ಬೆಂಗಳೂರಿಗೆ ಶೀಘ್ರದಲ್ಲೇ ಬರಲಿದೆ ಹೈಪರ್‌ಲೂಪ್‌ ಸಾರಿಗೆ

ಜಗತ್ತಿನ ಅತಿ ವೇಗದ ಸಂಚಾರ ವ್ಯವಸ್ಥೆ ಹೈಪರ್ ಲೂಪ್ ಶೀಘ್ರದಲ್ಲೇ ಬೆಂಗಳೂರಿಗೂ ಬರಲಿದೆ.
ಹೈಪರ್‌ಲೂಪ್‌ ಯೋಜನೆ  ಸಾಂದರ್ಭಿಕ ಚಿತ್ರ
ಹೈಪರ್‌ಲೂಪ್‌ ಯೋಜನೆ ಸಾಂದರ್ಭಿಕ ಚಿತ್ರ
ಬೆಂಗಳೂರು: ಜಗತ್ತಿನ ಅತಿ ವೇಗದ ಸಂಚಾರ ವ್ಯವಸ್ಥೆ ಹೈಪರ್ ಲೂಪ್ ಶೀಘ್ರದಲ್ಲೇ ಬೆಂಗಳೂರಿಗೂ ಬರಲಿದೆ. ನಿನ್ನೆ ಬೆಂಗಳೂರಿನಲ್ಲಿ ಪ್ರಾರಂಬವಾದ ಟೆಕ್‌ ಸಮ್ಮಿಟ್‌ ನಲ್ಲಿ ರಾಜ್ಯ ಸರ್ಕಾರ ವರ್ಜಿನ್‌ ಹೈಪರ್‌ಲೂಪ್‌ ಸಂಸ್ಥೆಯೊಡನೆ ಒಪ್ಪಂದ ಒಂದಕ್ಕೆ ಸಹಿ ಹಾಕಿದೆ. ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರ ಇಂತಹಾ ಒಂದು ಒಪ್ಪಂದ ಮಾಡಿಕೊಂಡಿದ್ದು ಐಟಿ-ಬಿಟಿ ಮತ್ತು ಪ್ರವಾಸೋದ್ಯಮ ಸಚಿವ ಪ್ರಿಯಾಂಕ್‌ ಖರ್ಗೆಈ ಒಡಂಬಡಿಕೆಗೆ ಸಹಿ ಹಾಕಿದ್ದಾರೆ.
ಯೋಜನೆಯ ಅನುಸಾರ ಬೆಂಗಳೂರು, ತುಮಕೂರು, ಹುಬ್ಬಳ್ಳಿ-ಧಾರವಾಡ ಮತ್ತು ಹೊಸೂರುಗಳಲ್ಲಿ ಯೋಜನೆ ಜಾರಿಯ ಸಾಧಕ, ಬಾಧಕಗಳನ್ನು ಪರಿಶೀಲಿಸಲಾಗುತ್ತದೆ. ರಾಜ್ಯದ ಆರ್ಥಿಕತೆಗೆ ಇದರಿಂದೆಷ್ಟರ ಮಟ್ಟಿಗೆ ಲಾಭ ದೊರೆಯಲಿದೆ ಎನ್ನುವುದನ್ನು ಈ ವೇಳೆ ಗಮನಿಸಲಾಗುತ್ತದೆ.
ವಿಮಾನ ಪ್ರಯಾಣಕ್ಕಿಂತಲೂ ಹೆಚ್ಚು ವೇಗದ ಈ ಯೋಜನೆ ರಾಜ್ಯದಲ್ಲಿ ಜಾರಿಯಾದದ್ದೇ ಆದಲ್ಲಿ ಬೆಂಗಳೂರಿನಿಂದ ಹುಬ್ಬಳ್ಳಿಗೆ ಪ್ರಯಾಣದ ಅವಧಿ ಅರ್ಧ ತಾಸಿಗೆ ಇಳಿಯಲಿದೆ.ಎಲ್ಲವೂ ಸಸೂತ್ರವಾಗಿ ನಡೆದಲ್ಲಿ 2021ಕ್ಕೆ ಯೋಜನೆ  ಪ್ರಾರಂಭವಾಗಲಿದೆ.
"ಬೆಂಗಳೂರು ಐಟಿ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದೆ. ದೇಶದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಈ ನಗರದಲ್ಲಿ ಜಾಗತಿಕ ಪ್ರಾಮುಖ್ಯತೆ ಹೊಂದಿದ ಐಟಿ ಸಂಸ್ಥೆಗಳು ಕಾರ್ಯಾಚರಣೆ ನಡೆಸುತ್ತಿದೆ.  ಹೈಪರ್‌ಲೂಪ್‌ ನಂತಹಾ ತಂತ್ರಜ್ಞಾನ ರಾಜ್ಯಕ್ಕೆ ಸಿಕ್ಕಿದಲ್ಲಿ ರಾಜ್ಯ ಇನ್ನಷ್ಟು ಪ್ರಗತಿ ಸಾಧಿಸಲು ಅನುಕೂಲವಾಗಲಿದೆ." ಒಪ್ಪಂದಕ್ಕೆ ಸಹಿ ಮಾಡಿದ್ದ ಸಚಿವ  ಪ್ರಿಯಾಂಕ್‌ ಖರ್ಗೆ ಹೇಳಿದರು. 
ಹೈಪರ್‌ಲೂಪ್‌ ಯೋಜನೆ ಪರಿಚಯ
ವಿಶೇಷ ಕೊಳವೆಯೊಂದರಲ್ಲಿ ಪಾಡ್‌ ಎಂದು ಕರೆಯಲಾಗುವ ಪುಟ್ಟ ವಾಹನಗಳನ್ನು ಸಂಚರಿಸುವಂತೆ ಮಾಡುವುದು ಹೈಪರ್‌ಲೂಪ್‌ ಯೋಜನೆ. ಈ ಕೊಳವೆ ನೆಲದಿಂದ ಮೇಲಿದ್ದು  ಅಯಸ್ಕಾಂತೀಯ ಗುಣ ಹೊಂದಿರುತ್ತದೆ.ಈ ಕೊಳವೆಯೊಳಗೆ ಹೊರಗಿನಿಂದ ಗಾಳಿ ಸಂಚಾರವಿರುವುದಿಲ್ಲ. ಕೇವಲ ಕಾಂತೀಯ ಶಕ್ತಿಯಿಂದಲೇ ಪಾಡ್‌  ಗಳು ಚಲಿಸುತ್ತದೆ.
ವಿದೇಶಗಳಲ್ಲಿ ಈ ಯೋಜನೆ ಪ್ರಯೋಗವು ಇದಾಗಲೇ ಯಶಸ್ವಿಯಾಗಿದೆ. ಅಮೆರಿಕ, ಬ್ರಿಟನ್‌, ಕೆನಡಾ, ಯುಎಇ, ಫಿನ್ಲಂಡ್‌ ಗಳಲ್ಲಿ ಈ ಹೈ ಸ್ಪೀಡ್ ಯೋಜನೆ ಜಾರಿಯಾಗಲಿದೆ. ಇದೀಗ ಭಾರತದಲ್ಲಿಯೂ ಯೋಜನೆ ಪ್ರಾರಂಬಕ್ಕೆ ಮುನ್ನುಡಿ ಸಿಕ್ಕಿದೆ. ಬಾರತದಲ್ಲಿ ಬೆಂಗಳೂರು, ಹುಬ್ಬಳ್ಳಿ, ತುಮಕೂರು, ಹೊಸೂರು, ಮುಂಬೈ ಹಾಗೂ ಪುಣೆಯಲ್ಲಿ ಈ ಯೋಜನೆ ಪ್ರಾರಂಭಿಸಲು ಯೋಜನೆ ರೂಪಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com