ಮುಷ್ಕರ ಹಿಂಪಡೆಯುವಂತೆ ಖಾಸಗಿ ವೈದ್ಯರಿಗೆ ಹೈಕೋರ್ಟ್ ಆದೇಶ

ರಾಜ್ಯ ಸರ್ಕಾರದ ಉದ್ದೇಶಿತ ಖಾಸಗಿ ವೈದ್ಯಕೀಯ ಸಂಸ್ಥೆಗಳ ನಿಯಂತ್ರಣ(ಕೆಪಿಎಂಇ) ಕಾಯ್ದೆ ವಿರೋಧಿಸಿ ಮುಷ್ಕರ ನಡೆಸುತ್ತಿರುವ ಖಾಸಗಿ ಆಸ್ಪತ್ರೆಗಳ....
ಕರ್ನಾಟಕ ಹೈಕೋರ್ಟ್
ಕರ್ನಾಟಕ ಹೈಕೋರ್ಟ್
ಬೆಂಗಳೂರು: ರಾಜ್ಯ ಸರ್ಕಾರದ ಉದ್ದೇಶಿತ ಖಾಸಗಿ ವೈದ್ಯಕೀಯ ಸಂಸ್ಥೆಗಳ ನಿಯಂತ್ರಣ(ಕೆಪಿಎಂಇ) ಕಾಯ್ದೆ ವಿರೋಧಿಸಿ ಮುಷ್ಕರ ನಡೆಸುತ್ತಿರುವ ಖಾಸಗಿ ಆಸ್ಪತ್ರೆಗಳ ವೈದ್ಯರನ್ನು ಹೈಕೋರ್ಟ್ ಶುಕ್ರವಾರ ತೀವ್ರ ತರಾಟೆಗೆ ತೆಗೆದುಕೊಂಡಿದ್ದು, ಈ ಕೂಡಲೇ ಪ್ರತಿಭಟನೆ ಕೈಬಿಟ್ಟು ಕರ್ತವ್ಯಕ್ಕೆ ಹಾಜರಾಗುವಂತೆ ಖಾಸಗಿ ವೈದ್ಯಕೀಯ ಸಂಘಟನೆಗಳಿಗೆ ಆದೇಶಿಸಿದೆ.
ಜನರ ಸರಣಿ ಸಾವಿನ ಹೊರತಾಗಿಯೂ ಕೆಪಿಎಂಇ ಕಾಯ್ದೆ ವಿರುದ್ಧ ಖಾಸಗಿ ವೈದ್ಯರು ನಡೆಸುತ್ತಿರುವ ಮುಷ್ಕರ ಪ್ರಶ್ನಿಸಿ ಸಲ್ಲಿಸಲಾಗಿದ್ದ ಮೂರು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ಪೀಠ, ಬದುಕುವುದು ಪ್ರತಿಯೊಬ್ಬರ ಹಕ್ಕು. ವೈದ್ಯರಿಗೆ ಆಗಿರುವ ನಷ್ಟವನ್ನು ಭರಿಸಬಹುದು. ಆದರೆ ರೋಗಿಗಳಿಗೆ ಆಗಿರುವ ನಷ್ಟ ಭರಿಸಲು ಸಾಧ್ಯವೇ? ಎಂದು ಪ್ರಶ್ನಿಸಿದೆ.
ಸರ್ಕಾರದ ಪರ ಹಾಗೂ ಖಾಸಗಿ ವೈದ್ಯರ ಪರ ವಕೀಲರ ವಾದ ಆಲಿಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಚ್.ಜಿ.ರಮೇಶ್ ಹಾಗೂ ನ್ಯಾಯಮೂರ್ತಿ ಪಿ.ಎಸ್.ದಿನೇಶ್ ಕುಮಾರ್ ಅವರಿದ್ದ ವಿಭಾಗೀಯ ಪೀಠ, ‘ಮಸೂದೆ ಪ್ರಶ್ನಿಸಲು ಕಾನೂನು ಇದೆ, ಕೋರ್ಟ್ ಇದೆ, ಮಸೂದೆ ಮಂಡನೆ ಮಾಡುವ ಮುನ್ನ ಈ ರೀತಿ ಬೀದಿಗಿಳಿಯುವುದು ಎಷ್ಟು ಸರಿ? ಜನರ ಜೀವಗಳ ಜತೆ ಚೆಲ್ಲಾಟ ಆಡುತ್ತಿರುವ ನೀವು ನಾಗರಿಕರೆ? ನಿಮ್ಮ ಬಗ್ಗೆ ನಮಗೆ ಗೌರವ ಇದೆ ಅದನ್ನು ಉಳಿಸಿಕೊಳ್ಳಿ‌. ಕೂಡಲೆ ಪ್ರತಿಭಟನೆಯಿಂದ ಹಿಂದೆ ಸರಿಯಿರಿ’ಎಂದು ಖಡಕ್ ಎಚ್ಚರಿಕೆ ನೀಡಿ, ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿದ್ದಾರೆ.
ವೈದ್ಯರ ಬೀದಿ ಹೋರಾಟದ ಪರಿಣಾಮ ಇದೀಗ ಜನ ಸಾಮಾನ್ಯರ ಮೇಲಾಗಿದೆ. ವೈದ್ಯರಿಗೆ ಸಮಸ್ಯೆ ಇದ್ದರೆ ಕೋರ್ಟ್ ಗೆ ಬರಲಿ.. ಅದನ್ನು ಬಿಟ್ಟು ಮುಷ್ಕರ  ಮಾಡುವುದು ಸರಿಯಲ್ಲ. ಮುಷ್ಕರ ಕಾನೂನು ಬಾಹಿರ ಎಂಬುದು ವೈದ್ಯರಿಗೆ ತಿಳಿದಿರಲಿ. ವೈದ್ಯರು ವಿದ್ಯಾವಂತರಾಗಿದ್ದು ಜನ ಸಾಮಾನ್ಯರ ಪರಿಸ್ಥಿತಿ ಬಗ್ಗೆ  ಅರಿವಿರಬೇಕು. ಅಂತೆಯೇ ಸರ್ಕಾರ ಕೂಡ ಸಾರ್ವಜನಿಕರ ಸಾವಿಗೆ ಮೂಕ ಪ್ರೇಕ್ಷಕವಾಗಿರಬಾರದು ಎಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com