ಮಾತೃಪೂರ್ಣ ಯೋಜನೆ ಉದ್ಘಾಟಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ

ಗರ್ಭಿಣಿಯರು ಹಾಗೂ ಬಾಣಂತಿಯರಿಗೆ ಮಧ್ಯಾಹ್ನದ ಪೌಷ್ಠಿಕ ಬಿಸಿಯೂಟ ನೀಡುವ ಮಾತೃಪೂರ್ಣ....
ಮಾತೃಭೂಮಿ ಯೋಜನೆಯಲ್ಲಿ ಫಲಾನುಭವಿಗಳಿಗೆ ಆಹಾರ ವಿತರಿಸುತ್ತಿರುವುದು.
ಮಾತೃಭೂಮಿ ಯೋಜನೆಯಲ್ಲಿ ಫಲಾನುಭವಿಗಳಿಗೆ ಆಹಾರ ವಿತರಿಸುತ್ತಿರುವುದು.
ಬೆಂಗಳೂರು: ಗರ್ಭಿಣಿಯರು ಹಾಗೂ ಬಾಣಂತಿಯರಿಗೆ ಮಧ್ಯಾಹ್ನದ ಪೌಷ್ಠಿಕ ಬಿಸಿಯೂಟ ನೀಡುವ ಮಾತೃಪೂರ್ಣ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಗಳೂರಿನಲ್ಲಿಂದು ಚಾಲನೆ ನೀಡಿದರು.
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಏರ್ಪಡಿಸಿದ್ದ ಸಮಾರಂಭದಲ್ಲಿ ಯೋಜನೆ ಉದ್ಘಾಟಿಸಿದ ಮುಖ್ಯಮಂತ್ರಿಗಳು, ಗರ್ಭಿಣಿಯರು ಮತ್ತು ಬಾಣಂತಿಯರ ಆರೋಗ್ಯ ರಕ್ಷಣೆಗಾಗಿ ಇಲಾಖೆ ಜಾರಿಗೆ ತಂದಿರುವ ಕಾರ್ಯಕ್ರಮ ಉಪಕಾರಿಯಾಗಿದೆ ಎಂದರು.
ಈ ಯೋಜನೆ ಅನುಷ್ಠಾನಕ್ಕಾಗಿ 202 ಕೋಟಿ ರೂಪಾಯಿ ಮೀಸಲಿಡಲಾಗಿದೆ. 30 ಲಕ್ಷ ಫಲಾನುಭವಿಗಳಿಗೆ ಈ ಯೋಜನೆಯ ಲಾಭ ಸಿಗಲಿದೆ ಎಂದು ಹೇಳಿದರು. ರಾಜ್ಯದಲ್ಲಿ 65,919 ಅಂಗನವಾಡಿಗಳಿದ್ದು, ಗರ್ಭಿಣಿಯರು ಮತ್ತು ಬಾಣಂತಿಯರಿಗೆ ಮಧ್ಯಾಹ್ನದ ಬಿಸಿಯೂಟ ನೀಡಲಾಗುವುದು ಎಂದು ಅವರು ಹೇಳಿದರು.
ಗರ್ಭಿಣಿ ಮತ್ತು ಬಾಣಂತಿಯರಿಗೆ ಅನ್ನ, ಬೇಳೆಕಾಳು-ತರಕಾರಿಯಿಂದ ಕೂಡಿದ ಸಾರು, ಬೇಯಿಸಿದ ಮೊಟ್ಟೆ, ಕಡಲೆಬೀಜದ ಬರ್ಫಿ ಮತ್ತು 200ಎಂಎಲ್ ಹಾಲನ್ನು ಬಿಸಿಯೂಟವು ಒಳಗೊಂಡಿರಲಿದ್ದು ತಿಂಗಳಲ್ಲಿ 25 ದಿನ ಒದಗಿಸಲಾಗುವುದು.
ಗರ್ಭಿಣಿಯರು ಹೆಸರು ನೋಂದಾಯಿಸಿದ ದಿನದಿಂದ ಹೆರಿಗೆಯ ನಂತರದ 6 ತಿಂಗಳವರೆಗೆ ಬಿಸಿಯೂಟ ನೀಡಲಾಗುವುದು.ಮಹಿಳೆಯರಿಗೆ ದಿನಕ್ಕೆ ಬೇಕಾದ ಪ್ರೋಟಿನ್, ಕ್ಯಾಲ್ಸಿಯಂ ಕ್ಯಾಲರಿಗಳ ಶೇಕಡಾ 40ರಷ್ಟು ಭಾಗವನ್ನು ಯೋಜನೆಯಿಂದ ಪೂರೈಸಿದಂತಾಗುತ್ತದೆ. ಮಹಿಳೆ ಮತ್ತು ಮಕ್ಕಳಲ್ಲಿ ಅಪೌಷ್ಠಿಕತೆ, ರಕ್ತಹೀನತೆ ಹಾಗೂ ಕುಂಠಿತ ಬೆಳವಣಿಗೆ ಕಡಿಮೆಯಾಗಲಿದೆ.
ಕಬ್ಬಿಣ ಮತ್ತು ಪೋಲಿಕ್ ಆಮ್ಲ, ಕ್ಯಾಲ್ಸಿಯಂ, ಜಂತುಹುಳು ನಿವಾರಣೆ ಮಾತ್ರೆಗಳ ಸೇವನೆ ಕುರಿತು ಮಾಹಿತಿ ಮತ್ತು ನಿಯಮಿತವಾಗಿ ಗರ್ಭಿಣಿಯರ ತೂಕದ ನಿರ್ವಹಣೆಗೂ ಯೋಜನೆಯಡಿ ಒತ್ತು ನೀಡಲಾಗುವುದು.
ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಉಮಾಶ್ರೀ, ಹಿರಿಯ ಅಧಿಕಾರಿಗಳಾದ ಉಮಾಮಹದೇವನ್, ಡಾ. ಶಾಲಿನಿ ರಜನೀಶ್ ಮತ್ತಿತರರು ಉಪಸ್ಥಿತರಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com