ಬೆಂಗಳೂರು: ರಾಜ್ಯ ಸರ್ಕಾರ ಕರ್ನಾಟಕದ ಎಲ್ಲಾ ಗ್ರಾಮ ಪಂಚಾಯ್ತಿಗಳಿಗೆ ವೈಫೈ ಸೌಲಭ್ಯ ಕಲ್ಪಿಸುವ ಯೋಜನೆಗೆ ಜಾಲನೆ ನೀಡಿದ್ದು, ಈ ವರ್ಷ 2,500 ಗ್ರಾಮ ಪಂಚಾಯ್ತಿಗಳಿಗೆ ವೈಫೈ ಸೌಲಭ್ಯ ಕಲ್ಪಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ ಹೇಳಿದ್ದಾರೆ.
ಇಂದು ನಗರದಲ್ಲಿ ಬೆಂಗಳೂರು ತಂತ್ರಜ್ಞಾನ ಸಮ್ಮೇಳನ 2017 ಅನ್ನು ಉದ್ದೇಶಿಸಿ ಮಾತನಾಡಿದ ಸಿಎಂ, ಗ್ರಾಮ ಪಂಚಾಯ್ತಿಗಳಿಗೆ ವೈಫೈ ಸೌಲಭ್ಯ ಕಲ್ಪಿಸುವುದರಿಂದ ಡಿಜಿಟಲ್ ಯೋಜನೆಗೆ ಸಹಾಯವಾಗಲಿದೆ ಮತ್ತು ಪ್ರತಿ ನಗರ ಹಾಗೂ ಪಟ್ಟಣಗಳಲ್ಲಿರುವ ಉದ್ಯಮಿಗಳನ್ನು ತಲುಪಲು ಸಹಾಯವಾಗಲಿದೆ ಎಂದಿದ್ದಾರೆ.
ರಾಜ್ಯದಲ್ಲಿ ಒಟ್ಟು 4 ಸಾವಿರ ಗ್ರಾಮ ಪಂಚಾಯ್ತಿಗಳಿದ್ದು, ಮುಂದಿನ ದಿನಗಳಲ್ಲಿ ಈ ಎಲ್ಲಾ ಪಂಚಾಯ್ತಿಗಳಿಗೂ ವೈಫೈ ಸೌಲಭ್ಯ ಸಿಗಲಿದೆ. ರಾಜ್ಯ ಸರ್ಕಾರ ಮತ್ತು ಗ್ರಾಮ ಪಂಚಾಯಿತಿಗಳೇ ಇದರ ನಿರ್ವಹಣೆಯನ್ನು ನೋಡಿಕೊಳ್ಳಲಿದ್ದು, ಇದಕ್ಕಾಗಿ ಸರ್ಕಾರ ಪ್ರತಿ ತಿಂಗಳು ಎರಡೂವರೆ ಲಕ್ಷ ರು. ಖರ್ಚು ಮಾಡಲಿದೆ.
ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆ ನವೆಂಬರ್ 16ರಿಂದ 18ರವರೆಗೆ ‘ಬೆಂಗಳೂರು ತಂತ್ರಜ್ಞಾನ ಸಮ್ಮೇಳನ’ವನ್ನು ಆಯೋಜಿಸಿದೆ.