ರಾಜ್ಯ
ವಿಧಾನಸಭೆಯಲ್ಲಿ ಗಣಪತಿ ಗದ್ದಲ: ಸಿಎಂ, ಜಾರ್ಜ್ ರಾಜಿನಾಮೆಗೆ ಬಿಜೆಪಿ ಒತ್ತಾಯ
ಡಿವೈಎಸ್‌ಪಿ ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಬೆಂಗಳೂರು ಅಭಿವೃದ್ಧಿ ಸಚಿವ....
ಬೆಳಗಾವಿ: ಡಿವೈಎಸ್‌ಪಿ ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಅವರ ರಾಜಿನಾಮೆಗೆ ಒತ್ತಾಯಿಸಿ ಪ್ರತಿಪಕ್ಷ ಬಿಜೆಪಿ ಸೋಮವಾರ ವಿಧಾನಸಭೆಯಲ್ಲಿ ತೀವ್ರ ಕೋಲಾಹಲ ಸೃಷ್ಟಿಸಿತು.
ಡಿವೈಎಸ್ಪಿ ಗಣಪತಿ ಅವರು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪೋಸ್ಟ್‌ಮಾರ್ಟಂ ವರದಿ ನೀಡುವಂತೆ ಹಿರಿಯ ಪೊಲೀಸ್ ಅಧಿಕಾರಿಗಳು ವೈದ್ಯ ಶೈಲಜಾ ಅವರಿಗೆ ಒತ್ತಡ ಹೇರಿದ್ದಾರೆ ಎನ್ನುವುದು ಸಿಬಿಐ ತನಿಖೆಯಿಂದ ಬಹಿರಂಗವಾಗಿದೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿರುವುದನ್ನು ಪ್ರಸ್ತಾಪಿಸಿದ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಅವರು, ಈ ಸಂಬಂಧ ಸಿಎಂ ಸಿದ್ದರಾಮಯ್ಯ ಮತ್ತು ಸಚಿವ ಜಾರ್ಜ್ ರಾಜಿನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ಸಿಬಿಐ ತನಿಖೆಯಿಂದ ಸರ್ಕಾರ ನಿಲವು ಬಹಿರಂಗವಾಗಿದ್ದು, ಸರ್ಕಾರ ಕೆ.ಜೆ.ಜಾರ್ಜ್ ಬಗ್ಗೆ ಮೃದು ಧೋರಣೆ ತಳೆದಿದೆ. ಕೂಡಲೇ ಸಿಎಂ ಸಿದ್ದರಾಮಯ್ಯ ಮತ್ತು ಸಚಿವ ಕೆ.ಜೆ.ಜಾರ್ಜ್ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಬೇಕು ಎಂದು ಒತ್ತಾಯಿಸಿ ಬಿಜೆಪಿ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು.
ಮಾಧ್ಯಮಗಳಲ್ಲಿ ಬಂದ ವರದಿಗಳನ್ನು ನಿಜವೆಂದು ನಂಬುವುದು ಸಾಧ್ಯವಿಲ್ಲ. ತನಿಖೆ ಮುಗಿಯಲಿ. ತನಿಖೆ ಮುಗಿದ ನಂತರ ಸತ್ಯಾಸತ್ಯತೆ ಬಹಿರಂಗವಾಗಲಿದೆ ಎಂದು ಗೃಹ ಸಚಿವ ರಾಮಲಿಂಗಾ ರೆಡ್ಡಿ ಉತ್ತರಿಸಿದರು. ಈ ವೇಳೆ ರಾಮಲಿಂಗಾರೆಡ್ಡಿಗೆ ಸಾಥ್ ನೀಡಿದ ಕೆಲ ಕಾಂಗ್ರೆಸ್ ಶಾಸಕರು, ಬಿಜೆಪಿ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡುವುದನ್ನು ಬಿಟ್ಟು ಅನಗತ್ಯವಾಗಿ ರಾಜಕೀಯ ಗಿಮಿಕ್ಸ್ ಗಳನ್ನು ಮಾಡುತ್ತಿದೆ ಎಂದು ಆರೋಪಿಸಿದರು.