರುವ ವೈದ್ಯಕೀಯ ಸಂಘ, ಹಲವು ದಿನಗಳಿಂದಲೂ ಪ್ರತಿಭಟನೆಗಳನ್ನು ನಡೆಸುತ್ತಿದೆ. ಬೆಳಗಾವಿಯ ಸುವರ್ಣಸೌಧದ ಮುಂದೆಯೂ ವೈದ್ಯರು ಪ್ರತಿಭಟನೆ ನಡೆಸುತ್ತಿದ್ದು, ಪ್ರತಿಭಟನಾನಿರತ ವೈದ್ಯರನ್ನು ನಿನ್ನೆಯಷ್ಟೇ ಆರೋಗ್ಯ ಸಚಿವ ಕೆ.ಆರ್. ರಮೇಶ್ ಕುಮಾರ್ ಅವರು ಭೇಟಿ ಮಾಡಿದ್ದಾರೆ. 
ಕೆಪಿಎಂಇ ತಿದ್ದುಪಡಿ ಕಾಯ್ದೆಗೆ ಸರ್ಕಾರ ಮಾಡುತ್ತಿರುವ ಸಣ್ಣಪುಟ್ಟ ಬದಲಾವಣೆಗಳಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ರಮೇಶ್ ಕುಮಾರ್ ಅವರು, ಕಾಯ್ದೆಯಲ್ಲಿ ಕೆಲ ಬದಲಾವಣೆಗಳನ್ನು ತರುವ ಬದಲಾಗಿ, ಸ್ವತಃ ಸ್ಥಾನದಿಂದಲೇ ಕೆಳಗೆ ಇಳಿಯುವುದು ಉತ್ತಮವೆಂದು ಹೇಳುತ್ತಿದ್ದಾರೆಂದು ತಿಳಿದುಬಂದಿದೆ. 
ಸೋಮವಾರವಷ್ಟೇ ವೈದ್ಯಕೀಯ ಸಂಘದವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ವೈದ್ಯರೊಂದಿಗೆ ಮಾತುಕತೆ ನಡೆಸಿದ ಬಳಿಕ ಸಚಿವರೊಂದಿಗೆ ಚರ್ಚೆ ನಡೆಸಿದ ಸಿದ್ದರಾಮಯ್ಯ ಅವರು ಕಾಯ್ದೆಗೆ ಸಣ್ಣಪುಟ್ಟ ತಿದ್ದುಪಡಿ ತರುವುದಾಗಿ ತಿಳಿಸಿದ್ದಾರೆ. ಈ ವೇಳೆ ಬದಲಾವಣೆಗಳಿಗೆ ರಮೇಶ್ ಕುಮಾರ್ ಅವರು ತಿರಸ್ಕರಿಸಿದ್ದಾರೆಂದು ಮೂಲಗಳು ತಿಳಿಸಿವೆ.
ಬಳಿಕ ಸಿದ್ದರಾಮಯ್ಯ ಅವರು ಹಿರಿಯ ಸಚಿವರನ್ನು ಭೇಟಿ ಮಾಡಿ ರಮೇಶ್ ಕುಮಾರ್ ಅವರ ನಿಲುವು ಕುರಿತಂತೆ ಚರ್ಚೆ ನಡೆಸಿದ್ದಾರೆ. ಬಳಿಕ ಬುಧವಾರ ವಿಧಾನಮಂಡಲದಲ್ಲಿ ಈ ಬಗ್ಗೆ ಚರ್ಚೆ ನಡೆಸಿ ಅಂತಿಮ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದ್ದಾರೆಂದು ತಿಳಿದುಬಂದಿದೆ. 
ಮೂಲಗಳ ಪ್ರಕಾರ ಸರ್ಕಾರದ ಈ ನಿರ್ಧಾರಕ್ಕೆ ಪಕ್ಷದಲ್ಲಿರುವ ಕೆಲ ಶಾಸಕರು ಹಾಗೂ ಪಕ್ಷದ ನಾಯಕರೇ ಅಸಮಾಧಾನವನ್ನು ವ್ಯಕ್ತಪಡಿಸಿದ್ದು, ಕಾಯ್ದೆಯಲ್ಲಿರುವ ಕೆಲ ವಿಚಾರಗಳ ಕುರಿತು ಅಸಮಾಧಾನವ ವ್ಯಕ್ತಪಡಿಸಿದ್ದಾರೆಂದು ತಿಳಿದುಬಂದಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com